*ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಿರುವುದು ನಮ್ಮನ್ನು ನಾವೇ ಗೌರವಿಸಿಕೊಂಡಂತೆ: ಸಿಎಂ*

ಪ್ರಗತಿವಾಹಿನಿ ಸುದ್ದಿ: ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಸಂಗೀತ ವಿದ್ವಾನ್ ಪ್ರಶಸ್ತಿ ಪುರಸ್ಕಾರ ಆಗಿರುವುದು ಕೇವಲ ಅವರ ಸಂಗೀತ ಸಾಧನೆಗೆ ಸಿಕ್ಕ ಗೌರವ ಅಲ್ಲ, ನಮ್ಮನ್ನು ನಾವೇ ಗೌರವಿಸಿಕೊಂಡಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ವುಗೆ ವ್ಯಕ್ತಪಡಿಸಿದರು.
ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ದಸರಾ ಪ್ರಯುಕ್ತ ಪ್ರತಿ ವರ್ಷ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಬಾರಿ ಪುಟ್ಟರಾಜ ಗವಾಯಿಗಳ ಗರಡಿಯಲ್ಲಿ ಪಳಗಿದ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ನೀಡಲಾಗಿದೆ. ಅತಿ ಬಡತನದ ಕುಟುಂಬದಿಂದ ಬಂದು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಂಗೀತ ಕ್ಷೇತ್ರದ ಕೀರ್ತಿಯನ್ನು ಹೆಚ್ಚಿಸಿದ ವೆಂಕಟೇಶ್ ಕುಮಾರ್ ಸಂಗೀತ ವಿದ್ವಾನ್ ಪುರಸ್ಕಾರಕ್ಕೆ ಅತೀ ಅರ್ಹರು. ಇದು ನಮಗೇ ಸಲ್ಲುವ ಗೌರವ ಎಂದರು.
ಸಂಗೀತಕ್ಕೆ ಆಸಕ್ತಿ , ಶ್ರದ್ದೆ, ಏಕಾಗ್ರತೆ, ಶ್ರಮ ಅಗತ್ಯ. ಇಷ್ಟು ಇದ್ದರೆ ಸಂಗೀತ ಸಾಧನೆ ಸಾಧ್ಯ ಎಂದರು.
ಕಲಾನಿಧಿ ವಿದ್ವಾನ್ ವಾಸುದೇವಾಚಾರ್ಯ ಅವರ ಹೆಸರಿನಲ್ಲಿ ಕಾರ್ಯಕ್ರಮ ರೂಪಿಸಬೇಕು ಎನ್ನುವ ಶಾಸಕ ಶ್ರೀವತ್ಸ ಅವರ ಬೇಡಿಕೆಯಂತೆ ಕಾರ್ಯಕ್ರಮ ರೂಪಿಸಲಾಗುವುದು ಎಂದು ಭರವಸೆ ನೀಡಿದರು.