ದಯವಿಟ್ಟು ಪ್ರಜ್ಞಾವಂತ ನಾಗರಿಕರಾಗಿ ವರ್ತಿಸಿ ಎಂದ ದರ್ಶನ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಶಾದ್ಯಂತ ಕೂರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಸೋಂಕು ಹರಡುವುದನ್ನು ತಡೆಗಟ್ಟಲು ಮುಂಜಾಗೃತಾ ಕ್ರಮವಾಗಿ ಇಡೀ ದೇಶವೇ ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ವೈರಸ್ ಹರಡದಂತೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಸರ್ಕಾರ, ವೈದ್ಯರು, ಪೊಲೀಸ್ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಹೀಗಾಗಿ ದಯಮಾಡಿ ನಿಮ್ಮ ಕುಟುಂಬ, ನಿಮ್ಮ ಸುರಕ್ಷತೆಗಾಗಿ ಮನೆಯಲ್ಲಿಯೇ ಸುರಕ್ಷಿತವಾಗಿರಿ ಎಂದು ವಿನಂತಿಸಿಕೊಂಡಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ದರ್ಶನ್, ಎಲ್ಲಾ ಭಾರತೀಯರಲ್ಲೂ ನನ್ನ ಕಳಕಳಿಯ ವಿನಂತಿ. ಈ ಮಾರಕವಾದ ಕೊರೊನ ವೈರಸ್ ನಿಂದ ಪಾರಾಗುವುದು ನಮ್ಮ ಮೊದಲ ಆದ್ಯತೆ ಆಗಿರಬೇಕು. ಈ ವೈರಸ್ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಗವರ್ನಮೆಂಟ್, ಡಾಕ್ಟರ್ಸ್, ಪೊಲೀಸ್ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ದಯಮಾಡಿ ನಿಮ್ಮ ಫ್ಯಾಮಿಲಿ ಗಾಗಿ, ನಿಮ್ಮ ನೆರೆಹೊರೆಯ ಗೆಳೆಯರಿಗಾಗಿ, ನಮಗಾಗಿ ಆದಷ್ಟು ನಿಮ್ಮ ಮನೆಯಲ್ಲಿ ಸುರಕ್ಷಿತವಾಗಿರಿ.

ಈ ಸೋಂಕು ರೋಗ ಬಹಳ ಅಪಾಯಕಾರಿ ಎಂಬುದು ನಿಮಗೆ ತಿಳಿದರೂ ಸಹ ತಮ್ಮ ಊರುಗಳಿಗೆ ಹೋಗುವುದು, ಹಬ್ಬಕ್ಕಾಗಿ ಸಂಚರಿಸುವುದು ಮಾಡದಿರಿ. ನಿಮ್ಮ ಈ ಕೃತ್ಯದಿಂದ ಇಡೀ ದೇಶವೇ ಮಾರಣಹೋಮಕ್ಕೆ ತುತ್ತಾಗುವಂತೆ ಮಾಡದಿರಿ. ಇಟಲಿ ಸ್ಪೇನ್ ದೇಶಗಳಲ್ಲಿ ಜಾಗೃತಕ್ರಮಗಳನ್ನು ಮೊದಲೇ ಸರಿಯಾಗಿ ಪಾಲಿಸದೆ ಆಗುತ್ತಿರುವ ಅನಾಹುತಗಳು ನಿಮ್ಮ ಕಣ್ಣ ಮುಂದಿವೆ. ನಿಮ್ಮ ಕರ್ತವ್ಯ ಮನೆಯಲ್ಲಿಯೇ ಇದ್ದು ದೇಶದ ಹಿತಕ್ಕಾಗಿ ಎಲ್ಲಾ ನಿಯಮಗಳನ್ನು ಪಾಲಿಸುವುದು. ಇದನ್ನು ದಯಮಾಡಿ ನೆರವೇರಿಸಿಕೊಡಿ. ‘Common sense is not common’ ಎನ್ನುವ ಹಾಗೆ ಮಾಡಬೇಡಿ. ದಯವಿಟ್ಟು ದೇಶದ ಪ್ರಜ್ಞಾವಂತ ನಾಗರಿಕರಾಗಿ ವರ್ತಿಸಿ ಎಂದು ಮನವಿ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button