ಪ್ರಗತಿವಾಹಿನಿ ಸುದ್ದಿ, ಅಹ್ಮದಾಬಾದ್ – ಸಧ್ಯಕ್ಕೆ ಟೀಂ ಇಂಡಿಯಾದ ಟೆಸ್ಟ್ ನಾಯಕನಾಗುವ ವಿಷಯವನ್ನು ಮರೆತುಬಿಡಿ, ನಾನೀಗ ಮುಂದಿನ ವೆಸ್ಟಿಂಡೀಸ್ ಮತ್ತು ಶ್ರೀಲಂಕಾ ಸರಣಿಗಳ ಬಗ್ಗೆ ಲಕ್ಷ್ಯ ಕೇಂದ್ರೀಕರಿಸಿದ್ದೇನೆ ಹೊರತು ನಾಯಕತ್ವದ ಬಗ್ಗೆ ಅಲ್ಲ ಎಂದು ಟೀಂ ಇಂಡಿಯಾದ ಬ್ಯಾಟಿಂಗ್ ಶಕ್ತಿ ಎಂದೇ ಹೆಸರಾಗಿರುವ ರೋಹಿತ್ ಶರ್ಮಾ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಭಾನುವಾರದಿಂದ ಆರಂಭಗೊಳ್ಳಲಿರುವ ವೆಸ್ಟಿಂಡೀಸ್ ಜೊತೆಗಿನ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಈ ಮೊದಲು ೧೦ ಒಡಿಐ ಗಳಲ್ಲಿ ರೋಹಿತ್ ತಂಡದ ನಾಯಕತ್ವ ವಹಿಸಿದ್ದರೂ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕತ್ವ ಅವರದ್ದಾಗಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕತ್ವವೂ ಅವರಿಗೆ ಒಲಿಯುವ ಸಾಧ್ಯತೆ ಇದೆ. ಆದರೆ ಈ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೋಹಿತ್ ಟೆಸ್ಟ್ ನಾಯಕತ್ವದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ.
ಅದೆಲ್ಲದಕ್ಕೂ ಅದರದ್ದೇ ಆದ ಸಮಯ ಬರುತ್ತದೆ, ಎಂದು ಮಾರ್ಮಿಕವಾಗಿ ಉತ್ತರಿಸಿರುವ ಅವರು, ಪ್ರಸ್ತುತ ಏಕದಿನ ಸರಣಿಯ ಬಗ್ಗೆ ಹೆಚ್ಚಿನ ಗಮನಹರಿಸಿದ್ದೇನೆ, ಕೆಲಸದ ಒತ್ತಡ ನಿರ್ವಹಣೆ ಬಹಳ ಮಹತ್ವದ್ದು, ಅಲ್ಲದೇ ಮೇಲಿಂದ ಮೇಲೆ ತಂಡದ ಆಟಗಾರರ ಬದಲಾವಣೆಯಿಂದ ಮುಂದಿನ ದಿನಗಳಲ್ಲಿ ಕೆಲವು ಸರಣಿಗಳನ್ನು ನಾವು ಕಳೆದುಕೊಳ್ಳಲೂಬಹುದು. ಆದರೆ ಅದಕ್ಕೆ ನಾವು ಸಿದ್ಧರಿದ್ದೇವೆ. ತಂಡದ ಭವಿಷ್ಯದ ದೃಷ್ಟಿಯಿಂದ ಕೆಲವು ನಿರ್ಧಾರಗಳು ಅನಿವಾರ್ಯ ಎಂದು ಅವರು ಹೇಳಿದ್ದಾರೆ.
ರೋಹಿತ್ ಶರ್ಮಾ ಅಲ್ಲದಿದ್ದರೆ ಕೆ. ಎಲ್. ರಾಹುಲ್ ಟೆಸ್ಟ್ ತಂಡದ ನಾಯಕರಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ರೋಹಿತ್ ಅನುಪಸ್ಥಿತಿಯಲ್ಲಿ ವಿರಾಟ್ ಕೋಹ್ಲಿ ಜೊತೆ ನಾಯಕತ್ವ ನಿಭಾಯಿಸುವಲ್ಲಿ ಪಳಗಿರುವ ಕೆ. ಎಲ್. ರಾಹುಲ್, ರೋಹಿತ್ ಜೊತೆ ಟೀಂ ಇಂಡಿಯಾ ಬ್ಯಾಟಿಂಗ್ ಓಪನಿಂಗ್ ಪಾರ್ಟನರ್ ಆಗಿಯೂ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ, ಮುಂದಿನ ಟೆಸ್ಟ್ ತಂಡದ ನಾಯಕ ಯಾರಾಗಲಿದ್ದಾರೆ ಎಂಬ ಕುತೂಹಲ ಕ್ರಿಕೇಟ್ ಪ್ರೇಮಿಗಳಲ್ಲಿ ಮೂಡಿದೆ.
ಚಲಿಸುತ್ತಿದ್ದ ರೈಲಿಗೆ ತಲೆಯೊಡ್ಡಿ ವ್ಯಕ್ತಿ ಆತ್ಮಹತ್ಯೆ; ಗೋಕಾಕದಲ್ಲೊಂದು ಘೋರ ಘಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ