Kannada NewsKarnataka NewsLatest

ಅದೇ ವೇದಿಕೆ, ಅದೇ ಗಣ್ಯರು, ಅದೇ ಸಭಿಕರು… ಭಾಷಣಕಾರ ಮಾತ್ರ ಬದಲು!

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ – ನಿಪ್ಪಾಣಿಯಲ್ಲಿ ಶುಕ್ರವಾರ ಗ್ರಾಮ ಪಂಚಾಯಿ ಚುನಾವಣೆ ನಿಮಿತ್ತ ಪ್ರಚಾರ ಸಭೆ ನಡೆಯಿತು. ನಿಪ್ಪಾಣಿಯ ಹೊರವಲಯದಲ್ಲಿರುವ ಬ್ರಹ್ಮನಾಥ ಭವನದಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು.

ಮೊದಲು ಮಾಜಿ ಸಚಿವ ರಮೇಶ ಜಾರಕಿಹೊಳಿ ಆಗಮಿಸಿ ಬಿಜೆಪಿ ಪರವಾಗಿ ಪ್ರಚಾರ ಮಾಡಿದರು. ಯಾರಿಗೆ, ಯಾವ ಪ್ರಾಶಸ್ತ್ಯದ ಮತ ನೀಡಬೇಕೆಂದು ಹೈಕಮಾಂಡ್ ನಿಂದ್ ಇನ್ನೂ ನಿರ್ದೇಶನ ಬಂದಿಲ್ಲ. ಬಂದ ತಕ್ಷಣ ತಿಳಿಸಲಾಗುವುದು ಎಂದು ಹೇಳಿ ಕೆಳಗಿಳಿದರು. ( ರಮೇಶ್ ಜಾರಕಿಹೊಳಿ ಬಿಜೆಪಿ ಸೇರಿದ್ದೇಕೆ? ಗುಟ್ಟು ಬಹಿರಂಗ!  )

ನಂತರ ಅದೇ ವೇದಿಕೆ ಏರಿದ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ, ತಮಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ವಿನಂತಿಸಿದರು.

ಅದೇ ವೇದಿಕೆ, ಸಭಿಕರು, ವೇದಿಕೆಯಲ್ಲಿದ್ದ ಗಣ್ಯರೂ ಅವರೇ. ಕೇವಲ ಭಾಷಣಕಾರ ಮಾತ್ರ ಬದಲಾಗಿದ್ದರು.

ರಮೇಶ ಜಾರಕಿಹೊಳಿ ಯಾರಿಗೆ, ಯಾವ ಪ್ರಾಶಸ್ತ್ಯದ ಮತ ಚಲಾಯಿಸಬೇಕೆಂದು ತಿಳಿಸಲಾಗುವುದು ಎಂದು ಹೇಳಿದ್ದಕ್ಕೆ ಉತ್ತರವೆನ್ನುವಂತೆ ಲಖನ್ ಭಾಷಣ ಮಾಡಿ, ತಮಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಕೋರಿದರು.

ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆಶೀರ್ವಾದ ಮಾಡುವಂತೆ  ಲಖನ್ ಜಾರಕಿಹೊಳಿ ಅವರು ಕೋರಿದರು.

ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಪಕ್ಷಾತೀತವಾಗಿ ನನಗೆ ಬೆಂಬಲ ನೀಡುತ್ತಿದ್ದಾರೆ. ಈಗಾಗಲೇ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದು, ಎಲ್ಲ ಕಡೆಗಳಲ್ಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಎಲ್ಲ ಸಮಾಜಗಳ ಬೆಂಬಲ, ಹಿರಿಯ ಆಶೀರ್ವಾದ ಸದಾ ನನ್ನ ಮೇಲಿದೆ. ಪಂಚಾಯತಿಗಳ ಬಲವರ್ಧನೆಗಾಗಿ ಡಿ.೧೦ ರಂದು ನಡೆಯುವ ಪರಿಷತ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಇರಾದೆ ಹೊಂದಿದ್ದೇನೆ. ಪರಿಷತ್ ಸದಸ್ಯನಾಗಿ ಆಯ್ಕೆ ಮಾಡಿದರೆ ಖಂಡಿತವಾಗಿಯೂ ಗ್ರಾಮ ಪಂಚಾಯತಿಗಳಿಗಿರುವ ಅಧಿಕಾರ ಹಾಗೂ ಪಂಚಾಯತ ಸದಸ್ಯರಿಗೆ ಇರುವ ಸ್ಥಾನಮಾನಗಳನ್ನು ಸದುಪಯೋಗಪಡಿಸಿಕೊಳ್ಳುವ ರೀತಿಯಲ್ಲಿ ಗೌರವಪೂರ್ವಕವಾಗಿ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.
ಈ ಚುನಾವಣೆ ಬಂದ ಮೇಲೆ ಕೆಲ ಅಭ್ಯರ್ಥಿಗಳು ಸದಸ್ಯರ ಮನೆ ಬಾಗಿಲಿಗೆ ಬಂದು ಹೋಗುತ್ತಿದ್ದಾರೆ. ಆಯ್ಕೆಯಾದ ಮೇಲೆ ಹಿಂತಿರುಗಿಯೂ ನೋಡುವುದಿಲ್ಲ. ಅಲ್ಲದೇ ಸಾಕಷ್ಟು ಆಮಿಷಗಳನ್ನು ಸಹ ಸದಸ್ಯರಿಗೆ ಒಡ್ಡುತ್ತಿರುವುದು ತಿಳಿದುಬಂದಿದೆ. ಸಮಗ್ರ ಅಭಿವೃದ್ಧಿಯೇ ನಮ್ಮಗಳ ಗುರಿಯಾಗಿದೆ. ಪಂಚಾಯತ ಸದಸ್ಯರಿಗೆ ಎಲ್ಲ ರೀತಿಯ ಸ್ಥಾನಮಾನಗಳನ್ನು ಕಲ್ಪಿಸಿಕೊಡಲಾಗುವುದು. ಯಾವುದೇ ಸಮಸ್ಯೆಗಳಿದ್ದರೆ ನಮ್ಮ ಕಛೇರಿ ಬಾಗಿಲು ಎಂದೆಂದಿಗೂ ತೆರೆದಿರುತ್ತದೆ. ಜನ ಸೇವೆಯೇ ನಮ್ಮ ಪರಮ ಗುರಿ ಎಂದು ಲಖನ್ ಜಾರಕಿಹೊಳಿ ಹೇಳಿದರು.

ಉತ್ತಮ ಪಾಟೀಲ ಮಾತನಾಡಿ, ಜಾರಕಿಹೊಳಿ ಸಹೋದರರು ನಿಪ್ಪಾಣಿಯೂ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಬಸವ ತತ್ವ ಪರಿಪಾಲಕರಾದ ಸಹೋದರರು ಜಾತ್ಯಾತೀತವಾಗಿ ಎಲ್ಲ ಸಮುದಾಯಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲ ಕ್ಷೇತ್ರಗಳನ್ನು ಬೆಳೆಸುತ್ತಿದ್ದಾರೆ. ಕುಟುಂಬದ ಕಿರಿಯ ಸದಸ್ಯರಾಗಿರುವ ಲಖನ್ ಜಾರಕಿಹೊಳಿ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡುವ ಮೂಲಕ ಲಖನ್ ಅವರ ಕೈ ಬಲಪಡಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಜಯವಂತ ಕಾಂಬಳೆ, ವಿಲಾಸ ಗಾಡಿವಡ್ಡರ, ಅಭಿನಂದನ ಪಾಟೀಲ, ದಲಿತ ಮುಖಂಡ ಅಶೋಕ ಅಸೂಧೆ, ಚೇತನ ಸ್ವಾಮಿ, ಸಚೀನ ಖೋತ್, ಸುನೀಲ ಮಹಾಕಾಳಿ, ಇಂದ್ರಜೀತ್ ಸೋಳಾಂಕುರೆ, ಸಂಜಯ ಕಾಗೆ, ತಾನಾಜಿ ಚೌಗಲೆ, ಉಮೇಶ ಪಾಟೀಲ, ನಿಪ್ಪಾಣ ಮತಕ್ಷೇತ್ರದ ಗ್ರಾಮ ಪಂಚಾಯತ ಸದಸ್ಯರು, ಪಟ್ಟಣ ಪಂಚಾಯತ ಸದಸ್ಯರು ಹಾಗೂ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.
ಈ ಎಲ್ಲ ಗಣ್ಯರೂ ರಮೇಶ್ ಜಾರಕಿಹೊಳಿ ಮಾತನಾಡುವಾಗಲೂ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಮೇಶ್ ಜಾರಕಿಹೊಳಿ ಸಾಮರ್ಥ್ಯ ಒಂದೇ ಅಭ್ಯರ್ಥಿ ಗೆಲ್ಲಿಸೋದು: ಇನ್ನೊಬ್ಬರು ಸೋಲೋದು ಅನಿವಾರ್ಯ – ಸತೀಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button