
ಪ್ರಗತಿವಾಹಿನಿ ಸುದ್ದಿ: ಗ್ರಾಮೀಣ ಯುವ ಜನತೆಯ ಭವಿಷ್ಯ ಉಜ್ವಲವಾಗಲೂ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಕಾರ್ಮಿಕ ಸಚಿವ ಎಸ್.ಸಂತೋಷ ಲಾಡ್ ಹೇಳಿದರು.
ಕೂಡ್ಲಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂತೋಷ್ ಲಾಡ್ ಫೌಂಡೇಷನ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂದುಳಿದ ತಾಲೂಕಿನಲ್ಲಿ ಉದ್ಯೋಗ ಎನ್ನುವುದು ಗಗನ ಕುಸುಮವಾಗಿದೆ, ಇದನ್ನು ಮನಗಂಡು ಫೌಂಡೇಷನ್ ಈಗಾಗಲೇ ಜಿಲ್ಲೆಯಾದ್ಯಂತ 5 ನೇ ಉದ್ಯೋಗ ಮೇಳ ಹಮ್ಮಿಕೊಂಡು ಸಾವಿರಾರು ನಿರುದ್ಯೋಗಿ ಯುವಕ, ಯುವತಿಯರಿಗೆ ಭವಿಷ್ಯ ರೂಪಿಸಿಕೊಳ್ಳಲು ಸಹಾಯ ಮಾಡಲಾಗಿದೆ ಎಂದರು.
ಈ ಮೇಳದಲ್ಲಿ ಪ್ರತಿಷ್ಠಿತ 45 ಕಂಪನಿಗಳು ಆಗಮಿಸಿದ್ದು, ವಿಧ್ಯಾರ್ಥಿಗಳು ಕೌಶಲ್ಯದ ಮೇಲೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು. ಆಯ್ಕೆಯಾಗದ ಯುವಕ, ಯುವತಿಯರು ನಿರುತ್ಸಾಹವಾಗಬೇಡಿ, ನಿಮ್ಮ ಕೌಶಲ್ಯ ಆಧರಿಸಿ ಪುನಃ ಉದ್ಯೋಗ ಮೇಳ ಆಯೋಜಿಸಿ ನಿಮಗೆ ಅವಕಾಶ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.
ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಅತಿ ಹೆಚ್ಚು ಪದವೀಧರರು ಇಲ್ಲಿ ಇದ್ದು, ನಿರುದ್ಯೋಗ ಇಲ್ಲಿ ತಾಂಡವವಾಡುತ್ತಿದೆ. ಇದನ್ನು ಮನಗಂಡು ಸಚಿವ ಸಂತೋಷ ಲಾಡ್ ಅವರೊಂದಿಗೆ ಚರ್ಚಿಸಿ ಈ ಮೇಳ ಆಯೋಜಿಸಲಾಗಿದೆ. ಗ್ರಾಮೀಣ ನಿರುದ್ಯೋಗ ಯುವತಿಯರನ್ನು ಕೇಂದ್ರೀಕರಿಸಿ ಈ ಮೇಳ ಏರ್ಪಡಿಸಿದ್ದು, ಇದರಲ್ಲಿ ಆಯ್ಕೆಯಾದವರು ವಿನಾಃ ಕಾರಣ ಸಬುಬೂ ಹೇಳದೆ ಕಂಪನಿಯು ಸ್ಥಳ ನಿಯೋಜನೆ ಮಾಡಿದಲ್ಲಿ ಹೋಗಿ ಕರ್ತವ್ಯ ನಿರ್ವಹಿಸಿ ಎಂದು ತಿಳಿಸಿದರು.
ಬೇಡಿಕೆಗೆ ಅನುಗುಣವಾಗಿ ಮುಂಬರುವ ದಿನಗಳಲ್ಲಿ ಮತ್ತೇ ಈ ಉದ್ಯೋಗ ಮೇಳ ಹಮ್ಮಿಕೊಂಡು ನಿರುದ್ಯೋಗಿಗಳಿಗೆ ಅವಕಾಶ ಒದಗಿಸುವುದಾಗಿ ತಿಳಿಸಿದರು. ಸಂಸದ ಈ ತುಕಾರಾಂ, ಪಪಂ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನ ಗೌಡ, ಹೊಸಹಳ್ಳಿ ಬ್ಲಾಕ್ ಅಧ್ಯಕ್ಷ ಕುಮಾರಗೌಡ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ಶುಕೂರ್, ಸದಸ್ಯರಾದ ಲಕ್ಷ್ಮಿದೇವಿ, ಕೆ.ಈಶಪ್ಪ, ಬಾಸೂನಾಯ್ಕ್, ಮುಖಂಡರಾದ ಎನ್.ಟಿ.ತಮ್ಮಣ್ಣ, ಕುರಿ ಶಿವಮೂರ್ತಿ, ಹಿರೇಕುಂಬಳಗುಂಟೆ ಉಮೇಶ್, ನಾಗಮಣಿ ಜಿಂಕಾಲ್, ಉದಯ ಜನ್ನು, ಮಾದಿಹಳ್ಳಿ ನಜೀರ್ ಇದ್ದರು.
203 ಪದವಿ ವಿದ್ಯಾರ್ಥಿಗಳು, 121ಸ್ನಾತಕೋತ್ತರ ಪದವೀಧರರು, 213 ಐಟಿಐ ಹಾಗೂ ಡಿಪ್ಲೊಮಾ, 166 ಎಸ್ಎಸ್ಎಲ್ ಸಿ ಮತ್ತು ಪಿಯು ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡು ಸಂದರ್ಶನದಲ್ಲಿ ಭಾಗಿಯಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ