
ಪ್ರಗತಿವಾಹಿನಿ ಸುದ್ದಿ, ದಾವಣಗೆರೆ: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಸೇತುವೆಯಿಂದ ಜಿಗಿದ ಮಾಹಿತಿ ಹಕ್ಕು ಹೋರಾಟಗಾರರೊಬ್ಬರು ಸಾವು ಕಂಡಿದ್ದಾರೆ.
ತಾಲೂಕಿನ ತೋಳಹುಣಸೆ ಬಳಿಯ ಸೇತುವೆ ಬಳಿ ನಡೆದಿದೆ. ಹರೀಶ್ ಹಳ್ಳಿ (40) ಮೃತರು. ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡ ಆರೋಪದಡಿ ದಾಖಲಾದ ಪ್ರಕರಣದಲ್ಲಿ ಪೊಲೀಸರು ಹರೀಶ್ ಅವರನ್ನು ಅವರ ಪತ್ನಿಯ ಊರಾದ ಚನ್ನಗಿರಿಯ ಕಾಕನೂರ ಗ್ರಾಮದಲ್ಲಿ ಬಂಧಿಸಿ ಜೀಪ್ ನಲ್ಲಿ ಕರೆ ತರುತ್ತಿದ್ದರು.
ಬೆಳಗಿನಜಾವ 2.30ರ ಸುಮಾರಿಗೆ ಸೇತುವೆ ಬಳಿ ಬಂದಾಗ ಹರೀಶ್ ಜೀಪ್ ನಿಂದ ಹಾರಿ ಪೊಲೀಸರಿಂದ ತಪ್ಪಿಸಿಕೊಂಡು ಸೇತುವೆಯಿಂದ ಜಿಗಿದಿದ್ದರು. ಗಂಭೀರ ಗಾಯಗೊಂಡ ಹರೀಶ್ ಅವರನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಗಾಂಧಿನಗರ ಠಾಣೆಯ ಎಸ್ ಐ ಹಾಗೂ ಇಬ್ಬರು ಪೇದೆಗಳು ಹರೀಶ್ ಅವರ ಸಾವಿಗೆ ಕಾರಣರಾಗಿದ್ದಾರೆ ಎಂದು ಅವರ ಕುಟುಂಬದವರು ಹಾಗೂ ಸ್ನೇಹಿತರು ಆರೋಪಿಸಿದ್ದಾರೆ. ಸ್ಥಳಕ್ಕೆ ದಾವಣಗೆರೆ ಎಸ್ಪಿ ಡಾ.ಕೆ.ಅರುಣ್ ಭೇಟಿ ನೀಡಿ ಪರಿಶೀಲಿಸಿದ್ದು ತನಿಖೆ ಮುಂದುವರಿದಿದೆ.