ರದ್ದಾದ ವಿಮಾನಗಳ ಪುನಾರಂಭ: ಡಾ.ಪ್ರಭಾಕರ ಕೋರೆ ಪತ್ರಕ್ಕೆ ಕೇಂದ್ರ ಸಚಿವರ ಸ್ಪಂದನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಉಡಾನ್ ಯೋಜನೆ ಅಡಿ ೧೩ ಮಾರ್ಗಗಳಿಗೆ ಬೆಳಗಾವಿಯಿಂದ ದೇಶದ ವಿವಿಧ ನಗರಗಳ ನಡುವೆ ವಿಮಾನ ಸಂಚಾರ ಸೇವೆ ಪುನಾರಂಭಿಸುವಂತೆ ಕೋರಿ ಕೆಎಲ್‌ಇ ಕಾರ್ಯಾಧ್ಯಕ್ಷರೂ ಆಗಿರುವ ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ನಾಗರಿಕ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಮನವಿ ಮಾಡಿದ್ದರು,
ಈ ಮನವಿಗೆ ಸಚಿವರು ಸ್ಪಂದಿಸಿದ್ದು ಸಂಬಂಧಿಸಿದ ದೇಸಿಯ ವಿಮಾನಯಾನ ಸಂಸ್ಥೆಗಳು ಬೆಳಗಾವಿ ಜನತೆಯ ಬೇಡಿಕೆಗೆ ಅನುಗುಣವಾಗಿ ಪುನರ್ ಪ್ರಾರಂಭಿಸುವಂತೆ ಸೂಚಿಸಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣದಿಂದ ಉಡಾನ್ ಯೋಜನೆ ಹಿಂಪಡೆದ ಹಿನ್ನೆಲೆಯಲ್ಲಿ ಹಲವು ವಿಮಾನ ಸಂಸ್ಥೆಗಳು ವಿಮಾನಗಳ ಸಂಚಾರ ರದ್ದು ಪಡಿಸಿವೆ. ಬೆಂಗಳೂರು ಹೊರತು ಪಡಿಸಿದರೆ ರಾಜ್ಯದಲ್ಲಿ ಅತಿ ಹೆಚ್ಚು ವಿಮಾನ ಸಂಚಾರ ದಟ್ಟಣೆ ಹೊಂದಿರುವುದು ಬೆಳಗಾವಿ. ಇದರಿಂದ ದೇಶದ ವಿವಿಧ ಪ್ರದೇಶಗಳ ಸಂಪರ್ಕ ಅನುಮತಿ ನೀಡಿದ್ದರೂ ಸಂಚಾರ ದಟ್ಟಣೆ ಹೆಚ್ಚಾಗಿ ಪ್ರತಿದಿನ ೩೨ಕ್ಕೂ ಅಧಿಕ ವಿಮಾನಗಳು ಬೆಳಗಾವಿಯಿಂದ ಹಾರಾಟ ನಡೆಸುತ್ತಿದ್ದವು.
ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆ ಹೊಂದಿದ್ದ ದೆಹಲಿ, ಮುಂಬಯಿ ಮತ್ತು ಪುಣೆ ಮಾರ್ಗಗಳ ಸೇವೆ ಕೂಡ ಸ್ಥಗಿತಗೊಂಡಿರುವುದು ಬೆಳಗಾವಿ ಜಿಲ್ಲೆಯ ಬೆಳವಣಿಗೆಗೆ ಅಡ್ಡಿಯಾಗಿದೆ. ರಾಜ್ಯದ ಎರಡನೇ ರಾಜಧಾನಿ ಸ್ಥಾನಮಾನ ಹೊಂದಿರುವ ಬೆಳಗಾವಿಗೆ ಈ ಮೊದಲಿನಂತೆಯೇ ವಿಮಾನ ಸೇವೆಗಳನ್ನು ಮುಂದುವರಿಸುವ ಅಗತ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಬೇಕು ಎಂದು ಡಾ.ಪ್ರಭಾಕರ ಕೋರೆ ಅವರು ಪತ್ರದ ಮೂಲಕ ಮನವಿ ಮಾಡಿದ್ದರು.
ವಿಮಾನಯಾನವನ್ನು ಕಡಿತ ಮಾಡಿರುವುದರಿಂದ ಜಿಲ್ಲೆಯ ಆರ್ಥಿಕ ವಹಿವಾಟು ಸೇರಿದಂತೆ ಸಾರ್ವಜನಿಕ ಸೇವೆಗಳಿಗೆ ಪೆಟ್ಟು ಬೀಳುತ್ತಿದೆ. ಮೂರು ವಿಶ್ವವಿದ್ಯಾಲಯ, ಅತ್ಯುನ್ನತ ಆರೋಗ್ಯ ಸೇವಾ ಸಂಸ್ಥೆ ಜತೆಗೆ ವಿಶ್ವಮಾನ್ಯತೆಯ ಪೌಂಡಿಕ್ಲಸ್ಟರ್, ಹೈಡ್ರಾಲಿಕ್ಸ್ ವೈಮಾನಿಕ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬೆಳಗಾವಿಯ ಕೈಗಾರಿಕಾ ವಲಯ ಸೇರಿದಂತೆ ಸಾರ್ವಜನಿಕ ಸೇವಾ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿದಂತಾಗಿವೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.
ಈ ಮನವಿಗೆ ಸ್ಪಂದಿಸಿರುವ ವಿಮಾನಯಾನ ಸಚಿವರು ಡಾ.ಪ್ರಭಾಕರ ಕೋರೆಯವರೆಗೆ ಪತ್ರ ಬರೆಯುವ ಮೂಲಕ ಬೇಡಿಕೆಗೆ ಅನುಗುಣವಾಗಿ ನಿರ್ದಿಷ್ಟ ಸ್ಥಳಗಳಿಗೆ ವಿಮಾನ ಸೇವೆಗಳನ್ನು ಒದಗಿಸುವುದು ವಿಮಾನಯಾನ ನಿರ್ವಾಹಕರಿಗೆ ಬಿಟ್ಟದ್ದು. ಆದರೂ ಬೆಳಗಾವಿಗೆ ದೇಶೀಯ ವಿಮಾನಯಾನ ಸಂಸ್ಥೆಗಳು ಈ ಮೊದಲಿನಂತೆ ಸೇವೆ ನೀಡುವಂತೆ ಕೋರಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ