Latest

ರಾಜ್ಯದ ಇತಿಹಾಸದಲ್ಲಿ ಇಂದು ಐತಿಹಾಸಿಕ ದಿನ – ಡಿ.ಕೆ.ಶಿವಕುಮಾರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಹಾತ್ಮ ಗಾಂಧಿ ಪ್ರಾರಂಭಿಸಿದ ಸರ್ವೋದಯ ಹೋರಾಟ ಹಾಗೂ ಧ್ವನಿ ಮೇಲೆ ಖರ್ಗೆ ಅವರು ವಿಶ್ವಾಸ ಇಟ್ಟಿದ್ದಾರೆ. ಹೀಗಾಗಿ ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮಕ್ಕೆ ಸರ್ವೋದಯ ಸಮಾವೇಶ ಎಂದು ಹೆಸರಿಟ್ಟಿದ್ದೇವೆ. 52 ವರ್ಷಗಳ ನಂತರ ರಾಜ್ಯದ ನಾಯಕರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಇಂದು ಐತಿಹಾಸಿಕ ದಿನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸರ್ವೋದಯ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಾನು ಆಗಾಗ್ಗೆ ಒಂದು ಮಾತು ಹೇಳುತ್ತೇನೆ. ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ ಮರಣ ಖಚಿತ ಎಂದು. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ನಾವು ತ್ರಿವರ್ಣ ಧ್ವಜದ ಆಶ್ರಯದಲ್ಲಿ ದೇಶಕ್ಕೆ ಸ್ವಾತಂತ್ರ್ಯ, ಶಕ್ತಿ ತಂದುಕೊಟ್ಟಿದ್ದೇವೆ. ಖರ್ಗೆ ಅವರ ಈ ಜವಾಬ್ದಾರಿ ಮಹತ್ವವಾಗಿದೆ. ಗಾಂಧಿ, ಸುಭಾಷ್ ಚಂದ್ರ ಬೋಸ್, ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ನಿಜಲಿಂಗಪ್ಪ, ರಾಹುಲ್ ಗಾಂಧಿ ಅವರು ಅಲಂಕರಿಸಿದ ಸ್ಥಾನದಲ್ಲಿ ಖರ್ಗೆ ಅವರು ಕೂತಿದ್ದಾರೆ ಎಂದರು.

ಕಾರ್ಮಿಕರ ಪುತ್ರನಾಗಿ ಕುಗ್ರಾಮದಿಂದ ಬಂದು ದೆಹಲಿವರೆಗೂ ಬೆಳೆದು ನಿಂತಿದ್ದಾರೆ. ಪಕ್ಷ ನಿಷ್ಠೆ, ಪ್ರಾಮಾಣಿಕತೆ, ತ್ಯಾಗಕ್ಕೆ ಮತ್ತೊಂದು ಹೆಸರು ಮಲ್ಲಿಕಾರ್ಜುನ ಖರ್ಗೆ ಅವರು. ನಾನು ಅವರೊಂದಿಗೆ 1980 ರಿಂದ ಒಡನಾಟ ಹೊಂದಿದ್ದೇನೆ. ಪಕ್ಷ ನಿಷ್ಟೆಗಾಗಿ ಎಷ್ಟೇ ನೋವು ಇದ್ದರೂ ಒಂದು ದಿನವೂ ಮಾಧ್ಯಮದ ಮುಂದೆ ಹೇಳದೆ ಸಾಕಷ್ಟು ತ್ಯಾಗ ಮಾಡಿದ್ದಾರೆ. ಅವರು ಈ ಅಧಿಕಾರ ಹುಡುಕಿಕೊಂಡು ಹೋಗಿಲ್ಲ. ಅವರ ತ್ಯಾಗದ ಗುಣದಿಂದ ಈ ಸ್ಥಾನವೇ ಅವರನ್ನು ಹುಡುಕಿಕೊಂಡು ಬಂದಿದೆ ಎಂದು ಹೇಳಿದರು.

ಜಾತಿ, ಧರ್ಮದ ಮೇಲೆ ನಂಬಿಕೆ ಇಟ್ಟವರಲ್ಲ. ಪರಿಶಿಷ್ಟ ಜಾತಿ ಆಧಾರದ ಮೇಲೆ ಅಧಿಕಾರ ಸಿಗಬೇಕು ಎಂದು ಬಯಸಿದವರಲ್ಲ. ಸಚಿವ ಸಂಪುಟದಲ್ಲಿ, ಅವರ ನೇತೃತ್ವದ ವಿರೋಧ ಪಕ್ಷದಲ್ಲಿ, ಅವರ ಅಧ್ಯಕ್ಷತೆಯಲ್ಲಿ ನಾನು ಕೆಲಸ ಮಾಡಿದ್ದೇನೆ. ಈಗ ಅವರು ಎಐಸಿಸಿ ಅಧ್ಯಕ್ಷರಾಗಿರುವಾಗ ಅವರ ಕೆಳಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಪಕ್ಷ ನಿಷ್ಠೆ, ತ್ಯಾಗದ ಜತೆಗೆ ಸಮಾಜದವರಿಗೂ ನ್ಯಾಯ ಒದಗಿಸಲು ಕೆಲಸ ಮಾಡಿಕೊಂಡು ಬಂದಿದ್ದಾರೆ.

ನನ್ನ ತಾಯಿ ಸಮಾನರಾದ ಸೋನಿಯಾ ಗಾಂಧಿ ಅವರು ಇಂದು ಅಧ್ಯಕ್ಷ ಸ್ಥಾನ ತ್ಯಾಗ ಮಾಡಿದ್ದಾರೆ. ನಾನು ಹಾಗೂ ಸಂಸದ ಸುರೇಶ್ ಅವರು ಅವರನ್ನು ಭೇಟಿಯಾಗಿ 1 ಗಂಟೆ ಕಾಲ ಚರ್ಚೆ ಮಾಡಿದೆವು. ಗಾಂಧಿ ಕುಟುಂಬ ಇಲ್ಲದೇ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಬಗ್ಗೆ ಮಾತನಾಡಿದೆವು. ಭಾರತ ಐಕ್ಯತಾ ಯಾತ್ರೆ ಉದ್ಘಾಟನೆಗೆ ಆಹ್ವಾನ ಕೊಟ್ಟೆವು. ದಸರಾ ಹಬ್ಬದ ಸಮಯದಲ್ಲಿ ಅವರು ರಾಜ್ಯಕ್ಕೆ ಆಗಮಿಸಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಶಕ್ತಿ ತುಂಬಿದರು.

ರಾಹುಲ್ ಗಾಂಧಿ ಅವರು ದೇಶದ ಏಕತೆ, ಸಮಗ್ರತೆ, ಐಕ್ಯತೆ, ಶಾಂತಿ, ನಿರುದ್ಯೋಗಿ ಯುವಕರು, ರೈತರು, ಕಾರ್ಮಿಕರಿಗೆ ಶಕ್ತಿ ತುಂಬಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹೆಜ್ಜೆ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಹೆಜ್ಜೆ ಹಾಕುವ ಸಮಯದಲ್ಲಿ ಈ ಚುನಾವಣೆ ನಡೆಯಿತು. ನಮ್ಮ ರಾಜ್ಯದ ನಾಯಕರನ್ನು ಈ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹೆಸರು ಸೂಚಿಸುವ ಭಾಗ್ಯ ನಮಗೆ ಸಿಕ್ಕಿತು ಎಂದು ಹೇಳಿದರು.

ಈ ದೇಶದ 90ರಷ್ಟು ಮಂದಿ ಮಲ್ಲಿಕಾರ್ಜುನ ಖರ್ಗೆ ಅವರ ಪರ ಮತ ಹಾಕಿದರು. ಈ ಇತಿಹಾಸ ತಿರುಚಲು ಸಾಧ್ಯವಿಲ್ಲ. ಯಾತ್ರೆ ರಾಜ್ಯದಲ್ಲಿ ಮುಕ್ತಾಯ ಆಗುವ ಹೊತ್ತಿಗೆ ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

ಪುರಂದರದಾಸರು ಒಂದು ಮಾತು ಹೇಳಿದ್ದಾರೆ. ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ, ಪದುಮನಾಭನ ಪಾದ ಭಜನೆ ಪರಮ ಸುಖವಯ್ಯ. ಖರ್ಗೆ ಅವರು ರಾಜ್ಯಕ್ಕೆ ಮಾತ್ರ ಅಲ್ಲ, ಇಡೀ ರಾಷ್ಟ್ರದಲ್ಲಿ ಪಕ್ಷಕ್ಕೆ ಶಕ್ತಿ ತುಂಬಲು ಮುಂದಾಗಿದ್ದಾರೆ. ಸೋನಿಯಾ ಗಾಂಧಿ ಅವರು ಸಂಸತ್ತಿನಲ್ಲಿ ಮಾತನಾಡುತ್ತಾ ಮಲ್ಲಿಕಾರ್ಜುನ ಖರ್ಗೆ ಅವರು ಬಡವರ ಪರವಾಗಿ ಬಂಡೆಯಂತೆ ಕೆಲಸ ಮಾಡುವ ನಾಯಕ ಎಂದು ಗುಣಗಾನ ಮಾಡಿದ್ದರು. ರೈಲ್ವೆ, ಕಾರ್ಮಿಕ ಸಚಿವರಾಗಿ ಇತಿಹಾಸ ನಿರ್ಮಿಸಿದ್ದಾರೆ. ಕಾರ್ಮಿಕರಿಗೆ ಸಾಂವಿಧಾನಿಕ ಹಕ್ಕು ನೀಡಿದ್ದಾರೆ ಎಂದರು.

ಇಎಸ್ ಐ ಆಸ್ಪತ್ರೆಯನ್ನು ಮೆಡಿಕಲ್ ಕಾಲೇಜು ಮಾಡಿ ಕಾರ್ಮಿಕರ ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆದು ವೈದ್ಯರಾಗುವಂತೆ ಮಾಡಿರುವುದು ಮಲ್ಲಿಕಾರ್ಜುನ ಖರ್ಗೆ ಅವರು.
ಈ ದೇಶಕ್ಕೆ ಹಾಗೂ ರಾಜ್ಯಕ್ಕೆ ಮತ್ತೊಂದು ಇತಿಹಾಸ ಎಂದರೆ ಅವರು ಕಲ್ಯಾಣ ಕರ್ನಾಟಕಕ್ಕೇ ಆರ್ಟಿಕಲ್ 371ಜೆ ತಂದದ್ದು. ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಸರ್ಕಾರ ಕಲ್ಯಾಣ ಕರ್ನಾಟಕಕ್ಕೇ ವಿಶೇಷ ಸ್ಥಾನ ಮಾನ ನೀಡಲು ಆಗುವುದಿಲ್ಲ ಎಂದು ಹೇಳಿತ್ತು. ಆದರೆ ಈ ಹಿಂದುಳಿದ ಪ್ರದೇಶ, ಜನರಿಗೆ ನ್ಯಾಯ ಒದಗಿಸಲು ಖರ್ಗೆ ಅವರು ಹೋರಾಟ ಮಾಡಿದರು. ಅವರು ದೆಹಲಿಗೆ ಸಂಸತ್ ಸದಸ್ಯರಾಗಿ ಹೋದಾಗ, ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರನ್ನು ಒಪ್ಪಿಸಿ ಇತರೆ ವಿರೋಧ ಪಕ್ಷಗಳ ಬೆಂಬಲ ಪಡೆದು ವಿಶೇಷ ಸ್ಥಾನ ಮಾನ ಸಿಗುವಂತೆ ಮಾಡಿದರು. ಇದು ಖರ್ಗೆ ಅವರ ಜೀವನ ಸಾಧನೆಯ ಸಾಕ್ಷಿಗುಡ್ಡೆ. ನಾವು ಎಷ್ಟು ದಿನ ಬದುಕುತ್ತೇವೆ, ಅಧಿಕಾರದಲ್ಲಿ ಇರುತ್ತೇವೆ ಎಂಬುದು ಮುಖ್ಯವಲ್ಲ. ಏನು ಮಾಡಿದ್ದೇವೆ ಎಂದು ಮುಖ್ಯ ಎಂದರು.

ಖರ್ಗೆ ಅವರು ಗೃಹ, ನೀರಾವರಿ, ಕಂದಾಯ, ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಸಮಯದಲ್ಲಿ ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ. ಇಡೀ ರಾಷ್ಟ್ರದಲ್ಲಿ ಸ್ಟೀಫನ್ ಅವರ ನಂತರ ದಕ್ಷಿಣ ಭಾರತದಿಂದ ದೊಡ್ಡ ಧ್ವನಿಯಾಗಿ ಬೆಳೆದಿರುವುದು ಖರ್ಗೆ ಅವರು.

ಈ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಅವರು ಚುನಾವಣೆ ಸಮಯದಲ್ಲಿ 600 ಭರವಸೆ ನೀಡಿದ್ದು, ಅದರಲ್ಲಿ 550 ಈಡೇರಿಸಿಲ್ಲ. ನಾವು ದಿನನಿತ್ಯ ಪ್ರಶ್ನೆ ಹಾಕಿ ಅವರಿಂದ ಉತ್ತರ ಕೇಳುತ್ತಿದ್ದೇವೆ. ಆದರೆ ಇದುವರೆಗೂ ಒಂದೂ ಪ್ರಶ್ನೆಗೂ ಉತ್ತರ ನೀಡಲು ಆಗಿಲ್ಲ. ಡಬಲ್ ಇಂಜಿನ್ ಸರ್ಕಾರ ನೀರಾವರಿ ಯೋಜನೆ ಬಗ್ಗೆ ಕೊಟ್ಟ ಭರವಸೆ ಏನಾಯ್ತು? ನುಡಿದಂತೆ ನಡೆಯಲು ನಿಮ್ಮಿಂದ ಆಗಲಿಲ್ಲ. ಪಂಪ್ ಸೆಟ್ ಗೆ ಸೋಲಾರ್ ಹಾಕುವ ರೈತರಿಗೆ ಶೆ.100ರಷ್ಟು ಸಬ್ಸಿಡಿ ನೀಡುತ್ತೇವೆ ಎಂದಿರಿ, ಅದು ಏನಾಯ್ತು? ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಜನಸಂಖ್ಯೆ ಆಧಾರದ ಮೇಲೆ ಬಜೆಟ್ ಅನುದಾನ ನೀಡಲು ಕಾನೂನು ತೆಗೆದುಕೊಂಡು ಬಂದೆವು. ಆದರೆ ನೀವು ಅವರಿಗೆ ರಕ್ಷಣೆ ನೀಡಲಿಲ್ಲ. ಮದಕರಿ ನಾಯಕರ ಹೆಸರಲ್ಲಿ ಮನೆ ನಿರ್ಮಾಣ ಯೋಜನೆಗೆ 6500 ಕೋಟಿ ನೀಡುವುದಾಗಿ ಹೇಳಿದ್ದೀರಿ. ಅದನ್ನು ಮಾಡಲಿಲ್ಲ. ಅಧಿಕಾರಕ್ಕೆ ಬಂದ ನಂತರ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿ 1 ಲಕ್ಷದ ವರೆಗೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದೀರಿ. ಅದನ್ನು ಮಾಡಲಿಲ್ಲ. ಪ್ರಧಾನ ಮಂತ್ರಿ ಅವರು ಹೇಳಿದಂತೆ ರೈತರ ಆದಾಯ ಡಬಲ್ ಆಯಿತೆ? ರೈತರಿಗೆ ನೇರ ಮಾರುಕಟ್ಟೆ ನಿರ್ಮಾಣ ಎಂದಿರಿ. ಅವರಿಗೆ ಸಹಾಯ ಮಾಡಲು ಆಗಲಿಲ್ಲ. ರೈತನಿಗೆ ಪಿಂಚಣಿ, ನಿವೃತ್ತಿ, ಬಡ್ತಿ, ಲಂಚ ಇಲ್ಲ. ಆದರೆ ನಿಮ್ಮ ಸರ್ಕಾರ 40% ಲಂಚ ಪಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ರೈತರ ಬೆಳೆಗೆ ಉತ್ತಮ ಬೆಲೆ ನೀಡಲಿಲ್ಲ. ಆದಾಯ ಪಾತಾಳ ಸೇರಿದ್ದು, ಬೆಲೆ ಗಗನಕ್ಕೇರಿದೆ. ರಾಹುಲ್ ಗಾಂಧಿ ಅವರು ರೇಷ್ಮೆ ಕೃಷಿಕರ ಜತೆ ಮಾತುಕತೆ ಮಾಡಿದರು. ನೀವು ರೇಷ್ಮೆ ರೈತರಿಗೆ 1700 ಕೋಟಿ ನೀಡುವುದಾಗಿ ಹೇಳಿದ್ದೀರಿ. 1 ಕೋಟಿಯನ್ನು ಕೊಡಲಿಲ್ಲ. ಹೀಗೆ ನೀವು ನುಡಿದಂತೆ ನಡೆಯಲಿಲ್ಲ. ವಚನಭ್ರಷ್ಟರಾಗಿದ್ದೀರಿ. ನಾನು ಅಧ್ಯಕ್ಷ ಸ್ಥಾನ ಅಲಂಕರಿಸಿದ ನಂತರ ಕಾಂಗ್ರೆಸ್ಸಿಗರೆಲ್ಲರೂ ಶಕ್ತಿ ಮೀರಿ ದುಡಿದು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಾತಾವರಣ ನಿರ್ಮಿಸಿದ್ದೀರಿ.

ರಾಹುಲ್ ಗಾಂಧಿ ಅವರು ಯಾತ್ರೆ ಸಮಯದಲ್ಲಿ ಎಲ್ಲಾ ವರ್ಗದವರ ಜತೆ ಮಾತನಾಡಿ ನಮಗೆ ಶಕ್ತಿ ತುಂಬಿದ್ದಾರೆ. ಈಗ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಾವು ನೀವೆಲ್ಲ ದುಡಿದು ಉದಯಪುರ ಸಂಕಲ್ಪ ಶಿಬಿರದಲ್ಲಿ ತೀರ್ಮಾನಿಸಿರುವಂತೆ ಪ್ರತಿ ಬೂತ್ ಮಟ್ಟಕ್ಕೆ ಈ ಯಾತ್ರೆ ತಲುಪಿಸಲು ಕಾರ್ಯಕ್ರಮ ಮಾಡಲಾಗುವುದು. ಆ ಮೂಲಕ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶಕ್ತಿ ತುಂಬೋಣ. ಈ ಸಮಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸುತ್ತಾ, ನಾವೆಲ್ಲರೂ ನಿಮಗೆ ಬೆಂಬಲವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡುತ್ತೇನೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಕರ್ನಾಟಕ ಉಸ್ತುವಾರಿ ಸುರ್ಜಿತ್ ಸಿಂಗ್ ಸರ್ಜೆವಾಲ, ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಬೆಳಗಾವಿ ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ್, ಅಂಜಲಿ ನಿಂಬಾಳಕರ್, ಮಹಾಂತೇಶ ಕೌಜಲಗಿ, ಗಣೆಶ ಹುಕ್ಕೇರಿ, ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವರು, ಹಾಲಿ ಶಾಸಕರು ಸೇರಿದಂತೆ ಪಕ್ಷದ ಎಲ್ಲ ಮುಖಂಡರು ಭಾಗವಹಿಸಿದ್ದರು.

ಪಾವಗಡ ಸೋಲಾರ್ ಪಾರ್ಕ್ ಯೋಜನೆ ಮೆಚ್ಚಿ ಕೇಂದ್ರ ಸರ್ಕಾರ ಪ್ರಶಸ್ತಿ ಕೊಟ್ಟಿದೆ; ರಾಜ್ಯ ಸರ್ಕಾರ ಯಾವ ತನಿಖೆ ನಡೆಸಿದರೂ ಸ್ವಾಗತ: ಡಿ.ಕೆ.ಶಿವಕುಮಾರ್

https://pragati.taskdun.com/politics/pawagada-solar-parkd-k-shivakumarpressmeet/

https://pragati.taskdun.com/latest/mallikarjun-kharge-takes-oath-on-wednesday/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button