ಪ್ರಗತಿವಾಹಿನಿ ಸುದ್ದಿ, ಖಾನಾಪುರ:
ತಾಲ್ಲೂಕಿನ ಓಲಮನಿ ಗ್ರಾಮದ ಬಳಿ ಜಾಂಬೋಟಿ-ಜತ್ತ ರಾಜ್ಯ ಹೆದ್ದಾರಿಯಲ್ಲಿ
ರಸ್ತೆ ಪಕ್ಕದ ಮರವೊಂದು ರಸ್ತೆಯ ಮೇಲೆ ಬಿದ್ದ ಪರಿಣಾಮ ಶನಿವಾರ ಮುಂಜಾನೆ ಮೂರು
ಗಂಟೆಗಳ ಕಾಲ ಗೋವಾ-ಕರ್ನಾಟಕ ನಡುವೆ ರಸ್ತೆ ಸಂಚಾರ ಸ್ಥಗಿತಗೊಂಡು ವಾಹನ ಸವಾರರು
ಮತ್ತು ಪ್ರಯಾಣಿಕರು ಪರದಾಡಿದರು.
ರಾಜ್ಯ ಹೆದ್ದಾರಿಯಾದ ಈ ರಸ್ತೆಯ ನಡುವೆ ಮರ ಬಿದ್ದ ಪರಿಣಾಮ ಈ ರಸ್ತೆಯ ಎರಡೂ
ಬದಿಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮುಳ್ಳಿನ ಗಿಡ ರಸ್ತೆ ಮಧ್ಯ
ಬಿದ್ದಿದ್ದರಿಂದ ಅದನ್ನು ತೆರವುಗೊಳಿಸಲು ಕಷ್ಟವಾಗಿತ್ತು. ಪರಿಸ್ಥಿತಿಯ
ಗಂಭೀರತೆಯನ್ನು ಅರಿತ ಬೆಂಗಳೂರಿನಿಂದ ಗೋವಾದತ್ತ ಸಾಗುತ್ತಿದ್ದ ಟೂರಿಸ್ಟ್ ಬಸ್ ವೊಂದರ
ಪ್ರಯಾಣಿಕರು ಮತ್ತು ಕೆಲ ವಾಹನಸವಾರರು ಟೂರಿಸ್ಟ್ ಬಸ್ಸಿನಲ್ಲಿದ್ದ ಬೆಡ್ ಶೀಟುಗಳನ್ನು
ಸಂಗ್ರಹಿಸಿ ಅವುಗಳನ್ನೇ ಹೆಣೆದು ಹಗ್ಗದ ರೂಪದಲ್ಲಿ ಮಾರ್ಪಡಿಸಿ ಹಗ್ಗದ ಸಹಾಯದಿಂದ
ಮುಳ್ಳಿನ ಗಿಡದ ಕಂಟಿಗಳನ್ನು ಮತ್ತು ಗಿಡದ ಕಾಂಡವನ್ನು ರಸ್ತೆಯಿಂದ ತೆರವುಗೊಳಿಸಿದರು.
ಸತತವಾಗಿ ಎರಡು ಗಂಟೆಗಳ ಕಾಲ ಐವತ್ತಕ್ಕೂ ಹೆಚ್ಚು ಜನರು ಸೇರಿ ನಡೆಸಿದ ವಿಶೇಷ
ಕಾರ್ಯಾಚರಣೆಯ ಫಲವಾಗಿ ರಸ್ತೆಯ ನಡುವೆ ಇದ್ದ ಮರವನ್ನು ಪಕ್ಕಕ್ಕೆ ಸರಿಸಿ ವಾಹನಗಳ
ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಶುಕ್ರವಾರವೂ ಇದೇ ರಸ್ತೆಯ ನಡುವೆ
ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಸತತ 6 ಗಂಟೆಗಳ ಕಾಲ ರಸ್ತೆ ಸಂಚಾರ
ಸ್ಥಗಿತಗೊಂಡಿತ್ತು.
ಕರ್ನಾಟಕ-ಗೋವಾ ಸಂಪರ್ಕಿಸುವ ರಾಮನಗರ-ಅನಮೋಡ ರಸ್ತೆ ಸಧ್ಯ ದುರಸ್ತಿಯಲ್ಲಿರುವ ಕಾರಣ
ಖಾನಾಪುರ-ಜಾಂಬೋಟಿ ರಸ್ತೆ ಹುಬ್ಬಳ್ಳಿ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದಿಂದ ಗೋವಾ
ರಾಜ್ಯಕ್ಕೆ ಸಾಗುವ ಎಲ್ಲ ವಾಹನಗಳು ಸಾಗುತ್ತಿವೆ. ಈ ರಸ್ತೆಯಲ್ಲಿ ಸಧ್ಯದ
ಪರಿಸ್ಥಿತಿಯಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ರಸ್ತೆ ನಡುವೆ
ಮರ ಬಿದ್ದಿದ್ದರಿಂದ ಶನಿವಾರ ಕರ್ನಾಟಕ ಗೋವಾ ರಾಜ್ಯಗಳ ನಡುವೆ ಸಂಚಾರ ಕೆಲಕಾಲ
ಅಸ್ತವ್ಯಸ್ತಗೊಂಡು ತುರ್ತು ಕೆಲಸಕ್ಕಾಗಿ ಹೋಗಬೇಕಿದ್ದ ಪ್ರಯಾಣಿಕರು ಪರದಾಡಿದ್ದಾರೆ.
ಕೂಡಲೇ ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಮತ್ತು ಲೋಕೋಪಯೋಗಿ
ಇಲಾಖೆಗಳು ಒಂದು ಆಪತ್ಕಾಲದಲ್ಲಿ ಸಹಾಯ ನೀಡುವ ವಾಹನದ ಸಂಚಾರವನ್ನು ಖಾನಾಪುರ ಜಾಂಬೋಟಿ ನಡುವೆ ಪ್ರಾರಂಭಿಸಬೇಕು ಎನ್ನುವುದು ಪ್ರಯಾಣಿಕರ ಆಗ್ರಹ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ