Latest

ಸಾಣಿಕಟ್ಟಾ ಉಪ್ಪು ಪಾರಂಪರಿಕ ಪಟ್ಟಿಗೆ: ಅನಂತ ಹೆಗಡೆ ಆಶೀಸರ

ಪ್ರಗತಿವಾಹಿನಿ ಸುದ್ದಿ, ಕಾರವಾರ : ಜಿಲ್ಲೆಯ ಕುಮಟಾ ತಾಲೂಕಿನ ಸಾಣಿಕಟ್ಟಾ ಪ್ರದೇಶದಲ್ಲಿ ಉತ್ಪಾದಿಸಲಾಗುವ ಉಪ್ಪನ್ನು ಪಾರಂಪರಿಕ ಪಟ್ಟಿಗೆ ಸೆರ್ಪಡೆಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಂಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಿಂದಲೂ ಇಲ್ಲಿ ತಯಾರಿಸಲಾಗುವ ಉಪ್ಪು ಇಂದಿಗೂ ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ. ಇದನ್ನು ಜಿಲ್ಲೆಯ ಆಸ್ತಿಯೆಂದು ಹೇಳಬಹುದು. ಇದು ನೇರವಾದ ಕೃಷಿಕಾರ್ಯವಲ್ಲದಿದ್ದರು ಕೂಡ ಈ ಭಾಗದ ಗ್ರಾಮೀಣ ಜನರಿಗೆ ಉದ್ಯೋಗವನ್ನು ನೀಡುವಂತಹ ಗ್ರಾಮೀಣ ಉದ್ಯಮವಾಗಿದೆ. ಈ ಎಲ್ಲಾ ಅಂಶಗಳ ಹಿನ್ನಲೆಯಲ್ಲಿ ಪಾರಂಪರಿಕ ಪಟ್ಟಿಗೆ ಸೇರಿಸಿ ಮಾನ್ಯತೆ ನೀಡಬೇಕಾಗಿದೆ ಎಂದರು.
ರಾಜ್ಯ ಜೀವವೈವಿಧ್ಯ ಮಂಡಳಿಯು ಕೊರೊನಾ ಸಂದರ್ಭದಲ್ಲೂ ಕೂಡ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸಿದೆ ಮತ್ತು ಮುಂದಿನ ದಿನಗಳಲ್ಲಿ ಕೂಡ ರಾಜ್ಯಾದ್ಯಂತ ಪರಿಸರ ಕಾಳಜಿ ಮತ್ತು ಜೀವವೈವಿಧ್ಯ ಸಂರಕ್ಷಣೆಯಲ್ಲಿ ಕಾರ್ಯನಿರ್ವಹಿಸಲಿದೆ. ಅರಣ್ಯ ಕಾಯಿದೆಯಂತೆ ಜೀವವೈವಿಧ್ಯವೂ ಕೂಡ ಒಂದು ಕಾಯಿದೆ ಆಗಿದ್ದು, ಇದರಲ್ಲಿ ಜನರ ಸಹಭಾಗಿತ್ವ ಅಗತ್ಯವಾಗಿರುತ್ತದೆ. ಈ ಕಾಯಿದೆ ಅನ್ವಯ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ತಳಿಗಳನ್ನು ರಕ್ಷಣೆ ಮಾಡಬೇಕಾಗುತ್ತದೆ. ಇದರನ್ವಯ ಜಿಲ್ಲೆಯಲ್ಲಿ ವಿಶೇಷವಾಗಿ ಬೆಳೆಯುವ ಕರಿ ಈಷಾಡು ಮಾವನ್ನು ಪರಿಗಣಿಸಿ ತೋಟಗಾರಿಕೆ ಇಲಾಖೆಯ ಸಹಭಾಗಿತ್ವದಲ್ಲಿ ೧ ಸಾವಿರ ಮರ ಬೆಳೆಸಲು ಕ್ರಮ ಕೈಗೊಳ್ಳಲಾಗುವುದು. ಇದೇ ರೀತಿ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಗ್ರಾಮ ಪಂಚಾಯತ ಮಟ್ಟದಲ್ಲಿ ಅದರಲ್ಲೂ ಜಿಲ್ಲೆಯ ಸೊಂದಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಮುಂಡಕಿ ಕೆರೆ ಪಕ್ಷಿಧಾಮವನ್ನು ಗುರುತಿಸಿ ವನ್ಯಜೀವಿ ಇಲಾಖೆಯವರು ಅಧಿಕೃತವಾಗಿ ಪಕ್ಷಿಧಾಮವೆಂದು ಘೋಷಿಸುವ ಪ್ರಕ್ರಿಯೆಯು ಚಾಲನೆಯಲ್ಲಿದೆ ಎಂದರು.
ಮರಳು ಅಕ್ರಮವಾಗದಿರಲು ಕ್ರಮ ಕೈಗೊಳ್ಳಬೇಕು, ಮಂಗಗಳ ಹಾವಳಿಯಿಂದ ರೈತರಿಗೆ ಪರಿಹಾರ ನೀಡಬೇಕು ಕೀಟನಾಶಕ ಸಿಂಪಡಣೆಯಿಂದ ಜೇನುನೋಣ ನಾಶವಾಗದಂತೆ ಯಾವರೀತಿ ಕ್ರಮ ಕೈಗೊಳ್ಳಬೇಕೆಂಬ ವಿಷಯಗಳ ಕುರಿತು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಅಧಿಕಾರಿಗಳು ನೀಡುವಂತಹ ಸಲಹೆ ಸೂಚನೆಗಳ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದರು.
ಅಭಿವೃದ್ಧಿಗಾಗಿ ಯೋಜನೆಗಳು ಜಿಲ್ಲೆಗೆ ಬರುವುದು ಅನಿವಾರ್ಯ. ಜಿಲ್ಲೆಯಲ್ಲಿ ಈಗಾಗಲೇ ಕೆಲವು ಅಭಿವೃದ್ದಿ ಯೋಜನೆಗಳಾಗಿ ವನೀಕರಣ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಉಳಿದಿರುವಂತಹ ಪ್ರದೇಶವನ್ನು ಉಳಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಆದ್ದರಿಂದ ಕಾರವಾರವನ್ನು ಗ್ರೀನ್ ಬೆಲ್ಟಾಗಿ ಪರಿವರ್ತನೆಗೊಳಿಸಲು ಕಾರವಾರ ಅಂಕೋಲಾ ಮಧ್ಯೆ ವನೀಕರಣ ಯೋಜನೆಯನ್ನು ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜೀವವೈವಿಧ್ಯ ಮಂಡಳಿ ಸದಸ್ಯ ಡಾ.ಪ್ರಕಾಶ ಮೆಸ್ತಾ ಹಾಗೂ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ಸೇರಿದಂತೆ ಹಲವರು ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button