*ಸ್ವಚ್ಚ ಭಾರತ ಮಿಷನ್ ಯೋಜನೆ ಅನುಷ್ಠಾನಕ್ಕೆ ರೂ.2912 ಕೋಟಿ ಅನುದಾನ*

ಸಚಿವ ಬೈರತಿ ಸುರೇಶ್
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸ್ವಚ್ಛ ಭಾರತ ಮಿಷನ್-1.0 ಯೋಜನೆಗೆ ರೂ.854 ಕೋಟಿ ಹಾಗೂ ಸ್ವಚ್ಛ ಭಾರತ ಮಿಷನ್-2.0 ಯೋಜನೆಗೆ ರೂ.2058 ಕೋಟಿ ಸೇರಿ ಒಟ್ಟು ರೂ.2912 ಕೋಟಿ ಅನುದಾನವನ್ನು ಯೋಜನೆ ಅನುಷ್ಠಾನಕ್ಕೆ ಮೀಸಲು ಇರಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.
ಶುಕ್ರವಾರ ಅಧಿವೇಶನದ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ರಾಜ್ಯ ಎಲ್ಲಾ ಸ್ಥಳೀಯ ನಗರಾಭಿವೃದ್ಧಿ ಸಂಸ್ಥೆಗಳಲ್ಲಿ ಸ್ವಚ್ಛಭಾರತ್ ಮಿಷನ್ ಅನುಷ್ಠಾನ ಮಾಡಲು ಪ್ರತ್ಯೇಕ ಐ.ಎ.ಎಸ್ ಅಧಿಕಾರಿ ನೇಮಿಸಲಾಗಿದೆ. ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ಘನತ್ಯಾಜ್ಯ ವಸ್ತುಗಳ ಸಂಗ್ರಹಣೆ, ಸಾಗಣಿಕೆ, ಸಂಸ್ಕರಣೆ ಮತ್ತು ವಿಲೇವಾರಿಗೆ ಅಗತ್ಯ ಇರುವ ಯಂತ್ರೊಪಕರಣಗಳನ್ನು ಮತ್ತು ಸಿವಿಲ್ ಕಾಮಗಾರಿಗೆ ಕೈಗೊಳ್ಳಲು ವಿಸ್ತೃತ ಯೋಜನೆಗೆ ಅನುಮತಿ ನೀಡಿದ್ದು, ರೂ.370 ಕೊಟಿ ಬಿಡುಗಡೆ ಮಾಡಲಾಗಿದೆ. ಹುಬ್ಬಳ್ಳಿ ಧಾರವಾಡದಲ್ಲಿ 450 ಟಿ.ಪಿ.ಡಿ ಹಾಗೂ ತುಮಕೂರು ನಗರದಲ್ಲಿ 140 ಟಿ.ಪಿ.ಡಿ ಸಾಮಾರ್ಥ್ಯದ ತ್ಯಾಜ್ಯ ಸಂಸ್ಕರಣೆ ಸೌಲಭ್ಯ ಕಲ್ಪಿಸಲಾಗಿದೆ. ಈಗಾಗಲೇ ಬಹಳ ವರ್ಷಗಳಿಂದ ಶೇಖರಣೆಯಾಗಿರುವ ಹಳೆಯ ಪಾರಂಪರಿಕ ತ್ಯಾಜ್ಯವನ್ನು ತೆರವುಗೊಳಿಸಲು ಬಯೋ ಮೈನಿಂಗ್ ಹಾಗೂ ಬಯೋ ರೆಮಡೇಷನ್ ಮಾಡಲು ಕ್ರಮ ವಹಿಸಲಾಗಿದೆ ಎಂದರು.
ಶಾಸಕ ಜ್ಯೋತಿ ಗಣೇಶ್ ಜೆ.ಬಿ ಹಾಗೂ ಇತರೆ ಶಾಸಕರು ಬಯೋ ಮೈನಿಂಗ್ ಹಾಗೂ ಬಯೋ ರೆಮಡೇಷನ್ ಕೈಗೊಳ್ಳಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರತಿ ಟನ್‌ಗೆ ನೀಡಿರುವ ದರವನೇ ರಾಜ್ಯದ ಇತರೆಡೆಯೂ ನೀಡಬೇಕು ಎಂದು ಸಚಿವರಲ್ಲಿ ಕೋರಿದರು. ಇದಕ್ಕೆ ಸಕಾರತ್ಮವಾಗಿ ಸ್ಪಂದಿಸಿದ ಸಚಿವ ಸುರೇಶ್.ಬಿ.ಎಸ್. ದರ ಪರಿಷ್ಕರಣೆ ಮಾಡುವುದಾಗಿ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ