ಪ್ರಗತಿವಾಹಿನಿ ಸುದ್ದಿ; ಚೆನ್ನೈ: ನಿನ್ನೆ ವಿಧಿವಶರಾಗಿರುವ ಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಇಂದು ಚೆನ್ನೈನ ರೆಡ್ ಹಿಲ್ ಫಾರ್ಮ್ ಹೌಸ್ ನಲ್ಲಿ ನಡೆಯಲಿದೆ. ಬೆಳಿಗ್ಗೆ 11 ಗಂಟೆ ವರೆಗೂ ಅಂತಿಮ ದರ್ಶನಕ್ಕಾಗಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ತಾವರೈಪಾಕಂ ನಲ್ಲಿರುವ ಎಸ್ ಪಿಬಿ ಅವರ ನಿವಾಸದಲ್ಲಿ ಅವರ ಪಾರ್ಥೀವ ಶರೀರವನ್ನು ಇರಿಸಲಾಗಿದ್ದು, ಬೆಳಿಗ್ಗೆ 7 ಗಂಟೆಯಿಂದ 11 ಗಂಟೆವರೆಗೂ ಸಾರ್ವಜನಿಕರಿಗೆ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮುಂಜಾನೆಯಿಂದಲೇ ಸಾವಿರಾರು ಅಭಿಮಾನಿಗಳು ಎಸ್ ಪಿಬಿ ಮನೆಯತ್ತ ಧಾವಿಸಿದ್ದು, ಚಿತ್ರರಂಗದ ನೂರಾರು ಗಣ್ಯರು ಆಗಮಿಸಿ ಎಸ್ ಪಿಬಿ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಇನ್ನು ಬೆಳಿಗ್ಗೆ 11 ಗಂಟೆ ಬಳಿಕ ಎಸ್ ಪಿಬಿ ಅಂತ್ಯಕ್ರಿಯೆಯ ಅಂತಿಮ ವಿಧಿವಿಧಾನಗಳು ಆರಂಭವಾಗಲಿವೆ. ತೆಲುಗು ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಂತಿಮ ವಿಧಿವಿಧಾನ ನಡೆಯಲಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ತಿರುವಳ್ಳೂರು ಪೊಲೀಸ್ ವರಿಷ್ಠಾಧಿಕಾರಿ ಅರವಿಂದನ್, ಎಸ್ ಪಿಬಿ ಅಂತ್ಯಕ್ರಿಯೆ ವಿಧಿವಿಧಾನಗಳ ಬಗ್ಗೆ ಕುಟುಂಬವೇ ನಿರ್ಧರಿಸಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ರೆಡ್ ಹಿಲ್ ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಅಂತ್ಯಕ್ರಿಯೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಎಲ್ಲರಿಗೂ ಮಾಸ್ಕ್ ವಿತರಣೆ ಮಾಡಲಾಗುತ್ತದೆ. ದೈಹಿಕ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ