ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆಲ ದಿನಗಳ ಹಿಂದೆ ಬಿಜೆಪಿ ಶಾಸಕ್ ಎಸ್.ಟಿ.ಸೋಮಶೇಖರ್, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಹಾಡಿ ಹೊಗಳಿದ್ದರು. ಸಹಕಾರ ಕ್ಷೇತ್ರದಲ್ಲಿ ನಾನು ಬೆಳೆಯಲು ಡಿ..ಕೆ.ಶಿವಕುಮಾರ್ ಅವರೇ ಕಾರಣ ಎಂದಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದೀಗ ಈ ಬಗ್ಗೆ ಶಾಸಕರೇ ಸ್ಪಷ್ಟ ಉತ್ತರ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಟಿ.ಸೋಮಶೇಖರ್, ನಾನು ಯಾವ ಕಾರಣಕ್ಕೂ ಕಾಂಗ್ರೆಸ್ ಗೆ ಹೋಗಲ್ಲ, ನನ್ನ ಬೆಂಬಲಿಗರ ಸಭೆಯಲ್ಲಿಯೂ ನಾನು ಕಾಂಗ್ರೆಸ್ ಸೇರುವ ಬಗ್ಗೆ ಹೇಳಿಲ್ಲ. ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಒಳ್ಳೆ ಮಾತನಾಡಿದ್ದಕ್ಕೆ ಕಾಂಗ್ರೆಸ್ ಸೇರುತ್ತಾರೆ ಎಂದು ಸುದ್ದಿ ಹಬ್ಬಿಸುವುದು ಸರಿಯಲ್ಲ ಎಂದರು.
ನನ್ನ ವಿರುದ್ಧ ಬಿಜೆಪಿಯವರೇ ಷಡ್ಯಂತ್ರ ಮಾಡಿದ್ದಾರೆ. ಚುನಾವಣೆಯಲ್ಲಿಮ್ನನ್ನನ್ನು ಸೋಲಿಸಲು ಆಡಿಯೋ ವೈರಲ್ ಮಾಡಿದ್ರು. ಮೂಲ ಬಿಜೆಪಿಗರೇ ನನ್ನ ವಿರುದ್ಧ ತಂತ್ರ ನಡೆಸಿದರು ಎಂದು ಆರೋಪಿಸಿದ್ದಾರೆ.
ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಎಲ್ಲಿಯೂ ಹೇಳಿಯೇ ಇಲ್ಲ. ಬೆಳಿಗ್ಗೆಯಿಂದ ನಮ್ಮ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿ.ಟಿ.ರವಿ ಕರೆ ಮಾಡಿ ಮಾತನಾಡುತ್ತಿದ್ದಾರೆ. ಚುನಾವಣೆ ವೇಳೆ ಎರಡು ಬಾರಿ ಪ್ರಧಾನಿ ಮೋದಿ, ಅಮಿತ್ ಶಾ ಅವರನ್ನು ಮೈಸೂರಿಗೆ ಕರೆ ತಂದವನು, ನಿಷ್ಠಾವಂತನಾಗಿ ಕೆಲಸ ಮಾಡಿದವನು ಕಾಂಗ್ರೆಸ್ ಗೆ ಯಾಕೆ ಹೋಗಲಿ? ಕಾಂಗ್ರೆಸ್ ಗೆ ಸೇರುವ ಬಗ್ಗೆ ಯಾವ ಸಭೆಯಲ್ಲಿಯೂ ನಾನು ಮಾತನಡಿಲ್ಲ. ಇದನ್ನೆಲ್ಲ ನೋಡಿದರೆ ಬಿಜೆಪಿಯವರೇ ನನ್ನನ್ನು ಕಾಂಗ್ರೆಸ್ ಗೆ ಕಳುಹಿಸುವಂತಿದೆ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ