Belagavi NewsBelgaum NewsBusinessKannada NewsKarnataka NewsPolitics

*ಸರಸ್ ಮೇಳಕ್ಕೆ ಅದ್ಧೂರಿ ತೆರೆ: 1.32 ಕೋಟಿಗೂ ಹೆಚ್ಚು ದಾಖಲೆಯ ವಹಿವಾಟು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಮೂಲಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಡಿ.12 ರಿಂದ ಡಿ.21 ರವರೆಗೆ ಬೆಳಗಾವಿಯ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರು ಉತ್ಪಾದಿಸಿದ ವಸ್ತುಗಳ ರಾಜ್ಯಮಟ್ಟದ ವಸ್ತು ಪ್ರದರ್ಶನ ಸರಸ್ ಮೇಳ-2025 ಅದ್ಧೂರಿಯಾಗಿ ತೆರೆಕಂಡಿದೆ.

ಡಿ.12 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಳವನ್ನು ಉದ್ಘಾಟಿಸಿದ್ದರು. ಸರಸ್ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ಸ್ವಸಹಾಯ ಸಂಘದ ಮಹಿಳೆಯರೊಂದಿಗೆ ಚರ್ಚಿಸಿ, ಪ್ರೋತ್ಸಾಹಿಸುವುದರ ಜೊತೆಗೆ ಅಕ್ಕ ಫುಡ್ ಕೋರ್ಟ್ನ ವಿವಿಧ ಖಾಧ್ಯಗಳನ್ನು ಸವಿದು ಶ್ಲಾಘನೆ ವ್ಯಕ್ತಪಡಿಸಿದ್ದರು. ಜೊತೆಗೆ ವಿವಿಧ ಇಲಾಖೆಯ ಸಚಿವರು, ರಾಜ್ಯಮಟ್ಟದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

115 ವಿವಿಧ ಮಳಿಗೆಗಳು

ಮೇಳದಲ್ಲಿ ಒಟ್ಟು 115 ಮಳಿಗೆಗಳನ್ನು ನಿರ್ಮಾಣ ಮಾಡಲಾಗಿತ್ತು. ಇದರಲ್ಲಿ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರು ತಯಾರಿಸಿದ ವಿವಿಧ ವಸ್ತುಗಳು ಹಾಗೂ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನದಲ್ಲಿ ಚನ್ನಪಟ್ಟಣದ ಗೊಂಬೆಗಳು, ಕಿನ್ನಾಳ ಆಟಿಕೆಗಳು, ಇಳಕಲ್ ಸೀರೆಗಳು, ಮೊಳಕಾಲ್ಮೂರು ರೇಷ್ಮೆ ಸೀರೆಗಳು, ಧಾರವಾಡದ ಕಸೂತಿ ವಸ್ತುಗಳು, ಬಳ್ಳಾರಿಯ ಲಂಬಾಣಿ ಕಸೂತಿ ಕಲೆ, ಮೈಸೂರಿನ ಇನ್ಲೇ ಕಲೆಗಳು, ಬಿಜಾಪುರದ ಕೈಮಗ್ಗದ ಬ್ಯಾಗ್ಗಳು, ಬೆಳಗಾವಿಯ ಖೌದಿ, ಗೋಕಾಕಿನ ಕರದಂಟು, ಬಳ್ಳಾರಿಯ ಫಿಗ್ ರೋಲ್ ಮತ್ತು ಕರಕುಶಲ ವಸ್ತುಗಳು ಸೇರಿದಂತೆ ಒಟ್ಟು 115 ಮಳಿಗೆಗಳಲ್ಲಿ ತರಹೇವಾರಿ ಉತ್ಪನ್ನಗಳು ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾದವು. 

Home add -Advt

ಅಕ್ಕ ಲೈವ್ ಫುಡ್ ಕೋರ್ಟ್

ರಾಜ್ಯದ ವಿವಿಧ ಜಿಲ್ಲೆಗಳ ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ಉಣಬಡಿಸುತ್ತಿದ್ದ ಅಕ್ಕ ಲೈವ್ ಫುಡ್ ಕೋರ್ಟ್ನ 15 ಮಳಿಗೆಗಳಲ್ಲಿ ಗದಗಿನ ಗಿರ್ಮಿಟ್, ಮಿರ್ಚಿ ಬಜ್ಜಿ, ಮಂಗಳೂರಿನ ಬನ್ಸ್, ಗೋಲಿಬಜೆ, ಬೆಳಗಾವಿ ಸಾಬೂದಾನಿ ವಡೆ, ಪಾವ್ ಬಾಜಿ, ಚಿಕ್ಕಬಳ್ಳಾಪುರ ದೋಸೆ, ಉಡುಪಿ ನೀರ್ದೋಸೆ ಚಿಕನ್ ಸುಕ್ಕಾ, ಬಳ್ಳಾರಿ ಚಿಕನ್ ವೆರೈಟಿ ತಿನಿಸುಗಳು, ಉತ್ತರಕನ್ನಡದ ಫಿಶ್ ಫ್ರೈ ಹೀಗೆ ವಿವಿಧ ಜಿಲ್ಲೆಗಳ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಆಹಾರ ಪದಾರ್ಥಗಳು ಬೆಳಗಾವಿ ಜನರ ಬಾಯಲ್ಲಿ ನೀರೂರಿಸುವಂತಿತ್ತು. 

1.32 ಕೋಟಿ ರೂ. ದಾಖಲೆಯ ವಹಿವಾಟು 

ಕಳೆದ ಐದು ವರ್ಷಗಳಿಂದ ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ನಡೆಯುತ್ತಾ ಬಂದಿರುವ ಸರಸ್ ಮೇಳದಲ್ಲಿ ಈ ಬಾರಿ ದಾಖಲೆಯ ವಹಿವಾಟು ನಡೆದಿದೆ. 10 ದಿನಗಳಲ್ಲಿ 1,32,66,299 ರೂಪಾಯಿ ವಹಿವಾಟು ಆಗುವ ಮೂಲಕ ದಾಖಲೆ ನಿರ್ಮಿಸಿದೆ. ಸರಸ್ ಮೇಳದಲ್ಲಿ ಬಾಗವಹಿಸಿದ ವಿವಿಧ ಜಿಲ್ಲೆಯ ಮಹಿಳಾ ಸ್ವ-ಸಹಾಯ ಗುಂಪುಗಳ ಮಹಿಳೆಯರು ಉತ್ತಮ ಮಾರಾಟಕ್ಕೆ ಹರ್ಷ ವ್ಯಕ್ತಪಡಿಸಿದರು. ಮೇಳದಲ್ಲಿ ಹೆಚ್ಚು ಮಾರಾಟ ದಾಖಲಿಸಿದ ಸ್ವಸಹಾಯ ಗುಂಪುಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. 

ಗಮನ ಸೆಳೆದ ಸಾಮರ್ಥ್ಯಾಭಿವೃದ್ಧಿ ತರಬೇತಿ

ಸರಸ್ ಮೇಳದಲ್ಲಿ ಪ್ರತಿದಿನ ಸ್ವ ಸಹಾಯ ಗುಂಪಿನ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ  ಸ್ವ ಉದ್ಯೋಗ ಕೈಗೊಳ್ಳಲು ಹಾಗೂ ಸರ್ಕಾರದ ಇತರೆ ಇಲಾಖೆಗಳ ಸೌಲಭ್ಯಗಳ ಕುರಿತು ನಡೆದ ತರಬೇತಿ ಅಧಿವೇಶನಗಳಲ್ಲಿ ಪ್ರತಿದಿನ  ಮುನ್ನೂರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ಜೀವನೋಪಾಯ ಉದ್ಯೋಗ ಕೈಗೊಳ್ಳಲು ವಿವಿಧ ಮಾಹಿತಿ ಪಡೆದಿದ್ದಾರೆ.

ಸಾಂಸ್ಕೃತಿಕ ರಸದೌತಣ

ಮೇಳದ ಆವರಣದಲ್ಲಿ ಪ್ರತಿದಿನ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಆಯೋಜಿಸಲಾಗಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನಸೂರೆಗೊಳಿಸಿದವು. ವಿಶೇಷವಾಗಿ ಅಜಯ್ ವಾರಿಯರ್, ಫೈಝಲ್ ಬ್ಯಾಂಡ್ನ ಹಾಡು, ರುಮಿತ್ ಹಾಗೂ ಸಂದೇಶ್ ಶೆಟ್ಟಿ ಅವರ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮಗಳು ಬೆಳಗಾವಿ ಜನತೆಗೆ ಸಾಂಸ್ಕೃತಿಕ ರಸದೌತಣ ನೀಡಿತು.

“5ನೇ ಸರಸ್ ಮೇಳ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಒಟ್ಟು ರೂ.1.32 ಕೋಟಿ ವ್ಯಾಪಾರ-ವಹಿವಾಟು ನಡೆದಿದೆ. ಮೇಳದಲ್ಲಿ ಪಾಲ್ಗೊಂಡ ಸಾರ್ವಜನಿಕರಿಗೆ ಧನ್ಯವಾದಗಳು. ಮೇಳದ ಯಶಸ್ಸಿನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸ್ವ-ಸಹಾಯ ಗುಂಪಿನ ಮಹಿಳೆಯರು, ಮಾದ್ಯಮಗಳು ಹಾಗೂ ಪೊಲೀಸ್ ಇಲಾಖೆಯ ಪಾತ್ರ ಶ್ಲಾಘನೀಯ” ಎಂದು ಸಿಇಓ ರಾಹುಲ್ ಶಿಂಧೆ ತಿಳಿಸಿದ್ದಾರೆ.

Related Articles

Back to top button