
ಅಪಾಯಮಟ್ಟ ಮೀರಿ ಹರಿಯುತ್ತಿರುವ ನದಿಗಳು

ಪ್ರಗತಿವಾಹಿನಿ ಸುದ್ದಿ, ಮಾಂಜರಿ –
ಪಕ್ಕದ ಮಹಾರಾಷ್ಟ್ರದ ಘಟ್ಟ ಪ್ರದೇಶ, ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣಾ, ವೇಧಗಂಗಾ, ದೂಧಗಂಗಾ, ಪಂಚಗಂಗಾ ನದಿಗಳು ಆಪಾಯಮಟ್ಟ ಮೀರಿ ಹರಿಯುತ್ತಿವೆ. ನದಿಯಲ್ಲಿ ನೀರಿನ ಮಟ್ಟ ಗಂಟೆಯಿಂದ ಗಂಟೆಗೆ ಹೆಚ್ಚಾಗುತ್ತಿದೆ.
ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ೧೨೯೪೧೦ ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದಾಗಿ ಚಿಕ್ಕೋಡಿ ತಾಲೂಕಿನ ಕೆಳಹಂತದ ೫ ಸೇತುವೆಗಳಾದ ಕಲ್ಲೋಳ-ಯಡೂರ, ಕಾರದಗಾ-ಭೋಜ, ಭೋಜವಾಡಿ-ಕುನ್ನೂರ, ಜತ್ರಾಟ-ಭಿವಶಿ, ಮಲಿಕವಾಡ-ದತ್ತವಾಡ ನೀರಿನಲ್ಲಿ ಮುಳ್ಗಡೆಯಾಗಿದೆ. ಸೇತುವೆಗಳ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಾ ಇದೆ. ಕಳೆದ ಬಾರಿ ಕೃಷ್ಣಾ ನದಿಗೆ ಪ್ರವಾಹ ಬಂದು ಕೋಟ್ಯಾಂತರ ರು ಮೌಲ್ಯದ ಆಸ್ತಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ರೈತರಿಗೆ ಕಣ್ಣಿರು ತರಿಸಿದ ಕೃಷ್ಣಾ ನದಿ ಇದೀಗ ಮತ್ತೆ ಭೋರ್ಗರೆತದಿಂದಾಗಿ ನದಿ ತೀರದ ಜನರು ಕಣ್ಣಿರು ಇಡುತ್ತಾ ಇದ್ದಾರೆ.
ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿರುವ ಬೆಳಗಾವಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೋಮ್ಮನಹಳ್ಳಿ ಅವರು ಆದೇಶಕ್ಕೆ ಮಾಂಜರಿ ಗ್ರಾಮಸ್ಥ ಸಿದ್ದಾರ್ಥ ಗಾಯಗೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ನದಿ ತೀರದ ಜನರಿಗೆ ಸುರಕ್ಷಿತವಾಗಿ ಇರಲು ಯಾವುದೆ ಸ್ಥಳ ನೀಡಿಲ್ಲ. ಆದರೆ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರವಾಹ ಭೀತಿ:
ನದಿಗಳಲ್ಲಿ ನೀರು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿರುವುದರಿಂದ ಉಪವಿಭಾಗಾಧಿಕಾರಿ ರವಿಂದ್ರ ಕರಲಿಂಗನವರ, ತಹಶೀಲ್ದಾರ ಡಾ.ಸಂತೋಷ ಬಿರಾದಾರ ಅವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಪರಿಶೀಲನೆ ನಡೆಸಿದರು. ನದಿ ತೀರದ ಜನರನ್ನು ಸುರಕ್ಷಿತವಾದ ಸ್ಥಳಗಳಿಗೆ ತೆರಳುವಂತೆ ಅವರು ಜನರ ಮನವೊಲಿಸುವ ಕಾರ್ಯ ಮಾಡುತ್ತಿದ್ದಾರೆ.
ಭದ್ರತಾ ಸಿಬ್ಬಂದಿ ನಿಯೋಜನೆ:
ನದಿಗಳ ನೀರಿನ ಮಟ್ಟ ಹೆಚ್ಚಾಗುತ್ತಿರುವದರಿಂದ ಮುಂಜಾಗೃತ ಕ್ರಮವಾಗಿ ೩ ಎಸ್‌ಡಿ ಆರ್ ಎಫ್,೪ ಎನ್ ಡಿ ಆರ್ ಎಫ್ ತುಕಡಿ ಕರೆಸಲಾಗಿದೆ. ೧೬೫ ಕ್ಕೂ ಹೆಚ್ಚು ಅಗ್ನಿಶಾಮ ದಳ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ನದಿ ತೀರದಲ್ಲಿ ಯಾಂತ್ರಿಕ ದೋಣಿಗಳನ್ನು ತರಿಸಲಾಗಿದೆ.
ಪ್ರವಾಹ ತಗ್ಗಿಸಲು ಕ್ರಮ:
ಪ್ರವಾಹ ಬಾರದಂತೆ ತಡೆಯುವದಕ್ಕಾಗಿ ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೆಜದಿಂದ ೧ಲಕ್ಷ ೬ ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಹಿಪ್ಪರಗಿ ಬ್ಯಾರೇಜ್ ೬ ಟಿಎಂಸಿ ಸಾಮಾರ್ಥ್ಯದ ನೀರು ಸಂಗ್ರಹ ಹೊಂದಿದೆ.ಆಲಮಟ್ಟಿಯಿಂದ ಸಹ ೧೮೫೦೦೦ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.
ನದಿ ತೀರದ ಭೂಮಿ ಕೊರತೆ:
ಕೃಷ್ಣಾ ನದಿ ನೀರಿನ ಹರಿವಿನ ವೇಗದಲ್ಲಿ ಇರುವದರಿಂದ ನದಿ ತೀರದ ಇಕ್ಕೇಲಗಳಲ್ಲಿ ಕೊಚ್ಚಿ ಹೋಗುತ್ತಿರುವ ಮಣ್ಣು.ಇದರಿಂದಾಗಿ ನದಿ ತೀರದ ಕೃಷ್ಣಾ ನದಿ ಇಕ್ಕೆಲಗಳ ರೈತರು ಜಮೀನು ಕಳೆದುಕೊಂಡು ಕಂಗಲಾಗುವ ಸಾಧ್ಯತೆಯಿದೆ ಎಂದು ಕೃಷಿಕ ಕುಮಾರ ಆಸಂಗಿ ಅವರು ಅತಂಕ ವ್ಯಕ್ತಪಡಿಸಿದ್ದಾರೆ. ಕಳೆದ ತಿಂಗಳು ಬಂದ ಪ್ರವಾಹದ ಸೆಳೆತಕ್ಕೆ ಸಾವಿರಾರು ಜನರು ಕೃಷಿ ಭೂಮಿ ಕಳೆದುಕೊಂಡು ಕಂಗಾಲಾಗಿದ್ದಾರೆ. ನದಿ ತೀರದಲ್ಲಿನ ಬಿದಿರು,ದೊಡ್ಡದಾದರ ಮರಗಳು ಕೊಚ್ಚಿ ಹೋಗತ್ತಾ ಇವೆ. ಇದೀಗ ಉಕ್ಕಿ ಹರಿಯುತ್ತಾ ಇರುವ ಕೃಷ್ಣಾ ನದಿಯಿಂದಾಗಿ ಜನರಲ್ಲಿ ನಡುಕು ಶುರುವಾಗಿದೆ.
ಮಹಾರಾಷ್ಟ್ರದ ಮಳೆ ವಿವರ
ಕೋಯ್ನಾ- ೮೬ ಮಿ.ಮೀ, ನವಜಾ-೧೨೧ ಮಿ.ಮೀ, ಮಹಾಬಲೇಶ್ವರ-೭೫ ಮಿ.ಮೀ,ವಾರಣಾ ೧೧೪ ಮಿ.ಮೀಟರ್‌ನಷ್ಟು ಮಳೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ