*ವಿವಿಧ ಬೇಡಿಕೆಗಳ ಈಡೇರಿಕೆಗೆ ಕಿತ್ತೂರು ಕರ್ನಾಟಕ ಸೇನೆ ಆಗ್ರಹ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಿತ್ತೂರು ಕರ್ನಾಟಕ ಸೇನೆಯ ಮುಖಂಡರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಶನಿವಾರ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಗರ ಸೇರಿದಂತೆ ರಾಜ್ಯಾದ್ಯಂತ ಇತಿಹಾಸ ಪುರುಷನಾದ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿಯ ಪ್ರತಿಮೆ ದೊಡ್ದ ಪ್ರಮಾಣದಲ್ಲಿ 40 ರಿಂದ 60 ಅಡಿಯಷ್ಟು ಸ್ಥಾಪಿಸಬೇಕು, ಹಾಗೂ “ಬೆಳಗಾವಿ ರಾಣಿ ಪಾರ್ವತಿದೇವಿ ” ಕಾಲೇಜಿನ ಮುಂಭಾಗದಲ್ಲಿ ಮದಕರಿ ನಾಯಕರ ಪುತ್ಥಳಿಯ ಜೊತೆಗೆ ಹೆಸರಾಂತ ವೀರ ಪುರುಷರಾದ ಅಮಟೂರು ಬಾಳಪ್ಪ, ವೀರ ವನಿತೆ ಬೆಳವಡಿ ಮಲ್ಲಮ್ಮರವರ ಪುತ್ಥಳಿಗಳು ಪ್ರತಿಷ್ಠಾಪನೆಯಾಗಬೇಕು.
ಗಡಿಭಾಗದಲ್ಲಿ ನಾಡದ್ರೋಹಿಗಳಿಂದ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತಿದ್ದು, ಮೊದಲನೆಯವನಾದ ಶುಭಂ ಶೆಳಕೆಯನ್ನು ಬೆಳಗಾವಿಯಿಂದ ಶಾಶ್ವತವಾಗಿ ಗಡಿಪಾರು ಮಾಡಬೇಕು ಮತ್ತು ನಗರದಲ್ಲಿ ಶಾಂತಿ ನೆಮ್ಮದಿಯನ್ನು ಕಾಪಾಡಬೇಕು. ಸರಕಾರದ ಆದೇಶದಂತೆ ನಾಮಫಲಕಗಳಲ್ಲಿ ಶೇಕಡ 60 ರಷ್ಟು. ಕನ್ನಡ ಭಾಷೆ ಇರಬೇಕು. ಕನ್ನಡ ನೆಲ, ಜಲ, ಭಾಷೆಗಾಗಿ ಹೋರಾಟ ಮಾಡುವವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಹುನ್ನಾರ ನಡೆಯಬಾರದು ಎಂದು ಕನ್ನಡಿಗರು ಮತ್ತು ಹೋರಾಟಗಾರರಿಂದ ಸರ್ಕಾರಕ್ಕೆ ನೇರವಾದ ಎಚ್ಚರಿಕೆ ನೀಡಿದರು.
ನಗರದ ಬೈಲಹೊಂಗಲ ತಾಲೂಕಿನ ಮರಕುಂಬಿಯ ಸಕ್ಕರೆ ಕಾರ್ಖಾನೆಯಲ್ಲಿ 8 ಕಾರ್ಮಿಕರು ದುರ್ಮರಣ ಹೊಂದಿದ ಕುಟುಂಬಕ್ಕೆ ತಲಾ ರೂ. 1 ಕೋಟಿ ನೀಡುವುದಾಗಿ ಸೇನೆಯ ಮುಖ್ಯಸ್ಥರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸೇನೆಯ ರಾಜ್ಯಾಧ್ಯಕ್ಷ ಮಹೇಶ ಶೀಗಿಹಳ್ಳಿ, ಮಹೇಶ ಚನ್ನೀರುಪ್ಪಿ, ಈರೇಶ ನಾಯಕ, ಕಾರ್ತಿಕ ಪಾಟೀಲ್, ರಾಮ ಪೂಜಾರಿ, ಮಂಜು ತಳವಾರ, ಗಣೇಶ ನಾಯಕ, ಸುನೀಲ ಬಾಳಕ್ಕವರ ಮುಂತಾದವರು ಉಪಸ್ಥಿತರಿದ್ದರು.




