ಸಮಸ್ಯೆಗೆ ಸ್ಪಂದಿಸಿದ ಡಾ. ಸೋನಾಲಿ ಸರ್ನೋಬತ್ ಅವರನ್ನು ಅಭಿನಂದಿಸಿದ ದೇವಲತ್ತಿ ಗ್ರಾಮಸ್ಥರು
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಮ್ಮ ಬಹುದಿನಗಳಿಂದ ಬಗೆಹರಿಯದ ಸಮಸ್ಯೆಗೆ ಸ್ಪಂದಿಸಿದ ಬಿಜೆಪಿ ಗ್ರಾಮೀಣ ಮಹಿಳಾ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಅವರನ್ನು ದೇವಲತ್ತಿ ಗ್ರಾಮಸ್ಥರು ಸತ್ಕರಿಸಿ ಅಭಿನಂದಿಸಿದರು.
ಖಾನಾಪುರ ತಾಲೂಕಿನ ದೇವಲತ್ತಿ ಗ್ರಾಮಕ್ಕೆ ವಿದ್ಯುತ್ ಸರಬರಾಜು ಮಾಡುವಾಗ ಆಗಾಗ ಮಾರ್ಗ ದುರಸ್ತಿ ಮಾಡಲಾಗುತ್ತಿತ್ತು. ಇದು ಇಲ್ಲಿನ ಜನತೆಗೆ ವಿಪರೀತ ತೊಂದರೆ ಉಂಟುಮಾಡಿತ್ತು. ಪದೇಪದೆ ವಿದ್ಯುತ್ ವ್ಯತ್ಯಯದಿಂದ ಈ ಭಾಗದ ವಿದ್ಯಾರ್ಥಿಗಳ ಅಧ್ಯಯನಕ್ಕೂ ತೊಡಕಾಗಿತ್ತು.
ಈ ಜನರ ಸಮಸ್ಯೆಗಳನ್ನು ಅರಿತ ಡಾ. ಸೋನಾಲಿ ಸರ್ನೋಬತ್ ಅವರು ಇಂಧನ ಸಚಿವ ಸುನೀಲ್ ಕುಮಾರ್ ಅವರಿಗೆ ಕಳೆದ ಡಿಸೆಂಬರ್ 27 ರಂದು ಭೇಟಿಯಾಗಿ ದೇವಲತ್ತಿ ಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಘರ್ಲಗುಂಜಿ ವಿದ್ಯುತ್ ವಾಹಕವನ್ನು ಲೋಕೋಲಿ – ಲಕ್ಕಬೈಲ್ ಮಾರ್ಗಕ್ಕೆ ಬದಲಾಯಿಸುವಂತೆ ಕೋರಿದ್ದರು. ಇದಕ್ಕೆ ಸ್ಪಂದಿಸಿರುವ ಸಚಿವರು ಈ ಕುರಿತು ಕೂಡಲೆ ಕ್ರಮಕ್ಕೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ನಾಲ್ಕು ಸಂಪರ್ಕ ಮಾರ್ಗಗಳ ಕಾಮಗಾರಿಗಾಗಿ ವಲಯ ಕಚೇರಿಗೆ 93.88 ಲಕ್ಷ ರೂ. ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು ದೇವಲತ್ತಿ ಗ್ರಾಮದಲ್ಲಿ ಸಂಪರ್ಕ ಮಾರ್ಗಕ್ಕೆ 16.52 ಲಕ್ಷ ರೂ. ಮಂಜೂರು ಮಾಡಿದ್ದಾರೆ. ಬೆಳಗಾವಿ ವಲಯದ ಮುಖ್ಯ ಅಭಿಯಂತರರಿಗೆ ಈ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡುವಂತೆ ಹೆಸ್ಕಾಂ ಮಹಾಪ್ರಬಂಧಕರಿಗೆ ಸಚಿವರು ಸೂಚಿಸಿದ್ದಾರೆ.
ತಮ್ಮ ಸಮಸ್ಯೆಗಳಿಗೆ ಸ್ಪಂದಿಸಿದ ಡಾ. ಸೋನಾಲಿ ಅವರನ್ನು ದೇವಲತ್ತಿ ಮತ್ತು ಕಾಮಶಿನಕೊಪ್ಪಲು ಗ್ರಾಮಸ್ಥರು ಸತ್ಕರಿಸಿದರು. ಈ ಸಂದರ್ಭದಲ್ಲಿ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಚನ್ನಬಸವ ದೇವರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಜೀವನಿ ಬಡಿಗೇರ್, ನಿರ್ಮಲಾ ಟಕ್ಕೇಕರ್, ಮೋಹನ ಕುಲಕರ್ಣಿ, ಬಸನಗೌಡ ಪಾಟೀಲ, ಎ.ಆರ್.ಎನ್.ಪಾಟೀಲ, ಕಾಳಪ್ಪ ಅಗಸಿಮನಿ, ಮಲ್ಲನಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಬಸವರಾಜ ಕಡೇಮನಿ, ಹನುಮಂತ ಟಕ್ಕರ್, ವಿಠ್ಠಲ ನಿಡ್ಗಲ್ಕರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ