ಚಾವಣಿ ಪದರು ಕುಸಿದು ವಿದ್ಯಾರ್ಥಿಗಳು ಗಾಯಗೊಂಡ ಘಟನೆ: ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ ಆರೋಪ

ಪ್ರಗತಿ ವಾಹಿನಿ ಸುದ್ದಿ ಕಾರವಾರ :

ಇತ್ತೀಚೆಗೆ ಅಂಕೋಲಾ ತಾಲೂಕಿನ ನಿರ್ಮಲಹೃದಯ ಪ್ರೌಢಶಾಲೆಯಲ್ಲಿ ಚಾವಣಿ ಪದರ ಕುಸಿದು ಐವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಶಿಕ್ಷಣ ಇಲಾಖೆಯ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಜನಶಕ್ತಿ ವೇದಿಕೆ ಜಿಲ್ಲಾಧಿಕಾರಿಗೆ ದೂರು ನೀಡಿದೆ. ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ಘಟನೆಯ ಕುರಿತು ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ದೂರು ಸಲ್ಲಿಸಿರುವ ಅವರು, ಖಾಸಗಿ ಶಾಲೆಗಳಿಗೆ ಮಾನ್ಯತೆ ನವೀಕರಣ ನೀಡುವ ಸಮಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದ ಅನ್ವಯ ಶಾಲೆಯ ಸ್ವಂತ ನಿವೇಶನ, ಸ್ವಂತ ಕಟ್ಟಡ, ಮೂಲಭೂತ ಸೌಕರ್ಯಗಳು ಹಾಗೂ ಸುರಕ್ಷತೆಗೆ ಸಂಬಂಧಿಸಿದ ಅಂಶಗಳನ್ನು ಗಮನಿಸಿ ನೀಡಬೇಕಿದೆ. ಆದರೆ ಇಲಾಖಾಧಿಕಾರಿಗಳು ಇದ್ಯಾವುದನ್ನು ಗಮನಿಸದೇ ಬೇಕಾಬಿಟ್ಟಿಯಾಗಿ ಮಾನ್ಯತೆ ನವೀಕರಣ ನೀಡುವ ಮೂಲಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಯನ್ನು ಓಲೈಸುವ ಕಾರ್ಯಕ್ಕಿಳಿದಿದ್ದಾರೆ ಎಂದು ಅವರು ದೂರಿದ್ದಾರೆ.

ಮೂಲಭೂತ ಸೌಲಭ್ಯಗಳನ್ನು ಹೊಂದಿರದ ಶಾಲೆಗಳಿಗೆ ಮಾನ್ಯತೆ ನೀಡದೆ, ಆಡಳಿತ ಮಂಡಳಿಯನ್ನು ವಜಾಗೊಳಿಸಿ, ವಿದ್ಯಾರ್ಥಿಗಳನ್ನು ಸುರಕ್ಷಿತ ಶಾಲೆಗೆ ದಾಖಲಿಸಬೇಕಾಗಿದ್ದರೂ ಶಿಕ್ಷಣ ಇಲಾಖೆಯು ದಿವ್ಯ ನಿರ್ಲ್ಯಕ್ಷ ತಾಳಿರುವುದಕ್ಕೆ ನಿರ್ಮಲ ಹೃದಯ ಪ್ರೌಢಶಾಲೆಯಲ್ಲಿನ ಈ ಘಟನೆಯು ಉದಾಹರಣೆಯಾಗಿದೆ. ಈ ಹಿಂದೆಯೇ ಇದರ ಬಗ್ಗೆ ಗಮನಕ್ಕೆ ತಂದಿದ್ದರೂ ಗಂಭೀರವಾಗಿ ಪರಿಗಣಿಸದ ಕುರಿತು ಅವರು ಆಕ್ಷೇಪಿಸಿದ್ದಾರೆ. ಊಟದ ಸಮಯವಾಗಿದ್ದರಿಂದ ಬಹು ದೊಡ್ಡ ಅಪಘಾತವು ತಪ್ಪಿರುವುದು ಪುಣ್ಯವಾಗಿದೆ. ಇದೇ ರೀತಿಯ ನಿರ್ಲ್ಯಕ್ಷ ಮುಂದುವರಿದಲ್ಲಿ ದೊಡ್ಡ ಪ್ರಮಾಣದ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Home add -Advt

ಅಂಕೋಲಾ ತಾಲೂಕಿನಲ್ಲಿ ಹಾಗೂ ಜಿಲ್ಲೆಯಲ್ಲಿನ ಎಲ್ಲಾ ಖಾಸಗಿ ಶಾಲೆಗಳಲ್ಲಿ ಸುರಕ್ಷಿತ ವ್ಯವಸ್ಥೆ ಇದೆಯೇ ಎಂಬ ಬಗ್ಗೆ ಕೂಡಲೇ ಪರಿಶೀಲಿಸಿ ಕಾನೂನುಬಾಹಿರವಾಗಿ ಯಾವ ಶಾಲೆಗೆ ಮಾನ್ಯತೆ ನೀಡಲಾಗಿದೆಯೋ, ಅದನ್ನು ರದ್ದುಗೊಳಿಸಿ ವಿದ್ಯಾರ್ಥಿಗಳ ಸುರಕ್ಷತೆಗೆ ಯೋಗ್ಯ ವ್ಯವಸ್ಥೆ ಮಾಡಲು ಅವರು ಆಗ್ರಹಿಸಿದ್ದಾರೆ.

ಭಾರತದಿಂದ ಹಾರಿ ಬಂದ ಮಿಸೈಲ್‌ಗೆ ಬೆಚ್ಚಿಬಿದ್ದ ಪಾಕಿಸ್ತಾನ ! ಭಾರತ ನೀಡಿದ ಉತ್ತರವೇನು ?

Related Articles

Back to top button