ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಮಹಾಂತೇಶ ನಗರದ ರಹವಾಸಿ, ಹಿರಿಯ ನಾಗರಿಕ, ಸಾಂಸ್ಕೃತಿಕ ಚಿಂತಕರಾಗಿದ್ದ ಎಸ್.ಎ.ವಿಭೂತಿ (೯೬) ವಯೋಸಹಜವಾಗಿ ನಿಧನಹೊಂದಿದರು.
ಬೆಳಗಾವಿಯ ಡಿಸಿಸಿ ಬ್ಯಾಂಕ್ ಹಿರಿಯ ಅಧಿಕಾರಿಗಳಾಗಿ ೩೯ ವರ್ಷ ಕೆಲಸ ನಿರ್ವಹಿಸಿದ್ದ ವಿಭೂತಿಯವರು ನಂತರ ಕೆಎಲ್‌ಇ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಇಂಟರ್‌ನಲ್ ಅಡಿಟರ್ ಆಗಿ ೩೪ ವರ್ಷಗಳ ಸೇವೆಯನ್ನು ಸಲ್ಲಿಸಿದ್ದರು. ಮಹಾಂತೇಶನಗರ ರಹವಾಸಿಗಳ ಸಂಘ’ದ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಡಾ.ಪ್ರಭಾಕರ ಕೋರೆ ಕಂಬನಿ
ಎಸ್.ಎ.ವಿಭೂತಿಯವರ ನಿಧನಕ್ಕೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಕಂಬನಿ ಮಿಡಿದಿದ್ದಾರೆ. ದಕ್ಷ ಹಾಗೂ ಪ್ರಾಮಾಣಿಕ ವ್ಯಕ್ತಿಗಳಾಗಿದ್ದ ವಿಭೂತಿಯವರು ಸಂಸ್ಥೆಯ ಲೆಕ್ಕ ಪರಿಶೋಧಕರಾಗಿ, ಮಾರ್ಗದರ್ಶಕರಾಗಿ ಸಲ್ಲಿಸಿದ ಸೇವೆ ಅನುಪಮವೆನಿಸಿದೆ. ಜಿ.ಎ.ಹೈಸ್ಕೂಲಿನ ವಿದ್ಯಾರ್ಥಿಯಾಗಿ, ಸಪ್ತರ್ಷಿಗಳಲ್ಲಿ ಒಬ್ಬರಾಗಿದ್ದ ಬಿ.ಬಿ.ಮಮದಾಪೂರ ಅವರ ಪ್ರೀತಿಯ ಶಿಷ್ಯರಾಗಿದ್ದ ಅವರು ಸಂಸ್ಥೆಯ ಬಗ್ಗೆ ಅಪಾರ ಪ್ರೀತಿ ಹಾಗೂ ಕಾಳಜಿಯನ್ನು ಹೊಂದಿದ್ದರು. ಅವರ ಅಗಲಿಕೆ ಸಂಸ್ಥೆಗೆ ಹಾಗೂ ಸಮಾಜಕ್ಕೆ ತುಂಬಲಾರದ ಹಾನಿಯನ್ನುಂಟುಮಾಡಿದೆ ಎಂದು ಕೆಎಲ್‌ಇ ಸಂಸ್ಥೆಯ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.
ಸಾಹಿತಿಗಳಿಂದ ಶ್ರದ್ಧಾಂಜಲಿ: ಸಮಾಜಮುಖಿಯಾಗಿ, ಧರ್ಮವಂತರಾಗಿ, ಬೆಳಗಾವಿಯ ಸಾಂಸ್ಕೃತಿಕ ವಲಯದ ಮಾರ್ಗದರ್ಶಕರಾಗಿದ್ದ ಎಸ್.ಎ.ವಿಭೂತಿಯವರು ಅಗಲಿರುವುದು ಅತ್ಯಂತ ದುಃಖಕರ ಸಂಗತಿ. ಕಾಯಕಯೋಗಿಗಳಾಗಿ ದುಡಿಮೆಯ ಸಂಸ್ಕೃತಿಯನ್ನು ಯುವಜನಾಂಗಕ್ಕೆ ದರ್ಶಿಸಿದ್ದ ಅವರು ಬೆಳಗಾವಿಯ ಹತ್ತುಹಲವಾರು ಸಭೆ ಸಮಾರಂಭಗಳಿಗೆ ಜೀವತುಂಬಿದ್ದರು. ಅವರು ಲಿಂಗೈಕ್ಯರಾಗಿರುವುದು ಸಮಾಜಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ ಎಂದು ಸಾಹಿತಿಗಳಾದ ಪ್ರಾ.ಬಿ.ಎಸ್.ಗವಿಮಠ, ಡಾ.ಬಸವರಾಜ ಜಗಜಂಪಿ, ಡಾ.ಎಫ್.ವ್ಹಿ.ಮಾನ್ವಿ, ಡಾ.ಗುರುದೇವಿ ಹುಲೆಪ್ಪನವರಮಠ, ಯ.ರು.ಪಾಟೀಲ, ಬಸವರಾಜ ಗಾರ್ಗಿ, ಪ್ರೊ.ಎಂ.ಎಸ್.ಇಂಚಲ, ಡಾ.ಮಹೇಶ ಗುರನಗೌಡರ, ಶ್ರೀಕಾಂತ ಶಾನವಾಡ ಮೊದಲಾದವರು ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.
ಬೆಳಗಾವಿಯಲ್ಲಿ ಮೂವರು ಅಧಿಕಾರಿಗಳಿಗೆ ಎಸಿಬಿ ಶಾಕ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ