ಜಿಲ್ಲಾ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ಕಡಿಮೆ, ರಾಜಕೀಯ ಜಾಸ್ತಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಆದೇಶದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ನೇತೃತ್ವದ ಕಾಂಗ್ರೆಸ್ ಕಾಂಗ್ರೆಸ್ ನಿಯೋಗ ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದೆ.
ಶನಿವಾರ ಹುಕ್ಕೇರಿ, ಚಿಕ್ಕೋಡಿ ತಾಲೂಕುಗಳಿಗೆ ಭೇಟಿ ನೀಡಿದ್ದ ನಿಯೋಗ ಭಾನುವಾರ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಿಗೆ ಭೇಟಿ ನೀಡಲಿದೆ.
ಈ ವೇಳೆ ಹುಕ್ಕೇರಿಯಲ್ಲಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳಕರ್, ಸರಕಾರ ತಕ್ಷಣ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. 2019ರಲ್ಲಿ ಆದ ಹಾನಿಗಳಿಗೇ ಇನ್ನೂ ಪರಿಹಾರ ಸಿಕ್ಕಿಲ್ಲ. ಕಾಟಾಚಾರಕ್ಕೆ ಮುಖ್ಯಮಂತ್ರಿಗಳು ಬಂದು ಹೋಗುವುದು ಆಗಬಾರದು. ಜನರು ಸಂಕಷ್ಟದಲ್ಲಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಂಡು ಸ್ಪಂದಿಸುವ ಕೆಲಸ ಆಗಬೇಕು ಎಂದರು.
ಜಿಲ್ಲೆಯ ಮಂತ್ರಿಗಳು ತಮ್ಮ ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಅವರ ಕ್ಷೇತ್ರಕ್ಕೆ ಸೀಮಿತರಾಗಿದ್ದಾರೆ. 2019ರಲ್ಲಿ ಅವರದ್ದೇ ಇಲಾಖೆಯಾದ ಲೋಕೋಪಯೋಗಿ ಇಲಾಖೆಯ ಆಸ್ತಿಗಳಿಗೆ ಹಾನಿಯಾಗಿದ್ದರೂ, ಹತ್ತಾರು ಬಾರಿ ವಿನಂತಿಸಿದರೂ ಇನ್ನೂ ಪರಿಹಾರ ಬಿಡುಗಡೆ ಮಾಡಿಲ್ಲ. ಅವರಿಗೆ ಜವಾಬ್ದಾರಿ ಕಡಿಮೆ ಇದೆ, ರಾಜಕಾರಣ ಜಾಸ್ತಿ ಮಾಡ್ತಾರೆ ಎಂದು ಹೆಬ್ಬಾಳಕರ್ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಕುರಣಿ, ಹೆಬ್ಬಾಳ ಹಾಗೂ ಚಿಕ್ಕಲಗುಡ್ಡ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಸತತ 5-6 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಯಮಕನಮರಡಿ ಕ್ಷೇತ್ರದ ಕುರಣಿ, ಹೆಬ್ಬಾಳ ಹಾಗೂ ಚಿಕ್ಕಲಗುಡ್ಡ ಪ್ರದೇಶಗಳು ಮಳೆಯಿಂದಾಗಿ ಜಲಾವೃತಗೊಂಡು ರೈತರ ಅಪಾರ ಬೆಳೆಹಾನಿಯಾಗಿದ್ದು, ಕೆಲವು ಮನೆಗಳು ಬಿದ್ದು ನೆಲಸಮವಾಗಿವೆ, ಮಳೆಯಿಂದಾಗಿ ಮನೆಗಳನ್ನು ಕಳೆದುಕೊಂಡ ಕುಟುಂಬಸ್ಥರಿಗೆ ಸಾಂತ್ವನವನ್ನು ಹೇಳಿ, ಧೈರ್ಯವನ್ನು ತುಂಬುವ ಕೆಲಸವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಜನ ಪ್ರತಿನಿಧಿಗಳು, ಮಾಜಿ ಸಚಿವ ಎ.ಬಿ.ಪಾಟೀಲ, ಬೈಲಹೊಂಗಲ ಮತಕ್ಷೇತ್ರದ ಶಾಸಕ ಮಹಾಂತೇಶಣ್ಣ ಕೌಜಲಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ