Uncategorized

*ವಿಧಾನಸಭೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ರುದ್ರಪ್ಪ ಲಮಾಣಿ; ಪಾಠ ಮಾಡಿದ ಡಿಸಿಎಂ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭೆ ನೂತನ ಉಪ ಸಭಾಧ್ಯಕ್ಷರಾಗಿ ರುದ್ರಪ್ಪ ಲಮಾಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ವೇಳೆ ವಿಧಾನಸಭೆಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ರುದ್ರಪ್ಪ ಲಮಾಣಿಯವರಿಗೆ ಅಭಿನಂದನೆ ತಿಳಿಸಿದರು. ಇಂದು ನಾವೆಲ್ಲರೂ ಒಮ್ಮತದಿಂದ ರುದ್ರಪ್ಪ ಮಾಲಪ್ಪ ಲಮಾಣಿ ಅವರನ್ನು ವಿಧಾನಸಭೆ 25ನೇ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ. ಲಮಾಣಿ ಅವರು 1999ರಲ್ಲಿ ನನ್ನ ಜೊತೆ ವಿಧಾನಸಭೆ ಪ್ರವೇಶಿಸಿದ್ದಾರೆ. ಸದಾ ಹಸನ್ಮುಖಿ. ರಾಜಕಾರಣಿಗೆ ಇದು ಬಹಳ ಅಗತ್ಯ. ಅವರು ಸಚಿವರಾಗಿ, ಪಕ್ಷದಲ್ಲಿ ಅನೇಕ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಿದ್ದಾರೆ.

ಅವರನ್ನು ಜಿಲ್ಲೆಯಲ್ಲಿ ಅಜಾತ ಶತ್ರು ಎಂದು ಕರೆಯುತ್ತಾರೆ. ಅವರ ಬಗ್ಗೆ ಜನ ಅಪಾರ ಪ್ರೀತಿ ಹೊಂದಿದ್ದಾರೆ. ನಾವು ಅವರಿಗೆ ಬಹಳ ಬಲವಂತವಾಗಿ ಈ ಜವಾಬ್ದಾರಿ ನೀಡಿದ್ದೇವೆ. ಪಕ್ಷದ ಆದೇಶಕ್ಕೆ ತಲೆಬಾಗಿ ಈ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದರು.

ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ. ಮಂತ್ರಿಗಳಾಗಿದ್ದವರು ಸ್ಪೀಕರ್ ಆಗಿದ್ದಾರೆ. ಮುಖ್ಯಮಂತ್ರಿ ಆಗಿದ್ದವರು ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿರುವ ಉದಾಹರಣೆ ನಾವು ನೋಡಿದ್ದೇವೆ. ರಾಜಕಾರಣ ಸಾಧ್ಯತೆಗಳ ಕಲೆ. ಇಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ. ಶತ್ರುಗಳು ಮಿತ್ರರಾಗುತ್ತಾರೆ.

ಮುಖ್ಯಮಂತ್ರಿಗಳು, ಮಂತ್ರಿಗಳು ನಿಮ್ಮ ಬಳಿ ಬರಬೇಕು. ನೀವು ಏಕಪಕ್ಷೀಯವಾಗಿರಲು ಸಾಧ್ಯವಿಲ್ಲ. ಹೀಗಾಗಿ ನಿಮಗೆ ವಿರೋಧ ಪಕ್ಷದ ನಾಯಕರ ಪಕ್ಕದಲ್ಲಿ ಸ್ಥಾನ ನೀಡಲಾಗಿರುತ್ತದೆ. ಇದೊಂದು ನ್ಯಾಯ ನೀಡುವ ಸ್ಥಾನ. ಈ ಸ್ಥಾನದಲ್ಲಿ ಕೂತು ಎಲ್ಲರಿಗೂ ನ್ಯಾಯ ಒದಗಿಸಬೇಕು.

ನೂತನ ಶಾಸಕರಿಗೆ ಅವಕಾಶ ನೀಡಿ ನಾಯಕತ್ವ ರೂಪಿಸಿ. ಆಮೂಲಕ ಎಲ್ಲರ ಹೃದಯ ಗೆಲ್ಲಬೇಕು. ನೀವು ನಿಮ್ಮನ್ನು ಗೆಲ್ಲಬೇಕಾದರೆ ನೀವು ಬುದ್ಧಿ ಪ್ರಯೋಗಿಸಿ. ನೀವು ಬೇರೆಯವರನ್ನು ಗೆಲ್ಲಬೇಕಾದರೆ ಹೃದಯವಂತಿಕೆ ಪ್ರಯೋಗಿಸಿ ಎಂದು ಗಾಂಧೀಜಿ ಅವರು ಹೇಳಿದ್ದಾರೆ.

ನಿಮ್ಮ ಜೊತೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಇರಲಿದೆ. ಸಚಿವರಾಗಿದ್ದವರು ಉಪಾಧ್ಯಕ್ಷರಾಗಿರುವುದಕ್ಕೆ ಬೇಸರ ಮಾಡಿಕೊಳ್ಳಬೇಡಿ. ನಿಮಗೆ ಮುಂದೆ ಬಹಳಷ್ಟು ಅವಕಾಶ ಸಿಗಲಿದೆ ಶುಭವಾಗಲಿ ಎಂದು ಹಾರೈಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button