ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಭಾರತ ಅಂದ್ರನೇ ಸಂಸ್ಕೃತ. ಭಾರತ ಜಗತ್ತಿನ ಬೆಳಕು. ಏಕೆಂದರೆ ಭಾರತದ ಭಾಷೆಯೇ ಸಂಸ್ಕೃತ ಆಗಿದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಬೆಂಗಳೂರಿನಲ್ಲಿ ಇಂದು ಸಂಸ್ಕೃತ ವಿಶ್ವವಿದ್ಯಾಲಯದ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಭಾರತದಲ್ಲಿ ಸಂಸ್ಕೃತ ಮನೆ-ಮನೆಯಲ್ಲಿ ಬೆಳೆಯಬೇಕಾದರೆ ಮಠ-ಮಠಗಳಲ್ಲಿ, ಮಂದಿರ-ಮಂದಿರಗಳಲ್ಲಿರುವ ಸಂಸ್ಕೃತ ಭಾಷೆ, ಸರಳವಾಗಿ ಎಲ್ಲರೂ ಮಾತಾಡುವಂತೆ ಆಗಬೇಕು. ಸಂಸ್ಕೃತ ಉಳಿದರೆ ಮಾತ್ರ ನಾವು ಉಳಿಯಲಿಕ್ಕೆ ಸಾಧ್ಯ. ಏಕೆಂದರೆ ಭಾರತದ ಸಂಸ್ಕೃತಿ ಸಂಸ್ಕೃತದಲ್ಲಿಯೇ ಇದೆ ಎಂದರು.
ಭಾರತೀಯ ಸಾಹಿತಿಗಳನ್ನು ನಾವು ನೋಡುವುದಾದರೆ ನಾವು ಸಂಸ್ಕೃತದಲ್ಲಿಯೇ ನೋಡಬಹುದು. ಭಾರತೀಯ ನಾಗರಿಕತೆ ನಾವು ಗಮನಿಸುತ್ತ ಹೋದರೆ, ಸಂಸ್ಕೃತದಲ್ಲಿಯೇ ನಾವು ನೋಡಬಹುದು. ವೇದಗಳನ್ನು ಸಂಸ್ಕೃತ ದಲ್ಲಿಯೂ ನೋಡಬಹುದು. ವಿಜ್ಞಾನವನ್ನು ಸಂಸ್ಕೃತದಲ್ಲಿಯೇ ನೋಡಬಹುದು.
ಯೋಗವನ್ನು ಸಂಸ್ಕೃತದಲ್ಲಿಯೇ ನೋಡಬಹುದು. ದರ್ಶನ, ಶಾಸ್ತ್ರಗಳನ್ನು ಕೂಡ ಸಂಸ್ಕೃತದಲ್ಲಿ ನೋಡಬಹುದು. ನಳಂದ ವಿಶ್ವವಿದ್ಯಾನಿಲಯಗಳು, ತಕ್ಷಶಿಲಾ ವಿಶ್ವವಿದ್ಯಾನಿಲಯಗಳು ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಅದ್ಬುತವಾಗಿರುವ ಪಾತ್ರವನ್ನು ಮಾಡಿವೆ. ಪರಕೀಯ ದಾಳಿಯಿಂದ ಇವತ್ತು ವಿಶ್ವವಿದ್ಯಾನಿಲಯಗಳು ನೋಡ ಸಿಗೋದಿಲ್ಲ ಎಂದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಅದ್ಭುತವಾದ ಕಾರ್ಯವನ್ನು ಮಾಡುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೆಚ್ಚಿನ ಅನುದಾನವನ್ನು ನೀಡುವ ಅವಶ್ಯಕತೆಯೂ ಇದೆ. ಉನ್ನತ ಶಿಕ್ಷಣ ಸಚಿವರು ಆಗಿರುವ ಜಿ ಟಿ ದೇವೇಗೌಡರು ಕೂಡ ಇದರತ್ತ ಹೆಚ್ಚು ಗಮನ ಹರಿಸಲಿ ಎಂದು ಅವರು ಹೇಳಿದರು.
ರಾಜ್ಯಪಾಲ ವಜುಬಾಯಿ ವಾಲಾ, ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪದ್ಮಶೇಖರ ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ