Belagavi NewsBelgaum NewsCrimeKannada NewsKarnataka NewsNational

*ಶ್ರೀಮಂತ ವ್ಯಕ್ತಿಗಳೆ ಟಾರ್ಗೆಟ್: ಫ್ಯಾಶನ್ ಡಿಸೈನರ್ ಬೆಳಗಾವಿ ಪೊಲೀಸರ ಬಲೆಗೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್  ನಡೆಸುತ್ತಿದ್ದ ಫ್ಯಾಶನ್ ಡಿಸೈನರ್ ಮಹಿಳೆಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಮೂಲದ ದೀಪಾ ಅವಟಗಿ (33) ಬಂಧಿತ ಆರೋಪಿಯಾಗಿದ್ದು, ಆಕೆಯ ಸ್ನೇಹಿತ ಶಿವಾನಂದ ಮಠಪತಿ ಪರಾರಿಯಾಗಿದ್ದಾನೆ. ಶಿವಾನಂದನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿವಾಸಿಯಾಗಿದ್ದು ಶ್ರೀಮಂತ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ದೀಪಾಗೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.

ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಮೂಲಕ ಶ್ರೀಮಂತ ವ್ಯಕ್ತಿಗಳೊಂದಿಗೆ ಪರಿಚಯ ಬೆಳೆಸಿ ಅವರನ್ನು ದೀಪಾ ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು. ಬಳಿಕ ಅಶ್ಲೀಲ ಚಾಟ್ ನಡೆಸಿ, ಬೆಳಗಾವಿ ನಗರದ ಲಾಡ್ಜ್‌ಗೆ ಭೇಟಿ ನೀಡುವಂತೆ ಆಹ್ವಾನಿಸುತ್ತಿದ್ದಳು. ಲಾಡ್ಜ್‌ಗೆ ಬಂದ ವ್ಯಕ್ತಿಗೆ ಸ್ನಾನ ಮಾಡಿ ಬರಲು ಹೇಳಿ, ಆತ ಬಾತ್‌ರೂಮ್‌ಗೆ ಹೋದ ತಕ್ಷಣ ಹೊರಗಿನಿಂದ ಬಾಗಿಲು ಹಾಕಿ ಲಾಕ್ ಮಾಡುತ್ತಿದ್ದಳು. ನಂತರ ಆತನ ಬಳಿ ಇದ್ದ ಮೊಬೈಲ್, ಹಣ ಹಾಗೂ ಕಾರಿನ ಕೀಲಿಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದಳು.

ಈ ಘಟನೆಗಳ ಕೆಲವು ದೃಶ್ಯಗಳು ಲಾಡ್ಜ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ ಬಾತ್‌ರೂಮ್‌ನಲ್ಲಿ ಸಿಲುಕಿದ್ದ ವ್ಯಕ್ತಿಗೆ ಬೇರೆ ಸಂಖ್ಯೆಯಿಂದ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟು, ಹಣ ಕೊಡದಿದ್ದರೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Home add -Advt

ಈ ಕುರಿತು ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸೆಕ್ಟ‌ರ್ ಪರಶುರಾಮ ಪೂಜೇರಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.

ಆರೋಪಿ ದೀಪಾಳಿಂದ ಒಟ್ಟು 32. 86 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇದರಲ್ಲಿ ಒಂದು ಫಾರ್ಚುನರ್ ಕಾರು, ಒಂದು ಮಾರುತಿ ಸುಜುಕಿ ಎಸ್‌-ಕ್ರಾಸ್ ಕಾರು, 11 ಮೊಬೈಲ್ ಫೋನ್‌ಗಳು, ಒಂದು ಟ್ಯಾಬ್, ಒಂದು ಡೊಂಗಲ್, ಮೂರು ಕಾರಿನ ಕೀಗಳು ಹಾಗೂ 14 ಸಾವಿರ ರೂಪಾಯಿ ನಗದು ಸೇರಿವೆ. ಪ್ರಕರಣದ ತನಿಖೆಯನ್ನು ಟಿಳಕವಾಡಿ ಪೊಲೀಸರು ಮುಂದುವರೆಸಿದ್ದಾರೆ.

Related Articles

Back to top button