
370ನೇ ವಿಧಿ ರದ್ಧು -ಯಾರು ಏನೆಂದರು?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ರದ್ಧುಪಡಿಸಲು ನಿರ್ಧಾರ ಕೈಗೊಂಡಿರುವುದನ್ನು ಹಲವರು ಸ್ವಾಗತಿಸಿದ್ದಾರೆ.
ಹುಕ್ಕೇರಿ ಶ್ರೀ
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡುವ ೩೭೦ನೇ ವಿಧಿಯನ್ನು ರದ್ದು ಮಾಡುವ ತೀರ್ಮಾನವನ್ನು ಕೇಂದ್ರ ಸರಕಾರ ಕೈಗೊಂಡಿರುವುದು ದೇಶಕ್ಕೆ ಅಭಿಮಾನದ ಸಂಗತಿ ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಕೇಂದ್ರ ಸರಕಾರ ೩೭೦ನೇ ವಿಧಿಯನ್ನು ತೆಗೆದು ಹಾಕಿದ್ದು ಸಂತಸದ ವಿಷಯ. ರಾಷ್ಟ್ರೀಯ ಏಕತೆಯನ್ನು ಸುಭದ್ರಗೊಳಿಸುವೆಡೆ ಇದು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ. ಈ ಐತಿಹಾಸಿಕ ನಿರ್ಣಯಕ್ಕೆ ನಾನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಾಗೆಯೇ ಜಮ್ಮು ಕಾಶ್ಮೀರ ಮತ್ತು ಲಡಾಕ್‌ನಲ್ಲಿ ಶಾಂತಿ ನೆಲೆಸಲಿ ಎಂದು ಶ್ರೀಗಳು ಆಶಿಸಿದ್ದಾರೆ.
ಕವಟಗಿಮಠ
370ನೇ ವಿಧಿಯನ್ನು ರದ್ಧುಪಡಿಸುವ ಮೂಲಕ ಕೇಂದ್ರ ಸರಕಾರ ರಾಷ್ಟ್ರೀಯ ಏಕತೆಯನ್ನು ಸುಭದ್ರಗೊಳಿಸಿದೆ. ರಾಷ್ಟ್ರದ ಇತಿಹಾಸದಲ್ಲಿ ಇದು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಭಾರತಕ್ಕೆ ಇಂದು ನಿಜವಾಗಲೂ ಸ್ವಾತಂತ್ರ್ಯ ಸಿಕ್ಕಿದೆ. ನಮಗೆ ಸಿಕ್ಕಿದ್ದ ಸ್ವಾತಂತ್ರ್ಯ ಇಂದು ಪರಿಪೂರ್ಣವಾಗಿದೆ. ಇಡೀ ಭಾರತ ಒಂದು ಎನ್ನುವ ಶಬ್ಧಕ್ಕೆ ಇಂದು ನಿಜವಾದ ಅರ್ಥ ಬಂದಿದೆ ಎಂದು ಅವರು ಹೇಳಿದ್ದಾರೆ.
ಈ ಐತಿಹಾಸಿಕ ನಿರ್ಧಾರಕ್ಕೆ ನಾನು ಪ್ರಧಾನಿ ನರೇಂದ್ರ ಮೋದಿ ಹಾಗೂಗೃಹ ಸಚಿವ ಅಮಿತ್ ಶಾ ಅವನ್ನು ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಹತ್ವಪೂರ್ಣ ನಿರ್ಧಾರ ತೆಗೆದುಕೊಳ್ಳುವ ಮೂಲಕ ಕೇಂದ್ರ ಸರಕಾರ ರಾಷ್ಟ್ರದಲ್ಲಿ ಶಾಂತಿ, ಸುಭದ್ರತೆ ನೆಲೆಸುವಂತೆ ಮಾಡಲಿದೆ ಎನ್ನುವ ಆಶಯವನ್ನು ಕವಟಗಿಮಠ ವ್ಯಕ್ತಪಡಿಸಿದ್ದಾರೆ.
ಅಭಯ ಪಾಟೀಲ
ಭಾರತಕ್ಕೆ ಮುಕುಟದಂತಿರುವ ಕಾಶ್ಮೀರದ ಬಗ್ಗೆ ಕೇಂದ್ರ ಸರಕಾರವು ಇಂದು ಕೈಕೊಂಡಿರುವ ನಿರ್ಧಾರವು ಅತ್ಯಂತ ಅಭಿನಂದನೀಯವಾಗಿದ್ದು, ಐತಿಹಾಸಿಕವಾಗಿದೆ. ಶ್ಯಾಮಪ್ರಸಾದ ಮುಖರ್ಜಿಯವರು ಯಾವ ಕಾರಣಕ್ಕಾಗಿ ಹೋರಾಟ ಮಾಡಿ ಪ್ರಾಣವನ್ನು ತೆತ್ತಿದ್ದಾರೆಯೋ ಆ ಕನಸು ಇಂದು ಸಂಪೂರ್ಣವಾಗಿ ನನಸಾಗಿದ್ದು, ಇಂದು ಅವರ ಆತ್ಮಕ್ಕೆ ಶಾಂತಿ ದೊರೆತಿದೆ. ಭವ್ಯ ಭಾರತಕ್ಕೆ ಇಂದು ನಿಜವಾದ ಸ್ವಾತಂತ್ರ್ಯ ಸಿಕ್ಕಂತಾಗಿದೆ ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆೆ.
ಅನಿಲ ಬೆನಕೆ
ಭಾರತೀಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆಯುವ ದಿನ ಇದು. ಜನಸಂಘ ಹಾಗೂ ಭಾರತೀಯ ಜನತಾ ಪಕ್ಷದ ಜನಕರಾದ ಡಾ: ಶಾಮ ಪ್ರಸಾದ ಮುಖರ್ಜಿಯವರಿಗೆ ಈಗಿನ ಎನ್.ಡಿ.ಎ. ಸರ್ಕಾರ ಕೊಟ್ಟ ನಿಜವಾದ ಶ್ರದ್ಧಾಂಜಲಿ ಅಂದರೆ ಜಮ್ಮು ಕಾಶ್ಮೀರದಲ್ಲಿ ಜಾರಿ ಇರುವ 370ರ ಕಾಯ್ದೆಯನ್ನು ತೆಗೆದು ಹಾಕಿದ ದಿನವಾಗಿದೆ. ಕಳೆದ 30 ವರ್ಷಗಳಿಂದ40 ಸಾವಿರಕ್ಕಿಂತ ಹೆಚ್ಚಿನ ಭಾರತೀಯ ಸೈನಿಕರು, ನಾಗರಿಕರು ಹಾಗೂ ಅನೇಕ ಪೊಲೀಸ್ ಅಧಿಕಾರಿಗಳ ದುರ್ಮರಣಕ್ಕೆ ಈ 370ನೇ ವಿಧಿ ಕಾರಣವಾಗಿದೆ. ಒಂದೇ ದೇಶದಲ್ಲಿ 2 ಚಿಹ್ನೆ, 2 ಸಂವಿಧಾನ 2 ಈಗ ಇತಿಹಾಸದ ಪುಟಕ್ಕೆ ಹೋಗಿದೆ. ಯಾವ ಧ್ಯೇಯಕ್ಕಾಗಿ ಡಾ: ಕೇಶವ ಬಲಿರಾಮ ಹೆಡಗೆವಾರ ರವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪನೆ ಮಾಡಿದರೋ ಆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಂಡ ಭಾರತದ ಪರಿಕಲ್ಪನೆ ಈಗ ನಿಜವಾಗಿದೆ. ಮೋದಿ, ಅಮಿತ ಸಾ ಜೋಡಿ 130 ಕೋಟಿ ಭಾರತೀಯರ ಸ್ವಪ್ನವನ್ನು ಸಾಕಾರ ಮಾಡಿದೆ ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ