ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದ ಕುಮಾರಸ್ವಾಮಿ ಲೇ ಔಟ್ ನಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ ನೀಡಿದರು.
ಅಂದಾಜು ತಲಾ 25 ಲಕ್ಷ ರೂ.ಗಳಂತೆ ಒಟ್ಟೂ ಸುಮಾರು 75 ಲಕ್ಷ ರೂ. ವೆಚ್ಚದಲ್ಲಿ ಮೂರು ರಸ್ತೆಗಳ ಕಾಮಗಾರಿಗಳಿಗೆ ಚಾಲನೆಯನ್ನು ನೀಡಲಾಯಿತು. ಬಹುದಿನಗಳ ಬೇಡಿಕೆಯಾಗಿದ್ದ ರಸ್ತೆ ಅಭಿವೃದ್ಧಿಯಾಗುತ್ತಿರುವ ಬಗ್ಗೆ ಬಡಾವಣೆಯ ನಿವಾಸಿಗಳು ಹರ್ಷ ವ್ಯಕ್ತಪಡಿಸಿದರು.
ಎಲ್ಲರ ಸಹಕಾರವಿದ್ದರೆ ಅಭಿವೃದ್ಧಿ ತರಲು ಸಮಸ್ಯೆ ಇಲ್ಲ. ಕಳೆದ 20 ವರ್ಷಗಳಿಂದ ಕ್ಷೇತ್ರಕ್ಕೆ ಅಭಿವೃದ್ಧಿ ಯೋಜನೆಗಳೇ ಬಂದಿರಲಿಲ್ಲ. ಹಾಗಾಗಿ ಈಗ ಜನರು ನನ್ನ ಮೇಲೆ ಬಹಳ ಅಭಿವೃದ್ಧಿಯ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಒಂದೇ ಬಾರಿ ಎಲ್ಲವೂ ಸಾಧ್ಯವಾಗದಿದ್ದರೂ ಜನರ ವಿಶ್ವಾಸಕ್ಕೆ ದ್ರೋಹಬಗೆಯುವುದಿಲ್ಲ. ಬಡಾವಣೆಯ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ರಸ್ತೆ ಕಾಮಗಾರಿಯಲ್ಲಿ ಸುಸಜ್ಜಿತ ಸಾಮಗ್ರಿಗಳನ್ನು ಬಳಸಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಅವರು ಗುತ್ತಿಗೆದಾರರಿಗೆ ಸೂಚಿಸಿದರು.
ಕಾಮಗಾರಿಗಳ ಚಾಲನೆಯ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ಬಡಾವಣೆಯ ಮುಖಂಡರು, ಯುವರಾಜ ಕದಂ, ಬಡಾವಣೆಯ ಅಧ್ಯಕ್ಷರಾದ ಶಿವಕುಮಾರ ಪಟ್ಕಲ್, ಹಿರೇಮಠ, ಪಿ ಆಯ್ ಪಾಟೀಲ, ಉಮೇಶ ಪಾಟೀಲ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ