GIT add 2024-1
Laxmi Tai add
Beereshwara 33

ಸಾಮರಸ್ಯ ಸಾರುವ ಸಂಕ್ರಾಂತಿ

ಸಂಕ್ರಾಂತಿಯ ಆಧ್ಯಾತ್ಮಿಕ ಮಹತ್ವ ಕುರಿತ ವಿಶೇಷ ಲೇಖನ

Anvekar 3
Cancer Hospital 2

ಭಾರತದಲ್ಲಿ ಆಚರಿಸುವ ಅನೇಕ ಹಬ್ಬಗಳಲ್ಲಿ `ಸಂಕ್ರಾಂತಿ’ ಗೆ ತನ್ನದೇ ಆದ ವಿಶೇಷತೆ ಮತ್ತು ಆಧ್ಯಾತ್ಮಿಕ ಹಿನ್ನೆಲೆ ಇದೆ.

ಇದು ಸುಗ್ಗಿ ಸಂಭ್ರಮದ ಹಬ್ಬ, ಅರ್ಥಾತ್ ಕೃಷಿಯ ಸಂಭ್ರಮಾಚಣೆಯ ಹಬ್ಬವಾಗಿದೆ. ಸಂಕ್ರಾಂತಿ ಪದದ ಅರ್ಥವಾಗಿದೆ – ಸೂರ್ಯದೇವನ ಚಲನೆ. ಸಮೃದ್ಧಿಯ ಸಂಕೇತವೇ ಸಂಕ್ರಾಂತಿ. ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ‘ಮಕರ ಸಂಕ್ರಾಂತಿ’ ಹಬ್ಬವನ್ನು ಆಚರಿಸಲಾಗುತ್ತದೆ. ಸಂಕ್ರಾಂತಿಯನ್ನು ದೇವತೆ ಎಂದು ನಂಬಲಾಗಿದ್ದು, ಸಂಕರಾಸುರನೆಂಬ ದೈತ್ಯನ ವಧೆ ಮಾಡಲಾಯಿತು ಎಂಬ ಕಥೆಯಿದೆ. ಈ ಹಬ್ಬವು ತಿಥಿ ವಾಚಕವಾಗಿರದೇ, ತಾರೀಖು ವಾಚಕವಾಗಿರುವುದರಿಂದ ಜನವರಿ ಮಾಸದ 14 ಅಥವಾ 15ನೇ ತಾರೀಕಿನಂದು ಬರುತ್ತದೆ.

ಕರ್ನಾಟಕ, ಆಂಧ್ರಪ್ರದೇಶ, ಬಿಹಾರ, ಗೋವಾ, ಸಿಕ್ಕಿಂ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಒರಿಸ್ಸಾ, ಉತ್ತರಪ್ರದೇಶ, ಉತ್ತರಾಂಚಲ, ಪಶ್ಚಿಮ ಬಂಗಾಳದಲ್ಲಿ `ಮಕರ ಸಂಕ್ರಾಂತಿ’ ಅಥವಾ `ಸಂಕ್ರಾಂತಿ’ ಎಂದು; ತಮಿಳುನಾಡಿನಲ್ಲಿ `ಪೊಂಗಲ್’ (ಹೊಸ ವರ್ಷದ ಹಬ್ಬ) ಎಂದು; ರಾಜಸ್ಥಾನ, ಗುಜರಾತ್‍ನಲ್ಲಿ ‘ಉತ್ತರಾಯಣ’ ಎಂದು; ಹರಿಯಾಣ, ಉತ್ತರ ಪ್ರದೇಶ, ದೆಹಲಿ, ಪಂಜಾಬ್‍ನಲ್ಲಿ ‘ಮಾಘಿ’ ಎಂದು; ಅಸ್ಸಾಂನಲ್ಲಿ ‘ಮಾಘ ಬಿಹು’; ಕಾಶ್ಮೀರದಲ್ಲಿ ‘ಶಿಶುರ ಸೇಂಕ್ರಾತ’; ಶಬರಿಮಲೈ ಬೆಟ್ಟದಲ್ಲಿ ‘ಮಕರ ವಿಲಕ್ಕು’; ಎಂದು ಸಂಕ್ರಾಂತಿ ಹಬ್ಬವನ್ನು ಭಾರತಾದ್ಯಂತ ಆಚರಿಸಲಾಗುತ್ತದೆ. ನೇಪಾಳದಲ್ಲಿ ‘ಮಾಘಿ’, ಬರ್ಮಾದಲ್ಲಿ ‘ಥಿಂಗ್ಯಾನ’; ಕಾಂಬೋಡಿಯಾದಲ್ಲಿ ‘ಮೊಹಸಂಗ್ರನ’, ಥೈಲ್ಯಾಂಡ್‍ನಲ್ಲಿ ‘ಸಂಗ್ರಾನ’ ಎಂದು ಆಚರಿಸುತ್ತಾರೆ. ರಾಜಸ್ಥಾನ ಮತ್ತು ಗುಜರಾತ್‍ದಲ್ಲಿ ವಿಶೇಷವಾಗಿ ಈ ಹಬ್ಬದಂದು ಗಾಳಿಪಟ ಉತ್ಸವ ನಡೆಯತ್ತದೆ. ಗುಜರಾತ್‍ನಲ್ಲಿ ನಡೆಯುವ ಅಂತರಾಷ್ಟ್ರೀಯ ಗಾಳಿಪಟ ಉತ್ಸವವನ್ನು ನೋಡಲು ದೇಶ-ವಿದೇಶದಿಂದ ಲಕ್ಷಾಂತರ ಜನರು ಬರುತ್ತಾರೆ.
ಕರ್ನಾಟಕದಲ್ಲಿ ಈ ಹಬ್ಬದ ಮೊದಲನೆಯ ದಿನವನ್ನು `ಭೋಗಿ’, ಎರಡನೇ ದಿನವನ್ನು `ಕರಿ’ ಎಂದು ಹೇಳಲಾಗುತ್ತದೆ.

ಭೋಗಿ ಹಬ್ಬದಂದು ಋತುರಾಜ ಇಂದ್ರನನ್ನು ಪೂಜಿಸಿದರೆ, ಸಂಕ್ರಾಂತಿಯಂದು ಸೂರ್ಯನನ್ನು ಪೂಜಿಸಲಾಗುತ್ತದೆ. ಸಾಧನೆಯ ದೃಷ್ಟಿಯಿಂದ ಸಂಕ್ರಾಂತಿಯ ಸಮಯ ಚೈತನ್ಯ ಹಾಗೂ ಲಾಭದಾಯಕವಾಗಿದೆ. ಮಕರ-ಸಂಕ್ರಾಂತಿಯು ದೇವತೆಗಳ ದಿನದ ಆರಂಭವಾಗಿದೆ. ಉತ್ತರಾಯಣವೆಂದರೆ ದೇವಾಯಣ, ದಕ್ಷಿಣಾಯಣವೆಂದರೆ ಪಿತ್ರಾಯಣ. ಭಗೀರಥನ ಪ್ರಯತ್ನದಿಂದ ಗಂಗೆ ಧರೆಗೆ ಬಂದು ಸಾಗರ ಮಹಾರಾಜನ 60,000 ಮಕ್ಕಳಿಗೆ ಮುಕ್ತಿಯನ್ನು ನೀಡಿರುವ ದಿನವು ಇದೇ ಆಗಿದೆ. ಆದ್ದರಿಂದ ಗಂಗಾ ಸಾಗರ ಮೇಳವು ನಡೆಯುತ್ತದೆ. ಇದೇ ದಿನದಂದು ಮಹಾಭಾರತದ ಇಚ್ಛಾ ಮರಣಿ ಭೀಷ್ಮ ಪಿತಾಮಹನು ದೇಹ ತ್ಯಜಿಸಿದನೆಂದು ಹೇಳಲಾಗುತ್ತದೆ.

Emergency Service

ಭೋಗಿ ಹಬ್ಬದಂದು ಸಜ್ಜೆ ರೊಟ್ಟಿ, ಬದನೆಕಾಯಿ ಪಲ್ಲೆಯನ್ನು ವಿಶೇಷವಾಗಿ ತಯಾರಿಸಲಾಗುತ್ತದೆ. ದನ-ಕರುಗಳ ಪೂಜೆ ಮಾಡುವ ಪದ್ಧತಿ ಇದೆ. ಸಂಕ್ರಾಂತಿಯ ದಿನದಂದು ಎಳ್ಳನ್ನು ಹೆಚ್ಚು ಉಪಯೋಗಿಸುತ್ತಾರೆ. ಎಳ್ಳು-ನೀರಿನಿಂದ ಸ್ನಾನ ಮಾಡಿ, ಎಳ್ಳು-ಬೆಲ್ಲವನ್ನು ಸೇವಿಸಿ ಇತರರಿಗೂ ಕೊಡುತ್ತಾರೆ. ಶಿವಮಂದಿರದಲ್ಲಿ ಎಳ್ಳೆಣ್ಣೆಯ ದೀಪಗಳನ್ನು ಹಚ್ಚುವುದು, ಪಿತೃಶ್ರಾದ್ಧ ಮಾಡುವುದರಲ್ಲಿ ಎಳ್ಳು ಉಪಯೋಗ ಮಾಡುತ್ತಾರೆ. ಕಬ್ಬು, ಎಳ್ಳು, ಬೆಲ್ಲ, ಸಜ್ಜೆ, ಗೆಜ್ಜರಿ, ಕಡಲೆ ಮುಂತಾದ ಆಹಾರ ಪದಾರ್ಥಗಳ ಸೇವನೆಯು ಚಳಿಗಾಲದಲ್ಲಿ ದೈಹಿಕ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಕೆಲವರು ಕಪ್ಪು ಬಟ್ಟ್ಟೆ ಧರಿಸುತ್ತಾರೆ. ಏಕೆಂದರೆ ಈ ಹಬ್ಬವು ಯಾವಾಗಲೂ ಶೀತ ಮಾಸವಾದ ಜನವರಿ ತಿಂಗಳಲ್ಲಿ ಬರುತ್ತದೆ. ಕಪ್ಪು ಬಣ್ಣವು ಇತರ ಬಣ್ಣಗಳಿಗಿಂತ ಹೆಚ್ಚು ಶಾಖವನ್ನು ಹೀರಿಕೊಳ್ಳುತ್ತದೆ ಮತ್ತು ದೇಹವನ್ನು ಬೆಚ್ಚಾಗಿ ಇಡುತ್ತದೆ. ಅಂದು ವಿಶೇಷವಾಗಿ ನದಿ, ಕೆರೆ, ಅಥವಾ ಹಳ್ಳಗಳಲ್ಲಿ ತೀರ್ಥಸ್ನಾನವನ್ನು ಮಾಡುತ್ತಾರೆ, ಪುಣ್ಯಕ್ಷೇತ್ರಕ್ಕೆ ಹೋಗುತ್ತಾರೆ. ಸಂಕ್ರಾಂತಿಯಿಂದ ರಥಸಪ್ತಮಿವರೆಗಿನ ಕಾಲವು ಪರ್ವಕಾಲವಾಗಿರುತ್ತದೆ. ಇದರಲ್ಲಿ ದಾನ ಧರ್ಮವನ್ನು ಮಾಡಿದಾಗ ಒಳ್ಳೆಯ ಫಲವು ಸಿಗುತ್ತದೆ ಎಂದು ನಂಬುತ್ತಾರೆ. ಬಾಗಿನ ನೀಡುವುದೆಂದರೆ ಇನ್ನೊಂದು ಜೀವದಲ್ಲಿನ ದೈವತ್ವಕ್ಕೆ ತನು, ಮನ, ಧನದಿಂದ ಶರಣಾಗುವುದು. ಈ ಸಮಯದಲ್ಲಿ ನೀಡಿದ ಬಾಗಿನದಿಂದ ದೇವತೆಯ ಕೃಪೆಯಾಗುತ್ತದೆ ಎಂದು ನಂಬುತ್ತಾರೆ. ಬಾಗಿನ(ದಾನ)ದಲ್ಲಿ ನೀಡುವ ವಸ್ತುಗಳು ಧಾರ್ಮಿಕ ಗ್ರಂಥ, ಪುರಾಣ ಗ್ರಂಥ, ದೇವತೆಗಳ ಚಿತ್ರ ಮುಂತಾದ ಅಧ್ಯಾತ್ಮಕ್ಕೆ ಪೂರಕವಾಗಿರಬೇಕೆಂದು ಹೇಳುತ್ತಾರೆ. ಇದರಿಂದ ಜ್ಞಾನಶಕ್ತಿ ಮತ್ತು ಭಕ್ತಿಯು ಜಾಗೃತವಾಗುತ್ತದೆ. ಸಂಕ್ರಾಂತಿಯ ದಿನ ಪರಸ್ಪರ ಭೇಟಿಯಾಗಿ ಎಳ್ಳು-ಬೆಲ್ಲವನ್ನು ಕೊಟ್ಟು, ಒಳ್ಳೆಯದನ್ನೇ ಮಾತನಾಡಿ ಎಂದು ಹೇಳುತ್ತಾರೆ.

ಭಾರತೀಯ ಹಬ್ಬಗಳಲ್ಲಿ ಜಾತಿ, ಮತ, ವರ್ಣ ಭಾಷಾ-ಭೇದ ಮತ್ತು ಇತರೆ ಭೇದ-ಭಾವಗಳನ್ನು ಮರೆತು ಸ್ನೇಹ, ಪ್ರೀತಿ, ಮಧುರತೆ ಮತ್ತು ಭ್ರಾತೃತ್ವದ ಭಾವನೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಎಳ್ಳು ಅತಿಸೂಕ್ಷವಾದ ಆತ್ಮದ ದ್ಯೋತಕವಾಗಿದ್ದು, ಸ್ನೇಹ ಮತ್ತು ಪ್ರೀತಿಯ ಸಂಕೇತವಾಗಿದೆ. ಬೆಲ್ಲ ಮಧುರತೆಯ ಪ್ರತೀಕವಾಗಿದೆ. ನಮ್ಮಲ್ಲಿ ಪ್ರೀತಿ, ಸ್ನೇಹ ಬೆಳೆಯಬೇಕೆಂದರೆ, ನಾವು ನಮ್ಮ ದೇಹದ ಧರ್ಮಗಳನ್ನು ಮರೆತು, ವಿಶ್ವಕ್ಕೆ ಒಡೆಯನಾಗಿರುವ ಒಬ್ಬ ನಿರಾಕಾರ ಭಗವಂತನಿಗೆ ನಾವೆಲ್ಲರೂ ಮಕ್ಕಳು ಎಂದು ತಿಳಿದುಕೊಳ್ಳಬೇಕು. ಆ ಭಗವಂತನನ್ನೇ ಅಲ್ಲಾಹ, ಖುದಾ, ಗಾಡ್, ಈಶ್ವರನೆಂದು ಕರೆಯುತ್ತಾರೆ. ನಾವು ಅವನ ಸಂತಾನರು. ನಾವು ಆತ್ಮಜ್ಯೋತಿಗಳಿಗೆ ಯಾವುದೇ ಜಾತಿಯಿಲ್ಲ, ಆ ಪರಂಜ್ಯೋತಿ ಪರಮಾತ್ಮನಿಗೆ ನಾವೆಲ್ಲಾ ಆತ್ಮಜ್ಯೋತಿಗಳು ಮಕ್ಕಳಾಗಿದ್ದೇವೆ. ನಾವೆಲ್ಲರೂ ಆತ್ಮ ಜ್ಯೋತಿಗಳೆಂದು ತಿಳಿದು ವ್ಯವಹರಿಸಬೇಕಾಗಿದೆ. ಬಸವಣ್ಣನವರು ಹೇಳಿದಂತೆ `ಇವನಾರವ ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವ ಇವ ನಮ್ಮವ’ ಎನ್ನುವಂತೆ ಸರ್ವರನ್ನು ಪ್ರೀತಿಯಿಂದ ಕಾಣಬೇಕಾಗಿದೆ. ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕಯ್ಯ, ಎಂಬಂತೆ ನಮ್ಮ ಮಾತುಗಳು ಮುತ್ತಿನಂತೆ ಸ್ಪಷ್ಟ, ಮಿತ ಹಾಗೂ ಮಧುರವಾಗಿರಬೇಕು, ‘ಕಳಬೇಡ ಕೊಲಬೇಡ ಹುಸಿಯು ನುಡಿಯಲು ಬೇಡ’ ಎಂಬಂತೆ ನಮ್ಮ ಆಚಾರ-ವಿಚಾರವಿರಬೇಕು.

ಆದ್ದರಿಂದಲೇ ಹಿಂದಿ ಭಾಷೆಯಲ್ಲಿ `ಗುಡ್ ನಹಿ ದೋ, ಲೆಕಿನ್ ಗುಡ್ ಜೈಸಾ ಮೀಠಾ ತೊ ಬೋಲೋ’ ಎಂದು ಹೇಳಲಾಗುತ್ತದೆ. ಅಂದರೆ `ಬೆಲ್ಲವನ್ನು ಕೊಡದಿದ್ದರೂ ಚಿಂತೆಯಿಲ್ಲ, ಬೆಲ್ಲದಂತೆ ಸಿಹಿ ಮಾತನಾಡಿ’ ಎಂದು ಹೇಳುತ್ತಾರೆ. ಮಹಾರಾಷ್ಟ್ರದಲ್ಲಿ ಇದೇ ರೀತಿ ಎಳ್ಳು ಸಕ್ಕರೆಯ ಕುಸುರಿಕಾಳನ್ನು ಹಂಚುವಾಗ ‘ತಿಳ್ಗುಳ್ ಘ್ಯಾ ಆಣಿ ಗೋಡ್ ಗೋಡ್ ಬೋಲಾ’ ಎಂದು ಹೇಳುತ್ತಾರೆ. ನಮ್ಮಲ್ಲಿ `ವಸುಧೈವ ಕುಟುಂಬಕಂ’ ಎಂಬ ಭಾವನೆ ಜಾಗೃತವಾದಾಗ ಮಾತ್ರ ಸ್ನೇಹ, ಪ್ರೀತಿಯು ಸಹಜವಾಗಿ ಬೆಳೆಯುತ್ತದೆ. ಆತ್ಮಿಕ ಭಾವನೆಯಿಂದ ಪರಸ್ಪರರಲ್ಲಿ ಮಧುರತೆ ಕಂಡು ಬರುತ್ತದೆ. ಆಗ ಮಾತ್ರ ನಮ್ಮಲ್ಲಿ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಪರಿವರ್ತನೆ ಉಂಟಾಗುತ್ತದೆ. ಬನ್ನಿ, ಈ ರೀತಿ ನಾವೆಲ್ಲರೂ ಭಗವಂತನ ಛತ್ರಛಾಯೆಯಲ್ಲಿದ್ದು ಪ್ರಾಕೃತಿಕ ವಿಕೋಪಗಳು, ಚಂಡಮಾರುತಗಳಿಗೆ ಭಯಪಡದೇ, ಅರ್ಥಗರ್ಭಿತವಾದ ಸಂಕ್ರಾಂತಿ ಹಬ್ಬವನ್ನು ಆಚರಿಸೋಣ.


ವಿಶ್ವಾಸ. ಸೋಹೋನಿ .
ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್.

Bottom Add3
Bottom Ad 2