Kannada News

*ಕೌಶಲ್ಯಾಧಾರಿತ ಉದ್ಯೋಗ ಸೃಷ್ಟಿಗೆ ಪ್ರಧಾನಿಗಳ ಒತ್ತು; ಬಜೆಟ್ ನಲ್ಲಿ ₹3 ಲಕ್ಷ ಕೋಟಿ ಮೀಸಲು*

ಉದ್ಯೋಗ ಮೇಳದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾಹಿತಿ

ಪ್ರಗತಿವಾಹಿನಿ ಸುದ್ದಿ: ಕೌಶಲ್ಯಾಧಾರಿತ ಉದ್ಯೋಗ ಸೃಷ್ಟಿಗೆ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡುತ್ತಿದ್ದು, ಕಳೆದ ಬಜೆಟ್ ಯುವಜನರಲ್ಲಿ ಕುಶಲತೆ ವೃದ್ಧಿಸುವ ನಿಟ್ಟಿನಲ್ಲಿ ₹3 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಮೀಸಲಿಡಲಾಗಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಪ್ರಧಾನಮಂತ್ರಿ ಉದ್ಯೋಗ ಮೇಳ (ರೋಜ್ ಗಾರ್ ಮೇಳ)ದ 2ನೇ ಹಂತದಲ್ಲಿ ದೇಶದಾದ್ಯಂತ ವಿವಿಧ ಕೇಂದ್ರ ಸರಕಾರಿ ಇಲಾಖೆಗಳಲ್ಲಿ ಉದ್ಯೋಗಕ್ಕೆ ಆಯ್ಕೆಯಾದ 51,000 ಯುವಜನರಿಗೆ ದೇಶದ 40 ಸ್ಥಳಗಳಲ್ಲಿ ನೇರ ನೇಮಕಾತಿ ಪತ್ರ ನೀಡುವ ಕಾರ್ಯಕ್ರಮ ನಡೆಯಿತು. ಆನ್ಲೈನ್ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಧಾನಿಗಳು ಪಾಲ್ಗೊಂಡಿದ್ದರು ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಬೆಂಗಳೂರು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇಪ್ಪತೈದು ಯುವ ಜನರಿಗೆ ನೇಮಕಾತಿ ಪತ್ರ ವಿತರಿಸಿದ ನಂತರ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವರು; ಕೇಂದ್ರ ಸರಕಾರದ ಹನ್ನೆರಡು ಇಲಾಖೆಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗಿದೆ. 2047ನೇ ವರ್ಷಕ್ಕೆ ವಿಕಸಿತ ಭಾರತ್ ಗುರಿಯನ್ನು ಮುಟ್ಟಬೇಕು ಎನ್ನುವ ಛಲದೊಂದಿಗೆ ಮೋದಿ ಅವರು ಕೌಶಲ್ಯಾಧಾರಿತ ಉದ್ಯೋಗ ಸೃಷ್ಟಿಗೆ ಹೆಚ್ಚು ಉತ್ತೇಜನ ಕೊಡುತ್ತಿದ್ದಾರೆ. ಅದಕ್ಕಾಗಿ ಬಜೆಟ್ ನಲ್ಲಿ ₹3 ಲಕ್ಷ ಕೋಟಿ ಮೀಸಲಿಡಲಾಗಿದೆ. ಈ ಹಣವೂ ನೇರವಾಗಿ MSME ಗಳಿಗೆ ನೇರವಾಗಿ ಬಿಡುಗಡೆ ಆಗುತ್ತದೆ ಎಂದು ಹೇಳಿದರು ಅವರು.

ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ್ ಭಾರತ್ ಪರಿಕಲ್ಪನೆಗಳ ಅಡಿಯಲ್ಲಿ ಮೋದಿ ಅವರು, ಉದ್ಯೋಗ ಸೃಷ್ಟಿಗೆ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ಕೊಡುತ್ತಿದ್ದಾರೆ. ಉತ್ಪಾದನಾ ಸಂಪರ್ಕ ಉತ್ತೇಜನ ಯೋಜನೆ (PLI) ಮೂಲಕವೂ ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಮುನ್ನಡೆ ಸಾಧಿಸಲಾಗುತ್ತಿದೆ. ಭಾರತವನ್ನು 3ನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ರೂಪಿಸಲು ಇಡೀ ಸಹಕಾರಿ ಆಗುತ್ತದೆ ಎಂದರು ಅವರು.

ಈ ಸಂದರ್ಭದಲ್ಲಿ ಅಂಚೆ ಇಲಾಖೆಯನ್ನು ಶ್ಲಾಘಿಸಿದ ಸಚಿವರು; ಮೊದಲ ಹಂತದ ಉದ್ಯೋಗ ಮೇಳದಲ್ಲಿ ಇಲಾಖೆಯು 30,000 ಯುವ ಜನರಿಗೆ ಉದ್ಯೋಗ ನೀಡಿದೆ. ಎರಡನೇ ಹಂತದಲ್ಲಿ 20,000 ಮಂದಿಗೆ ಉದ್ಯೋಗ ನೀಡಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್, ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಅವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button