Belagavi NewsBelgaum NewsKannada NewsKarnataka News

*ಅಂಗಾಂಗದಾನ ಮಾಡಿದ ವ್ಯಕ್ತಿಯ ಮಗಳಿಗೆ ರೋಟರಿ ನೆರವಿನಿಂದ ಹೃದಯ ಶಸ್ತ್ರ ಚಿಕಿತ್ಸೆ* *ಇದೊಂದು ಕರುಣಾಜನಕ ಕಥೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸವದತ್ತಿ ತಾಲೂಕಿನ ಕುಟರನಟ್ಟಿ (ಹಿರೆಬುದ್ನೂರ) ಗ್ರಾಮದ ಹನಮಂತ ಸರ್ವಿ ಮೆದುಳು ನಿಷ್ಕ್ರೀಯಗೊಂಡ ನಂತರ ತನ್ನ ಅಂಗಾಂಗಳನ್ನು ದಾನ ಮಾಡಿ ಇಬ್ಬರ ಜೀವ ಉಳಿಸಿದ್ದಾರೆ.‌

ಹನಂಮತ ಸರ್ವಿ ತನ್ನ ಗರ್ಭಿಣಿ ಹೆಂಡ್ತಿ ಹಾಗೂ ತೀವ್ರ ಹೃದಯ ಖಾಯಿಲೆಯಿಂದ ಬಳಲುತ್ತಿದ್ದ 2 ವರ್ಷದ ಮಗಳನ್ನು ಬಿಟ್ಟು ಅಗಲಿದ್ದ. ಆರ್ಥಿಕವಾಗಿ ಹಾಗೂ ಶಿಕ್ಷಣದಿಂದ ಹಿಂದುಳಿದಿದ್ದ ಬಡಕುಟಂಬವು ಮಡುಗಟ್ಟಿದ ದುಃಖದಲ್ಲಿದ್ದ ಗರ್ಭವತಿ ಹೆಂಡ್ತಿಯು ಧೈರ್ಯದಿಂದಲೇ ಅಂಗಾಂಗ ದಾನ ಮಾಡಿ ಜನತೆಗೆ ಒಂದು ಒಳ್ಳೆಯ ಸಂದೇಶವನ್ನು ನೀಡಿದರು. ತನ್ನ ಸಾವಿನಲ್ಲೂ ಹಲವರ ಜೀವ ಉಳಿಸಲು ಹನಮಂತ ಅವರ ಲೀವರ, ಎರಡು ಮೂತ್ರಪಿಂಡ ಮತ್ತು ಕಣ್ಣುಗಳನ್ನು ದಾನ ಮಾಡಲಾಯಿತು. ಮೂವರಿಗೆ ಹೊಸ ಜೀವನ ನೀಡಿದರೆ, ಇಬ್ಬರು ಅಂಧರಿಗೆ ದೃಷ್ಟಿ ನೀಡಿ ಬೆಳಕಾದರು. ಹಣಮಂತ ಅವರು ನಿಸ್ವಾರ್ಥ, ಸಹಾನುಭೂತಿ ಮತ್ತು ಮಾನವೀಯತೆಯ ಉದಾಹರಣೆ.

ಹನಮಂತ ಮೃತಪಟ್ಟ ಕೆಲ ಘಳಿಗೆಯಲ್ಲಿಯೇ ಅವರ 2 ವರ್ಷದ ಮಗಳಿಗೆ ಜನ್ಮತಃವಾಗಿದ್ದ ಹೃದ್ರೋಗ ತೀವ್ರಗೊಂಡಿತು. ಶಿಘ್ರವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದಾಗ ಚಿಕ್ಕಮಕ್ಕಳ ಹೃದ್ರೋಗ ತಜ್ಞ ವೈದ್ಯರಾದ ಡಾ. ವೀರೇಶ್ ಮಾನ್ವಿ ಅವರು ತಪಾಸಣೆಗೊಳಪಡಿಸಿದಾಗ  ಹೃದಯದಲ್ಲಿ ರಂದ್ರವಿರುವದು ಕಂಡು ಬಂದಿತು. ಅದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ಮಾಡಿಸಲೇಬೇಕು ಎಂದು ಸಲಹೆ ನೀಡಿದರು. ಇದರಿಂದ ಕುಟುಂಬವು ಮತ್ತೆ ಆಘಾತಕ್ಕೊಳಗಾಯಿತು.

ಮೊದಲೇ ದುಃಖದಲ್ಲಿದ್ದ ಆರ್ಥಿಕ ಪರಿಸ್ಥಿತಿಯಿಂದ ಕಂಗೆಟ್ಟಿದ್ದ ಕುಟುಂಬಕ್ಕೆ ಆರ್ಥಿಕ ಸಹಾಯ ಕಲ್ಪಿಸಿದ ರೋಟರಿ ಕ್ಲಬ್ ಆಫ್ ಬೆಳಗಾವಿ (ದಕ್ಷಿಣ)ವು ಗಿಫ್ಟ ಆಫ್ ಲೈಫ್ (ಜೀವನದ ಉಡುಗೊರೆ) ಯೋಜನೆಯಡಿ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲು ಸಹಕರಿಸಿದರು. ಚಿಕ್ಕಮಕ್ಕಳ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ಗಣಂಜಯ ಸಾಳ್ವೆ ಅವರಿಗೆ ಅರವಳಿಕೆ ತಜ್ಞವೈದ್ಯರಾದ ಡಾ. ಶರಣಗೌಡಾ ಪಾಟೀಲ ಹಾಗೂ ಅವರ ತಂಡವು ಸಹಕರಿಸಿತು. ತಜ್ಞವೈದ್ಯರ ಆರೈಕೆಯಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಕುಟುಂಬದಲ್ಲಿ ಹೊಸ ಭರವಸೆ ಮೂಡಿಸಿದೆ. ‘ಗಿಫ್ಟ್ ಆಫ್ ಲೈಫ್’ ಯೋಜನೆಯಡಿ ಇಲ್ಲಿಯವರೆಗೆ 15 ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ರೋಟರಿ ಇಂಟರ್‌ನ್ಯಾಶನಲ್‌ನಿಂದ ರೋಟರಿ ಕ್ಲಬ್ ಆಫ್ ಬೆಳಗಾವಿ (ದಕ್ಷಿಣ) ದ ಸಹಕಾರದೊಂದಿಗೆ ಧನಸಹಾಯ ನೀಡಲಾಗುತ್ತದೆ.

ರೋಟರಿ ಕ್ಲಬ್ ಬೆಳಗಾವಿ (ದಕ್ಷಿಣ)ದ ಅಧ್ಯಕ್ಷ ನೀಲೇಶ್ ಪಾಟೀಲ್, ಕಾರ್ಯದರ್ಶಿ ಭೂಷಣ ಮೋಹಿತ್ರೆ, ಪ್ರೊಜೆಕ್ಟ್ ಕನ್ವೇನರ್ ಚೈತನ್ಯ ಕುಲಕರ್ಣಿ, ಆರತಿ ಅಂಗಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮಗುವಿನ ಅಜ್ಜಿಯೊಂದಿಗೆ ಮಾತನಾಡಿ, ನಿಮ್ಮ ಕಷ್ಟದಲ್ಲಿ ನಾವೂ ಕೂಡ ಭಾಗಿಯಾಗಿದ್ದು, ಮಗುವಿನ ಆರೋಗ್ಯದ ಕಾಳಜಿ ವಹಿಸುತ್ತೇವೆ ಎಂದರು.

ಮಗುವು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು. ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ರೋಟರಿ ಕ್ಲಬ್‌ಗಳಂತಹ ಸಮುದಾಯ ಸಂಸ್ಥೆಗಳು ಅಗತ್ಯವಿರುವ ಕುಟುಂಬಗಳಿಗೆ ಕಾಳಜಿ ತೋರ್ಪಡಿಸುತ್ತ ಆರ್ಥಿಕ ಸಹಾಯ ಮಾಡುತ್ತಿರುವದು ಅತ್ಯಂತ ಸಂತೋಷ ಮತ್ತು ಮಾದರಿಯಾಗಿದೆ ಎಂದು ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಮೋಹನ ಗಾನ ಅವರು ಹೇಳಿದರು.

ಮಕ್ಕಳಲ್ಲಿರುವ ಹೃದಯ ತೊಂದರೆಯನ್ನು ಗುಣಮುಖಗೊಳಿಸಲು ರೋಟರಿ ಕ್ಲಬ್ ಆಫ್ ಬೆಳಗಾವಿ (ದಕ್ಷಿಣ)ವು ಶ್ರಮಿಸುತ್ತಿರುವದಕ್ಕೆ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸಿದ್ದಾರೆ. ಹನುಮಂತನ ಮರಣದಿಂದ ದುಖದಲ್ಲಿರುವ ಕುಟುಂಬಕ್ಕೆ ಈಗ ಗಂಡು ಮಗು ಸಹ ಆಗಮಿಸಿದ್ದು, ಕುಟುಂಬದ ಬಾಳಿನಲ್ಲಿ ಭರವಸೆಯ ಬೆಳಕು ಮೂಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button