Belagavi NewsBelgaum NewsKannada NewsKarnataka NewsLatest

ಕಾಣದ ಕೈಗಳನ್ನು ಶೀಘ್ರ ಬಹಿರಂಗ ಪಡಿಸುತ್ತೇನೆ: ಜಗದೀಶ್ ಶೆಟ್ಟರ್ ಹೊಸ ಬಾಂಬ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಂದೇ ಭಾರತ್ ರೈಲು ಧಾರವಾಡ ದಾಟಿ ಹುಬ್ಬಳ್ಳಿಗೆ ಬಾರದಂತೆ ತಡೆದಿರುವ ಕಾಣದ ಕೈಗಳನ್ನು ಶೀಘ್ರವೇ ಬಹಿರಗಪಡಿಸುವುದಾಗಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಳಗಾವಿಯಲ್ಲಿ ವಿಜಯ ಕರ್ನಾಟಕ ಭಾನುವಾರ ಸಂಘಟಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಣೆಯಿಂದ ಹೊರಟ ರೈಲು ಧಾರವಾಡ-ಹುಬ್ಬಳ್ಳಿಗೆ ಹೋರಗಲು ತಾಂತ್ರಿಕ ಸಮಸ್ಯೆ ಇಲ್ಲ. ಆದರೆ ಧಾರವಾಡದವರೆಗೆ ಬರುವ ರೈಲು ಬೆಳಗಾವಿಗೆ ಬರಲು ತಾಂತ್ರಿಕ ಸಮಸ್ಯೆ ಇದೆ ಎಂದರೆ ಏನರ್ಥ? ಎಂದು ಪ್ರಶ್ನಿಸಿದರು.

ವಂದೇ ಭಾರತ ರೈಲನ್ನು ಬೆಳಗಾವಿವರೆಗೆ ತರಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಕಾಣದ ಕೈಗಳು ಇದಕ್ಕೆ ಅಡ್ಡಿಯಾಗಿವೆ. ಇದನ್ನು ಶೀಘ್ರವೇ ಬಹಿರಂಗಪಡಿಸುವ ಕಾಲ ಬರಲಿದೆ ಎಂದು ಎಚ್ಚರಿಸಿದರು.

ವಂದೇ ಭಾರತ ರೈಲನ್ನು ಬೆಳಗಾವಿವರೆಗೆ ಓಡಿಸಲು 2023ರಲ್ಲಿ ಆದೇಶ ಕೂಡ ಆಗಿತ್ತು. ಈ ಕುರಿತು ಕೇಂದ್ರ ರೈಲ್ವೆ ಸಚಿವರೊಂದಿಗೆ ಮಾತನಾಡಿದ್ದೇನೆ. ಅವರೂ ಒಪ್ಪಿಕೊಂಡಿದ್ದಾರೆ. ಆದರೂ ರೈಲು ಮಾತ್ರ ಬರುತ್ತಿಲ್ಲ. ಇದಕ್ಕೆ ಅಡ್ಡಿಯಾದವರ ಹೆಸರು ಬಹಿರಂಗ ಪಡಿಸುವ ಕಾಲ ಬರಲಿದೆ. ಅಗತ್ಯವಾದರೆ ಹೋರಾಟ ಕೂಡ ಮಾಡಲಾಗುವುದು ಎಂದೂ ಅವರು ಹೇಳಿದರು.

ಬೆಳಗಾವಿ – ಹುಬ್ಬಳ್ಳಿ ಕೂಡ ರದ್ದಾಗಿದೆ. ವಿಮಾನ ಪುನಾರಂಭಿಸಲು ಪ್ರಯತ್ನ ನಡೆದಿದೆ. ಆದರೆ ವಿಮಾನಯಾನ ಕಂಪನಿಯವರು ಇಲ್ಲದ ಸಬೂಬು ಹೇಳುತ್ತಿದ್ದಾರೆ. ವಿಮಾನದ ಲೀಸ್ ಅವದಿ ಮುಗಿದಿದ್ದರಿಂದ ಈ ಸಮಸ್ಯೆಯಾಗಿದೆ ಎಂದು ಸಂಸ್ಥೆ ಹೇಳುತ್ತಿದೆ. ಯಾವುದೇ ಕಾರಣದಿಂದ ಡಿಸೆಂಬರ್ ಮೊದಲು ಪುನಾರಂಭಿಸುವಂತೆ ಹೇಳಿದ್ದೇನೆ. ಅಂತಹ ಭರವಸೆ ಸಿಕ್ಕಿದೆ ಎಂದು ಶೆಟ್ಟರ್ ತಿಳಿಸಿದರು.

ಉಡಾನ್ ಯೋಜನೆಯನ್ನು ಇನ್ನೂ 10 ವರ್ಷ ಮುಂದುವರಿಸುವ ಪ್ರಯತ್ನ ನಡೆಯುತ್ತಿದೆ. ಅದಾದರೆ ಬೆಳಗಾವಿಯಿಂದ ಇನ್ನು ಹತ್ತಾರು ನಗರಗಳಿಗೆ ಸಂಪರ್ಕ ಸಾಧ್ಯವಾಗಲಿದೆ ಎಂದರು. ಬೆಳಗಾವಿಯ 3ನೇ ರೈಲ್ವೆ ಗೇಟ್ ಓವರ್ ಬ್ರಿಜ್ ವಿಸ್ತರಣೆ, ಒಂದು ಮತ್ತು 2ನೇ ಗೇಟ್ ಓವರ್ ಬ್ರಿಜ್ ನಿರ್ಮಾಣ ಕಾರ್ಯಕ್ಕೆ ಸಹ ಪ್ರಯತ್ನ ನಡೆಸುತ್ತಿದ್ದೇನೆ ಎಂದು ಅವರು ಹೇಳಿದರು.

ಬೆಳಗಾವಿಯ ರಿಂಗ್ ರಸ್ತೆ ಮತ್ತು ಬೈ ಪಾಸ್ ರಸ್ತೆಗೆ ಭೂ ಸ್ವಾಧೀನ ಕಾರ್ಯ ವಿಳಂಬವಾಗುತ್ತಿದೆ. ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದೇನೆ. ಕಿತ್ತೂರಿನಲ್ಲಿ ಕೈಗಾರಿಕೆಗಳಿಗಾಗಿ 500 ಎಕರೆ ಜಮೀನು ಕಾಯ್ದಿರಿಸಿದ್ದರೂ ಅದಕ್ಕೆ ಸಪಂರ್ಕಿಸುವ ಜಮೀನಿನ ವ್ಯಾಜ್ಯದಿಂದಾಗಿ ಸಮಸ್ಯೆಯಾಗಿದೆ. ಆದಷ್ಟು ಬೇಗ ವ್ಯಾಜ್ಯ ಬಗೆಹರಿಸಲಾಗುವುದು ಎಂದೂ ಶೆಟ್ಟರ್ ತಿಳಿಸಿದರು.

ರಾಜಕಾರಣ ಬಿಟ್ಟು ಎಲ್ಲ ಪಕ್ಷದವರೂ ಸೇರಿ ಬೆಳಗಾವಿಯ ಅಭಿವೃದ್ಧಿ ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button