ಸಂಗಣ್ಣ ಕರಡಿ ಬಿಜೆಪಿ ಬಿಡಲ್ಲ, ಸ್ಪರ್ಧೆ ಮಾಡಲ್ಲ- ಪ್ರಹ್ಲಾದ ಜೋಶಿ

-ಮಾತುಕತೆ ಮಾಡಿದ್ದೇನೆ, ಭರವಸೆ ನೀಡಿದ್ದಾರೆ: ಪ್ರಹ್ಲಾದ ಜೋಶಿ ವಿಶ್ವಾಸ
– ಟಿಕೆಟ್ ಸಿಗದೇ ರೆಬಲ್ ಆದವರು ಯಾರೂ ಎಲ್ಲೂ ಹೋಗಲ್ಲ: ಶೀಘ್ರ ಎಲ್ಲಾ ಪರಿಹಾರ ಕಾಣಲಿದೆ
ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ಬಿಜೆಪಿ ಟಿಕೆಟ್ ಸಿಗದೆ ರೆಬಲ್ ಆಗಿರುವವರ ಜತೆ ಮಾತುಕತೆ ನಡೆದಿದ್ದು, ಅತಿ ಶೀಘ್ರ ಎಲ್ಲಾ ಪರಿಹಾರ ಕಾಣುವ ವಿಶ್ವಾಸವಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಇಂದು ಸಂಜೆ ಪತ್ರಕರ್ತರೊಂದಿಗೆ ಮಾತನಾಡಿ, ಕೊಪ್ಪಳದ ಸಂಗಣ್ಣ ಕರಡಿ ಅವರ ಜತೆ ಖುದ್ದು ನಾನೇ ಮಾತನಾಡಿರುವೆ. ಅವರೂ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಬಂಡಾಯ ನಿಲ್ಲಲ್ಲ: ಸಂಗಣ್ಣ ಕರಡಿ ಅವರ, ತಾವು ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ. ಬಂಡಾಯ ಸ್ಪರ್ಧೆಯನ್ನೂ ಮಾಡಲ್ಲ ಎಂಬ ಭರವಸೆ ಕೊಟ್ಟಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸುತ್ತಿದ್ದೇನೆ ಅಷ್ಟೇ ಎಂಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಜೋಶಿ ಪ್ರತಿಕ್ರಿಯಿಸಿದರು.
ಮಾಧುಸ್ವಾಮಿ ಜತೆ ಬಿಎಸ್ ವೈ ಮಾತುಕತೆ: ಮಾಧುಸ್ವಾಮಿ ಅವರ ಜತೆ ಮಾಜಿ ಸಿಎಂ ಯಡಿಯೂರಪ್ಪ ಅವರೇ ಮಾತನಾಡುತ್ತಿದ್ದಾರೆ. ಈಶ್ವರಪ್ಪ ಅವರೊಂದಿಗೆ ಪಕ್ಷದ ವರಿಷ್ಟರೇ ಮನವೊಲಿಕೆಗೆ ಚರ್ಚೆ ನಡೆಸಿದ್ದಾರೆ. ನಾನೂ ಈ ಹಿಂದೆ ಮಾತನಾಡಿದ್ದೆ. ಭಿನ್ನಮತ ನಿಲ್ಲಲ್ಲ. ಅಂತಿಮವಾಗಿ ಎಲ್ಲಾ ಸುಖಾನಂತ್ಯ ಕಾಣಲಿದೆ ಎಂದು ಹೇಳಿದರು.
ಬೆಳಗಾವಿಗೆ ಶೆಟ್ಟರ್ ಫೈನಲ್: ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಜಗದೀಶ್ ಶೆಟ್ಟರ್ ಅವರ ಹೆಸರೇ ಮುಂಚೂಣಿಯಲ್ಲಿದೆ. ದೊಡ್ಡ ಪಕ್ಷ ಎಂದಾಗ ಪರ-ವಿರೋಧಗಳು ಸಹಜ. ಎಲ್ಲದೂ ಸರಿ ಹೋಗಲಿದೆ ಎಂದು ಪ್ರಹ್ಲಾದ ಜೋಶಿ ತಿಳಿಸಿದರು.
ಮಹದಾಯಿ ಹೋರಾಟಗಾರ ಬಂಧನ: ಕೇಸ್ ಕೈಬಿಡಳು ಪ್ರಯತ್ನ: ಮಹದಾಯಿ ಹೋರಾಟಗಾರ ಕುಜುಬುದ್ದಿನ್ ಖಾಜಿ ಅವರನ್ನು ರಾಜ್ಯ ರೈಲ್ವೆ ಪೊಲೀಸರು ಬಂಧಿಸಿರಬೇಕು. ಏನಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ. ಆದರೆ, ಕೇಸ್ ಕೈಬಿಡಲು ಎಲ್ಲಾ ಪ್ರಯತ್ನ ಮಾಡುತ್ತೇನೆ ಎಂದು ಸಚಿವ ಜೋಶಿ ತಿಳಿಸಿದರು.
ರಾಜ್ಯ ರೈಲ್ವೆ ಪೊಲೀಸರನ್ನು ರಾಜ್ಯ ಸರ್ಕಾರವೇ ನೇಮಕ ಮಾಡಿಕೊಂಡಿರುತ್ತದೆ. ಅವರು ಕೇಂದ್ರ ರೈಲ್ವೆ ಪೊಲೀಸರಲ್ಲ. ಬಹುಷಃ ಪ್ರಕರಣ ದಾಖಲಿಸಿ, ವಿಚಾರಣೆಗೆ ಹಾಜರಾಗದೇ ಇರಬಹುದು. ಹಾಗಾಗಿ ಬಂಧಿಸಿರಬಹುದು. ಪ್ರಕರಣ ಕೈಬಿಡಲು ಪ್ರಯತ್ನ ಮಾಡುತ್ತೇನೆ ಎಂದು ಪ್ರಹ್ಲಾದ ಜೋಶಿ ಪ್ರತಿಕ್ರಿಯಿಸಿದರು.




