Kannada NewsKarnataka NewsLatestPragativahini Special

*ಸಂಸ್ಕೃತ ಭಾಷೆ ನಮ್ಮ ಸಂಸ್ಕೃತಿಯ ಪ್ರತೀಕ*

ಶ್ರೀಧರ ಗುಮ್ಮಾನಿ, ಅಧ್ಯಕ್ಷರು ಸಂಸ್ಕೃತ ಭಾರತಿ, ಬೆಳಗಾವಿ ನಗರ

*’ಸಂಸ್ಕೃತ ಭಾರತಿ’* ಶ್ರಾವಣ ಹುಣ್ಣಿಮೆಯ ದಿವಸ ಸಂಸ್ಕೃತ ದಿನವನ್ನಾಗಿ ಆಚರಿಸುತ್ತದೆ. ಅದಕ್ಕೂ ಮೂರು ದಿನ ಮೊದಲು ಮತ್ತು ಮೂರು ದಿನ ನಂತರ ಅಂದರೆ ಈ ವರ್ಷ ಆಗಸ್ಟ್ 16ರಿಂದ ಆಗಸ್ಟ್ 22ರ ತನಕ ಸಂಸ್ಕೃತ ಸಪ್ತಾಹವನ್ನು ಆಚರಣೆ  ಮಾಡಲಾಗುತ್ತದೆ. ಇದು ಭಾರತದಲ್ಲಿ ಅಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿ ‘ಸಂಸ್ಕೃತ ಭಾರತಿ’ ಮುಖಾಂತರ ಆಚರಿಸಲ್ಪಡುತ್ತದೆ.

              ಇಂದು ಇಡೀ ಜಗತ್ತಿನಲ್ಲಿ ಹೊಸ ಯಂತ್ರಗಳ ಆಯುಧಗಳ ಸೃಷ್ಟಿ ಆಗುತ್ತಿದ್ದು, ಆಧುನಿಕತೆಯ ಜೀವನಶೈಲಿ ಜನರ ಶಾಂತಿಯನ್ನು ನೆಮ್ಮದಿಯನ್ನು ಕಸಿದುಕೊಂಡಿದೆ. ಎಲ್ಲಾ ಆಧುನಿಕ ಅನುಕೂಲತೆಗಳನ್ನು, ಸಾಮಗ್ರಿಗಳನ್ನು ಹೊಂದಿದ್ದರು ನೆಮ್ಮದಿಗಾಗಿ ಮನುಷ್ಯ ತಡಕಾಡುತ್ತಿದ್ದಾನೆ. 

ಯಾವುದನ್ನು ಅನುಸರಿಸಿದರೆ ಒಳ್ಳೆಯದು, ಯಾವ ಪದ್ಧತಿ ನಮಗೆ ಬೇಕು, ಸಂತೃಪ್ತಿ ಸಮಾಧಾನಗಳು ಎಲ್ಲಿವೆ, ಅರ್ಥಪೂರ್ಣ ಬದುಕನ್ನು ಹೇಗೆ ಬದುಕಬೇಕು ಎಂಬ ವಿಚಾರ ಅವನಲ್ಲಿ ಸಹಜವಾಗಿ ಒಡಮೂಡುತ್ತಿವೆ.

 ಯಾವಾಗ ಈ ಚಿಂತನೆಗಳು ಎಲ್ಲೆಡೆಯಲ್ಲಿಯೂ ಪ್ರಾರಂಭವಾದವೋ ಜನರ ದೃಷ್ಟಿಕೋನ, ವಿಶ್ವದ ದೃಷ್ಟಿ ನಮ್ಮ ಭಾರತದ ಕಡೆ ತಿರುಗಿದೆ. ಇಲ್ಲಿಯ ಆಧ್ಯಾತ್ಮಿಕತೆ, ಯೋಗಿಕ ಜ್ಞಾನ,ಆಯುರ್ವೇದ, ಯೋಗ, ಗುರುಕುಲ ವಿದ್ಯೆ,ಭಾರತೀಯ ಜೀವನ ಪದ್ಧತಿ, ವೈಚಾರಿಕತೆ, ಅವರ ಮನಸ್ಸನ್ನು ಸೆಳೆಯುತ್ತಿದೆ. ಅದಕ್ಕೆ ಜನ ಇಡೀ ವಿಶ್ವದಲ್ಲಿ ಭಾರತದತ್ತ ಮುಖ ಮಾಡಿದ್ದಾರೆ. ಇದಕ್ಕೆ ಮುಖ್ಯವಾದ ಕಾರಣ ಇಲ್ಲಿಯ ಕೌಟುಂಬಿಕ ವ್ಯವಸ್ಥೆ, ಆಧ್ಯಾತ್ಮ, ವೇದಗಳು, ಶ್ರುತಿಗಳು, ಭಗವದ್ಗೀತೆ, ತನ್ಮೂಲಕ *’ಭಾರತೀಯ ಸಂಸ್ಕೃತಿ’* ಪರಂಪರೆ.

            ಆದರೆ ಇದೆಲ್ಲವೂ ಇರುವುದು ಸಂಸ್ಕೃತ ಭಾಷೆಯಲ್ಲಿ.ಜನರಿಗೆ ಈ ಕುರಿತು ಸದ್ಯ ದೊರೆಯುವ ಜ್ಞಾನ ಕೇವಲ ಭಾಷಾoತರದಿಂದ ಮಾತ್ರ.ಕಾರಣ ಮೂಲ ಸಂಸ್ಕೃತವನ್ನು ಅಭ್ಯಾಸ ಮಾಡಿ, ಅದನ್ನು ದೊರಕಿಸಿಕೊಂಡವರು ತುಂಬಾ ವಿರಳ.ಇದನ್ನೇ ತಿಳಿದು ಎಲ್ಲರು ಮೂಲ ತಿಳಿಯುವ ತವಕಕ್ಕೆ ಬಂದಿದ್ದಾರೆ.ಸಂಸ್ಕೃತ ಭಾಷಾ ವಾಂಗ್ಮಯಕ್ಕೆ  ಎಡತಾಕುತ್ತಿದ್ದಾರೆ. ಸಂಸ್ಕೃತವನ್ನು ಕಲಿತರೆ ಇದೆಲ್ಲವನ್ನು ತಿಳಿಯಬಹದೆಂಬ ಅರಿವು ಮೂಡುತ್ತಿದೆ.ಸಂಸ್ಕೃತ ಗ್ರಂಥಗಳ ಸೂಕ್ಷ್ಮ ಅಧ್ಯಯನದಿಂದ, ಪಠಣದಿಂದ, ಸಂಸ್ಕಾರ, ಸಂಸ್ಕೃತಿಯಿಂದ ಆಧುನಿಕತೆಯ ಅನೇಕ ಸಮಸ್ಯೆಗಳಿಗೆ ಒಂದು ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಅರಿಯಲು ಪ್ರಾರಂಭಿಸಿದ್ದಾರೆ.

 ಹಾಗಾಗಿ ಸಂಸ್ಕೃತಕ್ಕೆ ಇಂದು ಎಲ್ಲೆಡೆ ಬೇಡಿಕೆ ಬಂದಿದೆ. ದಿನದಿಂದ ದಿನಕ್ಕೆ ಸಂಸ್ಕೃತ ಅಭ್ಯಾಸ ಮಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ.ಶಾಲೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ನಮಗೂ ಸಂಸ್ಕೃತ ಬೇಕು ಎನ್ನುವ ಮಟ್ಟಿಗೆ ಬೆಳೆಯುತ್ತಿದೆ.ಈ ದಿಸೆಯಲ್ಲಿ *ಸಂಸ್ಕೃತ ಭಾರತಿ* ಕಳೆದ 42 ವರ್ಷಗಳಿಂದ ಉತ್ತಮವಾಗಿ ಕೆಲಸ ಮಾಡುತ್ತಿದೆ.

       ದಿನಕ್ಕೆರಡು ಗಂಟೆಯಂತೆ ಹತ್ತು ದಿನಗಳಲ್ಲಿ ಜನಸಾಮಾನ್ಯರೂ ಕೂಡ ಸಂಸ್ಕೃತದಲ್ಲಿ ಮಾತನಾಡುವ ಚಮತ್ಕಾರವನ್ನು *ಸಂಸ್ಕೃತ ಭಾರತಿ* ಕಲಿಸುತ್ತದೆ. ಅಷ್ಟಲ್ಲದೆ  ಇದರ ಜೊತೆಜೊತೆಗೆ ಒಂದು ಲಕ್ಷಕ್ಕೂ ಹೆಚ್ಚು ಗ್ರಂಥಗಳನ್ನು ಗುರುತಿಸಿ, E-ಸಂಪತ್ ವೆಬ್ ಸೈಟ್ ನಲ್ಲಿ  ಜನಸಾಮಾನ್ಯರಿಗೆ ದೊರಕಿಸಿ ಕೊಡುವ ಕಾರ್ಯವನ್ನು ಮಾಡುತ್ತದೆ.

              ಅಂಚೆ ಮೂಲಕ ಸಂಸ್ಕೃತ, ಸಂವಾದ ಶಾಲೆ, ಸಂಭಾಷಣ ಸಂದೇಶ ಹೀಗೆ ಹತ್ತು ಹಲವು ಪ್ರಕಲ್ಪಗಳು, *ಸಂಸ್ಕೃತ ಭಾರತಿ* ಕಡೆಯಿಂದ ನಡೆಯುತ್ತಿದೆ.ಸಮಾಜದಲ್ಲಿಯ ಉತ್ತಮ ಜನರನ್ನು ಗುರುತಿಸಿ, ಉತ್ತಮ ಸಂಸ್ಕೃತ ಶಿಕ್ಷಣವನ್ನು ಕೊಟ್ಟು, ಇಲ್ಲಿಯವರೆಗೆ ಸರಿಸುಮಾರು 180000 ಕ್ಕೂ ಹೆಚ್ಚು ಶಿಕ್ಷಕರನ್ನು *ಸಂಸ್ಕೃತ ಭಾರತಿ* ಒಂದು ಸಂಘಟಿತ ತಂಡವನ್ನಾಗಿ ಬೆಳೆಸಿದೆ.ಇದು ನಿಜಕ್ಕೂ ಅದ್ಭುತ ಕಾರ್ಯವೇ ಸರಿ.

 ಭಾಷೆ ಇದು ಕೇವಲ ಸಂವಹನಕ್ಕೆ ಮಾತ್ರ ಅಲ್ಲ. ದೇಶಭಕ್ತಿಗೂ ಕೂಡ ಪ್ರೇರಕ. ಇದಕ್ಕೆ ಉತ್ತಮ ಉದಾಹರಣೆ ಇಸ್ರೇಲ್.ಯಹೂದಿಗಳನ್ನು ತಮ್ಮ ಭಾಷೆಯಿಂದ ಪುನಃ ಗುರುತಿಸಿ, ಸ್ವದೇಶಕ್ಕೆ ಕರೆಸಿ, ಸ್ವಾಭಿಮಾನ ಬೆಳೆಸಿ ವಿಶ್ವವೇ ಬೆರಗುಗೊಳ್ಳುವಂತೆ  ಮಾಡಿತ್ತು. ಅಂಥ ಅದ್ಬುತ ಶಕ್ತಿ ಭಾಷೆಗೆ ಇದೆ.

 *’ಸಂಸ್ಕೃತ ಭಾಷೆ’* ನಮ್ಮ ಸಂಸ್ಕೃತಿಯ ಪ್ರತೀಕ. ನಮ್ಮ ಭಾರತೀಯ ಪರಂಪರೆಗೆ ಮೂಲಾಧಾರ ಅತ್ಯಂತ ವೈಜ್ಞಾನಿಕ ಮತ್ತು ಶ್ರೀಮಂತ ಭಾಷೆ. ಎಲ್ಲಾ ಭಾಷೆಗಳಿಗೂ ಸಂಸ್ಕೃತದ ಕೊಡುಗೆ ಅಪಾರ.

             ಬನ್ನಿ, *’ಸಂಸ್ಕೃತ ಭಾರತಿ’* ಈ ಸಪ್ತಾಹದಲ್ಲಿ ತಮ್ಮನ್ನು ಹಾರ್ದಿಕವಾಗಿ ಗೌರವದಿಂದ ಸ್ವಾಗತಿಸುತ್ತದೆ. ಭಾರತೀಯ ಪರಂಪರೆಯ ಬೆಳವಣಿಗೆಗೆ, ನಮ್ಮ ಜ್ಞಾನವನ್ನು  ಉನ್ನತ ಗೊಳಿಸಲು ಸಂಸ್ಕಾರ ಯುತ ವ್ಯಕ್ತಿ ಮತ್ತು ಕುಟುಂಬವಾಗಲು, ಭಾರತವನ್ನು ವಿಶ್ವ ಗುರುವಾನ್ನಾಗಿಸಲು, *’ವಸುಧೈವ ಕುಟುಂಬಕಮ್ ‘* ನಿಜ ಅರ್ಥದಲ್ಲಿ ಕಾರ್ಯರೂಪಕ್ಕೆ ತರಲು ಕೈಜೋಡಿಸಿ.

*ಜಯತು ಸಂಸ್ಕೃತಂ, ಜಯತು ಭಾರತಮ್, ಜಯತು ಮನುಕುಲಮ್*

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button