ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಪ್ರಣೀತಾ ಹೆಸರು ಹೇಳಿ ದುಷ್ಕರ್ಮಿಗಳು ಎಸ್.ವಿ ಗ್ರೂಪ್ ಬಿಡರ್ಸ್ ಆಂಡ್ ಡೆವಲಪರ್ಸ್ ಕಂಪನಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ನಟಿ ಪ್ರಣೀತಾ ಅವರನ್ನು ಎಸ್.ವಿ ಗ್ರೂಪ್ ಕಂಪನಿಯ ಪ್ರಚಾರ ರಾಯಭಾರಿಯನ್ನಾಗಿ ಮಾಡುತ್ತೇವೆ ಎಂದು ಹೇಳಿ ಕಂಪನಿಯ ಮ್ಯಾನೇಜರ್ ಅವರನ್ನು ಹೋಟೇಲ್ ಗೆ ಕರೆದ ಆರೋಪಿಗಳು, ಮೊದಲು ಹಣ ನೀಡಿದರೆ ನಂತರ ಪ್ರಣೀತಾ ಬಂದು ಸಹಿ ಹಾಕುತ್ತಾರೆ ಎಂದು ಹೇಳಿದ್ದಾರೆ. ಇದಕ್ಕೆ ಒಪ್ಪಿದ ಮ್ಯಾನೇಜರ್ 13.5 ಲಕ್ಷ ರೂ ನೀಡಿದ್ದಾರೆ. ಹಣ ಕೈಗೆ ಬರುತ್ತಿದ್ದಂತೆಯೇ ಆರೋಪಿಗಳು ರೂಮಿಗೆ ಹೋಗಿ ಬರುತ್ತೇವೆ ಎಂದು ಹೇಳಿ ಎಸ್ಕೇಪ್ ಆಗಿದ್ದಾರೆ.
ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆಯೇ ಎಸ್.ವಿ ಗ್ರೂಪ್ ಮ್ಯಾನೇಜರ್, ಆರೋಪಿಗಳಾದ ಮೊಹಮ್ಮದ್ ಜುನಾಯತ್ ಹಾಗೂ ವರ್ಷ ಎಂಬುವವರ ವಿರುದ್ಧ ಬೆಂಗಳೂರು ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ