*ಕ್ಷುಲ್ಲಕ ಕಾರಣಕ್ಕೆ ರೌಡಿಶೀಟರ್ ಬರ್ಬರ ಹತ್ಯೆ*: *7 ಮಂದಿಯ ಗ್ಯಾಂಗ್ನಿಂದ ಅಟ್ಯಾಕ್*

ಪ್ರಗತಿವಾಹಿನಿ ಸುದ್ದಿ: ಎರಡು ಗುಂಪುಗಳ ನಡುವಿನ ಗಲಾಟೆ ರೌಡಿಶೀಟರ್ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.
ರೌಡಿಶೀಟರ್ ದೀಪಕ್ ಅಲಿಯಾಸ್ ದೀಪು (28) ಮೃತ ರೌಡಿ ಶೀಟರ್. ದೀಪು ಮೇಲೆ 7ರಿಂದ 8 ಮಂದಿಯ ಗುಂಪು ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ದೀಪು ಮೃತಪಟ್ಟಿರುವ ಘಟನೆ ಬೆಂಗಳೂರಿನ ಪೀಣ್ಯದ ಗುಲ್ಬರ್ಗ ಕಾಲೋನಿಯಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆ ದೀಪು, ಈಶ್ವರ್ ನೇಪಾಳಿ ಹಾಗೂ ಸುಮನ್ ಅಲಿಯಾಸ್ ಪಾರಿವಾಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ದೀಪು ಮೇಲೆ ಮತ್ತೆ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಏಳು ಜನರ ಗುಂಪು ಚಾಕುವಿನಿಂದ ದೀಪುಗೆ ಇರಿದ ಬಳಿಕ ಸ್ಥಳದಿಂದ ಪರಾರಿಯಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ದೀಪುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ. ಬಳಿಕ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆಯಿಂದ ಗುಲ್ಬರ್ಗ ಕಾಲೋನಿ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ನಡೆಸಿದವರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದು, ಗಲಾಟೆಯ ಹಿಂದಿನ ಕಾರಣ ಹಾಗೂ ಕೊಲೆಯಲ್ಲಿ ಭಾಗಿಯಾಗಿರುವವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




