ಪ್ರಗತಿವಾಹಿನಿ ಸುದ್ದಿ; ದಕ್ಷಿಣ ಕನ್ನಡ: ರಬ್ಬರ್ ಪ್ಲಾಂಟೇಶನ್ ಟ್ಯಾಪರ್ ಗಳಿಗೆ ಕೋವಿಡ್ ನಂತರ ಬೋನಸ್ ನೀಡದೇ ಇದ್ದು, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಿಂದ ಈಗಿನ ಶೇ 8 ರಷ್ಟು ಬೋನಸ್ ಗೆ ಶೇ 12 ರಷ್ಟು ಬೋನಸ್ ಸೇರಿಸಿ ಒಟ್ಟು 20 ರಷ್ಟು ಬೋನಸ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಅವರು ಇಂದು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿನ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಹಾಗೂ ಸಾರ್ವಜನಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನೂರು ದ್ವಿಚಕ್ರ ವಾಹನ
ಎಸ್ ಸಿ, ಎಸ್ ಟಿ ಜನಾಂಗಕ್ಕೆ ಪ್ರತಿ ಕ್ಷೇತ್ರದಲ್ಲಿ ನೂರು ವಾಹನ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. 4000 ಅಂಗನವಾಡಿ, ಸರ್ಕಾರಿ ಶೌಚಾಲಯ ನಿರ್ಮಾಣ ಮಾಡಲು ಆದೇಶ ಹೊರಡಿಸಿದೆ. ಸ್ಪಂದನಾಶೀಲ ಸರ್ಕಾರ ನಮ್ಮದು ಎಂದರು.
ಸಮೃದ್ದ ಕರ್ನಾಟಕ ನಿರ್ಮಾಣ
ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿಯಾಗುತ್ತಿದೆ. ಶಾಂತಿ ಸುವ್ಯವಸ್ಥೆ ಇದೆ. ಕರಾವಳಿಯ ಲ್ಲಿ ಸಂಸ್ಯೆಯಾಗಿದ್ದ ಪಿ.ಎಫ್.ಐ ನಿಷೇಧ ಮಾಡಿದೆ. ರಾಷ್ಟ್ರ ದ್ರೋಹಿಗಳನ್ನು ಮಟ್ಟ ಹಾಕಿ, ದೇಶ, ರಾಜ್ಯ, ಜನರ ಭವಿಷ್ಯ , ಬದುಕು ಉತ್ತಮಗೊಳ್ಳಬೇಕು. 3.47 ಲಕ್ಷ ತಲವಾರು ಆದಾಯವಿರುವ ರಾಜ್ಯ ಕರ್ನಾಟಕ. ಆರ್ಥಿಕ ಸಬಲತೆ ಮೂಲಕ ಸಾಮಾಜಿಕ ಆರ್ಥಿಕ ಕಾರ್ಯಕ್ರಮ, ಶಿಕ್ಷಣಕ್ಕೆ ಒತ್ತು, ವಿವೇಕ ಯೋಜನೆ, 438 ನಮ್ಮಕ್ಲಿನಿಕ್ , 100 ಸಿ.ಹೆಚ್ ಸಿ ಕೇಂದ್ರಗಳು, ಆಸ್ಪತ್ರೆ ಸೌಲಭ್ಯಗಳು ಕಾಕ್ಲಿಯರ್ ಇಂಪ್ಲಾಂಟ್ ಗೆ 500 ಕೋಟಿ, ಡಯಾಲಿಸಿಸ್ ಸೈಕಲ್ ಹೆಚ್ಚಳ ಮಾಡಿದೆ. ಸಮೃದ್ದ ಕರ್ನಾಟಕ ಕಟ್ಟಿ ನವ ಕರ್ನಾಟಕದ ನಿರ್ಮಾಣ ಮಾಡಿ ನವ ಭಾರತಕ್ಕೆ ಕಾಣಿಕೆ ನೀಡೋಣ ಎಂದರು.
ಕರಾವಳಿಯ ಅಭಿವೃದ್ಧಿಯಲ್ಲಿ ಕನ್ನಡ ನಾಡಿನ ಅಭಿವೃದ್ಧಿಯೂ ಇದೆ
ಡೀಸೆಲ್ ಕೋಟಾ 2 ಲಕ್ಷಕ್ಕೆ ಹೆಚ್ಚಳ, ಬೋಟುಗಳನ್ನು ಡೀಸೆಲ್ ಗೆ ಪರಿವರ್ತಿಸಲು ಶೇ 50 ರಷ್ಟು ವೆಚ್ಚವನ್ನು ಸರ್ಕಾರವೇ ಭರಿಸುವ ತೀರ್ಮಾನ ಮಾಡಲಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ನಾವು ಮಾಡುತ್ತಿದ್ದೇವೆ. ಲಕ್ಷ ದ್ವೀಪ ಮತ್ತು ಮಂಗಳೂರು ನಡುವೆ 65 ಕೋಟಿ ರೂ.ಗಳ ಜೆಟ್ಟಿ ಬೋಟುಗಳನ್ನು ಪ್ರವಾಸೋದ್ಯಮ ಕ್ಕೆ ಅನುಕೂಲವಾಗುವ ರೀತಿ ವ್ಯವಸ್ಥೆ ಕಲ್ಪಿಸಲಾಗಿದೆ. ಮಂಗಳೂರು, ಕಾರವಾರ, ಗೋವಾ ಮತ್ತು .ಮುಂಬೈಗೆ ವಾಟರ್ ವೇ ಸೌಲಭ್ಯ ವಿಶೇಷವಾಗಿ ಜನಸಾಮಾನ್ಯರಿಗೆ ಸಂಚಾರ ಮಾಡಲು ಕಲ್ಪಿಸಲಾಗುತ್ತಿದೆ. ಕರಾವಳಿ ಬಹಳಷ್ಟು ಅಭಿವೃದ್ಧಿ ಯಾಗಬೇಕು. ಆಗ ಜಿಡಿಪಿ ಹೆಚ್ಚಾಗುತ್ತದೆ. ಯುವಕರಿಗೆ ಕೆಲಸ ಕ್ಕೆ ಅವಕಾಶಗಳು ಕಲ್ಪಿಸುವ ಸಾಧ್ಯತೆ ಹೆಚ್ಚಿದ್ದು, ಕರಾವಳಿಯ ಅಭಿವೃದ್ಧಿಯಲ್ಲಿ ಕನ್ನಡ ನಾಡಿನ ಅಭಿವೃದ್ಧಿಯೂ ಇದೆ ಎಂದರು
ಕಾಯಕನಿರತರ ಅಭಿವೃದ್ಧಿ
ಕಾಯಕ ನಿರತ ನಿಗಮಗಳಾದ ಮೇದಾರ ಅಭಿವೃದ್ಧಿ ನಿಗಮ, ಮಾಲ ಗಾರ, ತಿಗಳರು, ಹಾಗೂ ಗಾಣಿಗರಿಗೆ ವಿಶೇ ನಿಗಮ ಸ್ಥಾಪಿಸಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ ಎಂದರು.
ಸಿ.ಆರ್.ಜೆಡ್ ನಿಯಮಗಳ ಸರಳೀಕರಣ
ಕರಾವಳಿಯಲ್ಲಿ ಕೇಂದ್ರ ಸರ್ಕಾರದ ಸಿ.ಆರ್.ಜೆಡ್ ನಿಯಮಗಳನ್ನು ಸರಳೀಕೃತಗೊಳಿಸಿದೆ. 35 ವರ್ಷಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಆರ್ಥಿಕ ಚಟುವಟಿಕೆಗಳು, ಪ್ರವಾಸೋದ್ಯಮ ಔದ್ಯೋಗೀರಣ ದೊಡ್ಡ ಪ್ರಮಾಣದಲ್ಲಿ ಆಗಲಿದೆ. ಮೊದಲ ಬಾರಿಗೆ ಮರೀನಾ ಕ್ಕೆ ಮಂಜೂರು ಮಾಡಲಾಗಿದೆ. ಮಂಗಳೂರು ಕಾರವಾರ ಪೋರ್ಟ್ ಅಭಿವೃದ್ಧಿ, 8 ಮೀನುಗಾರಿಕೆ ಬಂದರು ಅಭಿವೃದ್ಧಿ ಯಲ್ಲದೇ ಫ್ಲೋಟಿಂಗ್ ಜೆಟ್ಟಿಗೆ ಮಂಜೂರಾತಿ ನೀಡಿಲಾಗಿದೆ. ಅಗತ್ಯವಿದ್ದಲ್ಲಿ ಫ್ಲೋಟಿಂಗ್ ಜೆಟ್ಟಿಗೆ ಮಂಜೂರಾತಿ ನೀಡಲಾಗುವುದು. ಕಡಲ ಕೊರೆತ ನಿಯಂತ್ರಣಕ್ಕೆ ವೇವ್ ಬ್ರೇಕಿಂಗ್ ತಂತ್ರಜ್ಞಾನಕ್ಕೆ ಅನುಮತಿ ನೀಡಲಾಗಿದೆ. ಬಟ್ಟಂಪಾಡಿಯಲ್ಲಿ ಈ ಕೆಲಸ ಆಗಲಿದೆ ಎಂದರು. ಸಮಸ್ಯೆ ಬಗೆಹರಿಸುವ ಬದ್ಧತೆ ನಮ್ಮದು. ಎಂಟು ಸಾವಿರ ಮೀನುಗಾರರಿಗೆ ಸೀಮೆಎಣ್ಣೆ ಸೌಲಭ್ಯವನ್ನು 10 ತಿಂಗಳಿಗೆ ವಿಸ್ತರಿಸಿದ್ದು, 18 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದರು.
ದುಡಿಮೆಗೆ ಹೆಚ್ಚಿನ ಮಹತ್ವ
ದುಡಿಮೆಗೆ ಹೆಚ್ಚಿನ ಮಹತ್ವ ನೀಡಿ, ಕಾಯಕ ಯೋಜನೆಯಡಿ 50 ಸಾವಿರ ರೂ.ಗಳನ್ನು ನೀಡಲಾಗಿದೆ. ಸಾಮಾಜಿಕ ನ್ಯಾಯ ಒದಗಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಹೆಚ್ಚಿಸಲಾಗಿದೆ. ಅಸಾಧ್ಯವನ್ನು ಸಾಧ್ಯವಾಗಿಸಿದ ಸರ್ಕಾರ ನಮ್ಮದು. ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ವಸತಿ ಶಾಲೆ ಗಳನ್ನು ತಲಾ 25 ಕೋಟಿ ರೂ.ಗಳ ವೆಚ್ಚದಲ್ಲಿ ಒಟ್ಟು 4 ವಸತಿ ಶಾಲೆಗಳನ್ನು ಕಳೆದ ವರ್ಷ ಮಂಜೂರು ಮಾಡಿದ್ದು ಈ ವರ್ಷ ಮತ್ತೂ 4 ವಸತಿ ಶಾಲೆಗಳನ್ನು ಮಂಜೂರು ಮಾಡಿದೆ. ಸಮಾಜದಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸುವುದು ನಮ್ಮ ಬದ್ಧತೆ. ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಜಿಲ್ಲೆಯಲ್ಲಿ 2248 ಸ್ವಸಹಾಯ ಸಂಘಗಳಿಗೆ ಈಗಾಗಲೇ ಅನುದಾನ ತಲುಪಿದೆ. ಬ್ಯಾಂಕ್ ಜೋಡನೆಯೂ ಆಗಿದೆ. ಸ್ವಾಮಿ ವಿವೇಕಾನಂದರ ಯುವ ಶಕ್ತಿ ಯೋಜನೆ, ಯುವಕರು ಮಹಿಳೆಯರು ರಾಜ್ಯ ಕಟ್ಟುವ ಕೈಗಳು. ಇವರು ನಮ್ಮ ಭವಿಷ್ಯ. ಇವರಿಗೆ ಶಿಕ್ಷಣ, ಉದ್ಯೋಗ ನೀಡಿದರೆ. ಅವರು ರಾಜ್ಯವನ್ನು ಬಲಿಷ್ಠವಾಗಿ ಕಟ್ಟಲು ಸಾಧ್ಯವಿದೆ. ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು, ಯುವಕರಲ್ಲಿ ನಮಗೆ ನಂಬಿಕೆಯಿದ್ದು, ಅದಕ್ಕಾಗಿ ಯೋಜನೆಗಳನ್ನು ರೂಪಿಸಿ ಶಕ್ತಿ ತುಂಬಲಾಗುತ್ತಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ