ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ : ಸಮೀಪದ ಮುರುಗೋಡದ ಮಹಾಂತ ದುರದುಂಡೇಶ್ವರ ಮಠದ ಅಧಿಪತಿಗಳಾದ ಶ್ರೀ ನೀಲಕಂಠ ಮಹಾಸ್ವಾಮಿಗಳು ಕಾಶಿ ವಿಶ್ವಾರಾಧ್ಯ ಗುರುಕುಲಕ್ಕೆ 25,000 ರೂ. ದೇಣಿಗೆ ನೀಡಿದ್ದಾರೆ.
ಕಾಶಿ ಗುರುಕುಲದಲ್ಲಿ ಇದ್ದು ಅಧ್ಯಯನ ಮಾಡಿದ ನೀಲಕಂಠ ಮಹಾಸ್ವಾಮಿಗಳು ಮಾತನಾಡುತ್ತಾ ಕಾಶಿ ಜಂಗಮವಾಡಿ ಮಠ ಗುರುಕುಲ ಗುರು ವಿರಕ್ತರನ್ನು ಅದ್ವೈತರನ್ನು, ಮಠಾಧಿಪತಿಗಳನ್ನು ಬೆಳೆಸಿದೆ. ಈ ಪೀಠದಲ್ಲಿ ನಾವು ಇದ್ದು ಅಧ್ಯಯನ ಮಾಡಿದ್ದೇವೆ. ಅದಕ್ಕಾಗಿ ಈ ಗುರುಕುಲ ಇನ್ನೂ ಉನ್ನತಮಟ್ಟಕ್ಕೆ ಹೋಗಬೇಕೆಂದು ಶ್ರೀಮಠದಿಂದ ದೇಣಿಗೆ ನೀಡುವುದಾಗಿ ಈ ಸಂದರ್ಭದಲ್ಲಿ ಹೇಳಿದರು. ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಒಳ್ಳೆಯ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಸಂತೋಷವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮುರುಗೋಡದ ನೀಲಕಂಠ ಮಹಾಸ್ವಾಮಿಗಳು ಕಾಶಿಯ ಗುರುಕುಲದ ಹಳೆಯ ವಿದ್ಯಾರ್ಥಿ. ವಿಶೇಷವಾಗಿ ಅವರು ಗುರು ವಿರಕ್ತರ ನಡುವೆ ಕೊಂಡಿಯಾಗಿ ಬದುಕುತ್ತಿದ್ದಾರೆ. ವಿದ್ವನ್ಮಣಿಗಳು ಆಗಿರುವಂತಹ ಶ್ರೀಗಳಿಗೆ ಕಾಶಿ ಪೀಠದಿಂದ ಗೌರವ ಸಮರ್ಪಣೆಯು ಮಾಡಲಾಗಿದೆ ಎಂದರು.
ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡುತ್ತಾ ಮುರುಗೋಡದ ಶ್ರೀಗಳು ಇಳಿವಯಸ್ಸಿನಲ್ಲಿ ಕೂಡ ಆಚಾರ-ವಿಚಾರವನ್ನು ಮೈಗೂಡಿಸಿಕೊಂಡು ಬದುಕುತ್ತಿರುವುದು ಅಭಿಮಾನದ ಸಂಗತಿ ಎಂದರು.
ಕಟಕೋಳ ಎಂ ಚಂದರಗಿ ಹಿರೇಮಠದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮುರುಗೋಡದ ಮಹಾಂತ ಶಿವಯೋಗಿಗಳು ಅಪರೂಪವಾಗಿರುವ ಕಾರ್ಯವನ್ನು ಮಾಡಿದ್ದಾರೆ. ಇವತ್ತು ಗುರು ವಿರಕ್ತರು ಒಂದಾಗಲು ವಿಶೇಷವಾಗಿ ಮುರುಗೋಡ ಮಠವು ಶ್ರಮಿಸುತ್ತಿರುವುದು ಅಭಿಮಾನದ ಸಂಗತಿ ಎಂದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ