ಪ್ರಾಗತಿವಾಹಿನಿ ಸುದ್ದಿ; ಶಿರಡಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ಶಿರಡಿ ಸಾಯಿಬಾಬಾ ದರ್ಶನ ರದ್ದು ನಿರ್ಧಾರವನ್ನು ದೇಗುಲದ ಆಡಳಿತ ಮಂಡಳಿ ಹಿಂಪಡೆದಿದೆ. ದೂರದಿಂದ ಬರುವ ಭಕ್ತರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ದೇಗುಲ ಬಂದ್ ನಿರ್ಧಾರವನ್ನು ಹಿಂಪಡೆದಿರುವುದಾಗಿ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಶಿರಡಿ ಸಾಯಿ ದೇಗುಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಕ್ ಮುಗ್ಲಿಕರ್, ಭಕ್ತರ ಅನುಕೂಲಕ್ಕಾಗಿ ದರ್ಶನ ಅವಕಾಶ ಕಲ್ಪಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅದರೆ, ಮುಖ್ಯಮಂತ್ರಿಯವರ ನಡೆ, ಹೇಳಿಕೆ ವಿರೋಧಿಸಿ ಶಿರಡಿ ಪಟ್ಟಣದಲ್ಲಿ ಸ್ಥಳೀಯರು ಭಾನುವಾರ ಬಂದ್ ಆಚರಿಸುತ್ತಿದ್ದಾರೆ.
ಶಿರಡಿ ಗ್ರಾಮಸ್ಥರು ಸ್ಥಳೀಯ ಜನಪ್ರತಿನಿಧಿ ಬಿಜೆಪಿಯ ರಾಧಾಕೃಷ್ಣ ವಿಖೆ ಪಾಟೀಲ್ ನೇತೃತ್ವದಲ್ಲಿ ಶನಿವಾರ ಸಭೆ ನಡೆಸಿ, ಭಾನುವಾರ (ಜ.19) ಬಂದ್ ಘೋಷಿಸಿದ್ದಾರೆ. ವಿವಾದ ಬಗೆಹರಿಸಲು ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಠಾಕ್ರೆ ಭರವಸೆ ನಡುವೆಯೂ ಭಾನುವಾರ ಪ್ರತಿಭಟನಾರ್ಥವಾಗಿ ಬಂದ್ ಆಚರಿಸಲ್ಪಟ್ಟಿದ್ದು, ಖಾಸಗಿ ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.
ಸಿಎಂ ಜತೆ ನಾಳೆ ಸಭೆ:
ವಿವಾದಕ್ಕೆ ಸಂಬಂಧಿಸಿದ ಸಿಎಂ ಉದ್ಧವ್ ಠಾಕ್ರೆ ಸೋಮವಾರ (ಜ.20) ತಮ್ಮ ಸಚಿವಾಲಯದಲ್ಲಿ ಸಭೆ ಕರೆದಿದ್ದಾರೆ. ಸ್ಥಳೀಯ ಪ್ರಮುಖರನ್ನೂ ಸಭೆಗೆ ಆಹ್ವಾನಿಸಿದ್ದಾರೆ. ಪಥ್ರಿಯ ಜನಪ್ರತಿನಿಧಿಗಳ ಜತೆಗೆ ಪ್ರತ್ಯೇಕ ಸಭೆಯನ್ನೂ ಮುಖ್ಯಮಂತ್ರಿ ನಡೆಸಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ