*ಜ್ಞಾನ, ವಿವೇಕ ಮತ್ತು ಮೌಲ್ಯಗಳನ್ನು ಕಲಿಸುವಾತನೇ ಗುರು: ಜ್ಯೋತಿ ಶೆಟ್ಟಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆನಗೋಳದ ಸಂತ ಮೀರಾ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಿಸಲಾಯಿತು.
ಅತಿಥಿಯಾಗಿ ಆಗಮಿಸಿದ್ದ ವಿಮಾನ ನಿಲ್ದಾಣ ಸಲಹಾ ಮಂಡಳಿ ಸದಸ್ಯೆ ಜ್ಯೋತಿ ಶೆಟ್ಟಿ, ಗುರು ಪೂರ್ಣಿಮೆ ಎಂದರೆ ನಮ್ಮ ಜೀವನದಲ್ಲಿ ಮಾರ್ಗದರ್ಶನ ನೀಡಿದ ಗುರುಗಳನ್ನು ಗೌರವಿಸುವ ದಿನ. ಗುರುಗಳು ನಮ್ಮ ಜೀವನದಲ್ಲಿ ಜ್ಞಾನ, ವಿವೇಕ ಮತ್ತು ಸರಿಯಾದ ಮಾರ್ಗವನ್ನು ತೋರಿಸುತ್ತಾರೆ. ಅವರು ನಮ್ಮ ಅಂಧಕಾರವನ್ನು ಹೋಗಲಾಡಿಸಿ ಬೆಳಕನ್ನು ನೀಡುತ್ತಾರೆ ಎಂದರು.

ಗುರುಗಳು ನಮಗೆ ವಿದ್ಯೆಯನ್ನು ನೀಡುವುದಲ್ಲದೆ, ಜೀವನದ ಮೌಲ್ಯಗಳನ್ನು ಕಲಿಸುತ್ತಾರೆ. ಅವರು ನಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಗೆಡಹುತ್ತಾರೆ ಮತ್ತು ನಮ್ಮನ್ನು ಸಮಾಜಕ್ಕೆ ಉಪಯುಕ್ತರನ್ನಾಗಿ ಮಾಡುತ್ತಾರೆ. ಅವರು ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಅವರು ಹೇಳಿದರು.

ನಾವು ನಮ್ಮ ಗುರುಗಳಿಗೆ ಯಾವಾಗಲೂ ಕೃತಜ್ಞರಾಗಿರಬೇಕು. ಅವರ ಮಾರ್ಗದರ್ಶನ ಮತ್ತು ಪ್ರೀತಿ ನಮಗೆ ಸದಾ ಬೇಕು.
ಈ ದಿನ ಮಕ್ಕಳು ವಿವಿಧ ವೇಶಭೂಷಣ ಧರಿಸಿ, ವಿವಿಧ ಸ್ಪರ್ಧೆಗಳಿಗೆ ಭಾಗವಹಿಸಿದ್ದೀರಿ. ಇದನ್ನು ನನಗೆ ನೋಡಿ ತುಂಬಾ ಖುಷಿ ಅನಿಸುತ್ತಿದೆ. ಇಂತಹ ವಿಶೇಷ ಪ್ರತಿಭೆಗಳಿಗೆ ಬೆಂಬಲ ನೀಡಿ ಆಸಕ್ತಿಯನ್ನು ಬೆಳೆಸಿ ವೇದಿಕೆಯ ಅವಕಾಶ ಕಲ್ಪಿಸಿದ್ದು ನಿಮ್ಮ ಗುರುಗಳು. ಇಂಥ ಪ್ರತಿಭೆಗಳು ನೀವು ಸಮಾಜಕ್ಕೆ ಮತ್ತು ದೇಶಕ್ಕೆ ಒಂದು ಸಂಪನ್ಮೂಲವಾಗುವುದರೊಂದಿಗೆ, ನಮ್ಮ ಭಾರತಮಾತೆಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ, ಮಾನವೀಯ ಮೌಲ್ಯಗಳನ್ನು ಮತ್ತು ದೇಶಭಕ್ತಿಯನ್ನು ಬೆಳೆಸಲು ಮುಂದಾಗಬೇಕು ಎಂದು ಜ್ಯೋತಿ ಶೆಟ್ಟಿ ಕರೆ ನೀಡಿದರು.
ಟ್ವಿಂಕಲ್ ಗಾಂಧಿ, ಸುಜಾತಾ ದಪ್ತರದಾರ್, ರುತುಜಾ ಜಾಧವ್ ಹಾಗೂ ಗೀತಾ ವರ್ಪೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಶಾಲಾ ಪ್ರಾರ್ಥನೆ ಹಾಡಲಾಯಿತು. 6ನೇ ತರಗತಿಯ ಮಕ್ಕಳು ಗುರುಪೂರ್ಣಿಮೆಯ ಭಕ್ತಿಗೀತೆಯನ್ನು ಹಾಡಿದರು. 4ನೇ ತರಗತಿಯ ವಿದ್ಯಾರ್ಥಿಗಳಾದ ಮನೀಶ್ ಕುಮಾರ್ ಹಾಗೂ ಶ್ರೀಶೈಲ ಸುಲ್ಗೇಕರ ಅವರು ಗುರುಪೂರ್ಣಿಮೆಯ ಕುರಿತು ಭಾಷಣ ಮಾಡಿದರು.
3ನೇ ತರಗತಿಯಿಂದ 6ನೇ ತರಗತಿಯವರೆಗೆ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಅತಿಥಿಗಳಿಂದ ಬಹುಮಾನ ವಿತರಣೆ ನಡೆಯಿತು. 4ನೇ ತರಗತಿಯ ಆರಾಧ್ಯಾ ಅವರು ಜಾಗತಿಕ ಜನಸಂಖ್ಯಾ ದಿನದ ಕುರಿತು ಭಾಷಣ ಮಾಡಿದರು. ಮಕ್ಕಳಲ್ಲಿ ಭಾರತೀಯ ಸಂಸ್ಕೃತಿಯ ಗುರು ಶಿಷ್ಯ ಪರಂಪರೆಯನ್ನು ಗುರುಸ್ತೋತ್ರ ಅಭಿನಯದ ಮೂಲಕ ಪ್ರಸಿದ್ದ ಗುರು ಶಿಷ್ಯ ಪರಂಪರೆಯನ್ನು ಮಕ್ಕಳ ವೇಷಭೂಷಣದಲ್ಲಿ ಅಭಿನಯದಲ್ಲಿ ತೋರಿಸಲಾಯಿತು. ಶಾಂತಿ ಮಂತ್ರದಿಂದ ಕಾರ್ಯಕ್ರಮ ಮುಕ್ತಾಯವಾಯಿತು.