ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.24ಕ್ಕೆ ಮುಂದೂಡಿ ಎನ್ ಡಿ ಪಿಎಸ್ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟಿ ರಾಗಿಣಿ ಹಾಗೂ ಸಂಜನಾ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ಎನ್ ಡಿಪಿಎಸ್ ವಿಶೇಷ ನ್ಯಾಯಾಲಯದ ಮುಂದೆ ಬಂದಿದ್ದು, ಈ ವೇಳೆ ನಟಿಯರಿಬ್ಬರ ಜಾಮೀನಿಗೆ ಸಿಸಿಬಿ ನಿರಾಕರಿಸಿದೆ.
ರಾಗಿಣಿ ಅವರಿಗೆ ಈ ಹಂತದಲ್ಲಿ ಜಾಮೀನು ನೀಡಿದರೆ ತನಿಖೆಗೆ ತೊಂದರೆಯಾಗಲಿದೆ. ಅವರು ಪ್ರಭಾವಿಗಳು ಹಾಗೂ ಶ್ರೀಮಂತರ ಜೊತೆ ಸಂಪರ್ಕ ಹೊಂದಿದ್ದು, ಉಳಿದ ಆರೋಪಿಗಳನ್ನು ಎಚ್ಚರಿಸುವ ಸಾಧ್ಯತೆಯಿದೆ. ರಾಗಿಣಿ ಕಳೆದ 5 ವರ್ಷಗಳಿಂದ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದಾರೆ. ಆಂಧ್ರ, ಗೋವಾ, ಮುಂಬೈ ಮಾತ್ರವಲ್ಲ ವಿದೇಶಗಳಲ್ಲಿ ನಡೆಯುವ ಪಾರ್ಟಿ ಗಳಲ್ಲೂ ಭಾಗಿಯಾಗಿದ್ದು, ಪಾರ್ಟಿಯಲ್ಲಿ ಡ್ರಗ್ಸ್ ಪೂರೈಕೆಯನ್ನೂ ಮಾಡಿದ್ದಾರೆ. ಸಿಸಿಬಿ ವಿಚಾರಣೆಗೆ ನಟಿ ಸರಿಯಾಗಿ ಸಹಕರಿಸುತ್ತಿಲ್ಲ ಸಧ್ಯಕ್ಕೆ ರಾಗಿಣಿಗೆ ಜಾಮೀನು ನೀಡದಂತೆ ಸಿಸಿಬಿ ಪರ ವಕೀಲರು ಮನವಿ ಮಾಡಿದ್ದಾರೆ.
ಆದರೆ ರಾಗಿಣಿ ಪರ ವಕೀಲರು ನಟಿಯ ಬಂಧನದಲ್ಲಿ ಕಾನೂನು ಉಲ್ಲಂಘನೆ ಮಾಡಿದ್ದು, ಎಫ್ ಐ ಆರ್ ಇಲ್ಲದೇ ತನಿಖೆ ನಡೆಸಲಾಗಿದೆ. ಮೂರನೇ ವ್ಯಕ್ತಿ ಮಾಡಿದ ಆರೋಪವನ್ನು ಕೇಳಿ ಸಿಸಿಬಿ ಪೊಲೀಸರು ಕೇಸ್ ದಾಖಲಿಸಿದ್ದು, ಪೊಲೀಸರೆ ಕಾನೂನು ದುರುಪಯೋಗ ಪಡಿಸಿಕೊಂಡಿದ್ದಾರೆ. ನಟಿಯ ವಿರುದ್ಧದ ಪ್ರಕರಣ ಜಾಮೀನಿಗೆ ಅರ್ಹವಾಗಿದ್ದು, ಆಕೆಗೆ ಬೇಲ್ ನೀಡುವಂತೆ ವಾದ ಮಂಡಿಸಿದ್ದಾರೆ. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಆದೇಶವನ್ನು ಸೆ.24ಕ್ಕೆ ಕಾಯ್ದಿರಿಸಿದೆ.
ಇದೇ ವೇಳೆ ನಟಿ ಸಂಜನಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಗೆ ಸಿಸಿಬಿ ಕಾಲಾವಕಾಶ ಕೇಳಿದೆ. ಹೀಗಾಗಿ ಸಂಜನಾ ಜಾಮೀನು ಅರ್ಜಿ ವಿಚಾರಣೆ ಸೆ.24ಕ್ಕೆ ನ್ಯಾಯಾಲಯ ಮುಂದೂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ