Karnataka NewsLatestPolitics

*ಸತೀಶ್ ಜಾರಕಿಹೊಳಿ – ಕುಮಾರಸ್ವಾಮಿ ಭೇಟಿ : ಡಿ.ಕೆ.ಶಿವಕುಮಾರ ಪ್ರತಿಕ್ರಿಯೆ*

*ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಸಂಬಂಧ ಕೇಂದ್ರದಿಂದ ಮಲತಾಯಿ ಧೋರಣೆ: ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ, *ಬೆಂಗಳೂರು *

“ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಸಂಬಂಧ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ತೋರುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿಯ ಕರ್ನಾಟಕ ಭವನದಲ್ಲಿ ಈ ವಿಚಾರವಾಗಿ ಮಾಧ್ಯಮಗಳನ್ನು ಉದ್ದೇಶಿಸಿ ಶಿವಕುಮಾರ್ ಅವರು ಗುರುವಾರ ಮಾತನಾಡಿದರು.

Home add -Advt

“ನಮ್ಮ ಸಂಸದರು ಕರ್ನಾಟಕ ರಾಜ್ಯದ ಸ್ವಾಭಿಮಾನ ಹಾಗೂ ಗೌರವ ಉಳಿಸಲು ಹೋರಾಟ ಮಾಡುತ್ತಿದ್ದಾರೆ. ಹತ್ತಾರು ವರ್ಷಗಳಿಂದ ರಾಯಚೂರಿನಲ್ಲಿ ಏಮ್ಸ್ ಆರಂಭಿಸಬೇಕು ಎಂದು ಪ್ರಸ್ತಾಪ ಮಾಡಲಾಗಿತ್ತು. ನಾನು ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದಾಗಲೂ ಪ್ರಸ್ತಾವನೆ ಸಲ್ಲಿಸಲಾಗಿತ್ತು. ರಾಯಚೂರಿನಲ್ಲಿ ಜಾಗ ನೀಡುವುದು ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡಲು ರಾಜ್ಯ ಸರ್ಕಾರ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ನಮಗೆ ಸಹಕಾರ ನೀಡುತ್ತಿಲ್ಲ” ಎಂದು ತಿಳಿಸಿದರು. 

“ಕೇಂದ್ರ ಸರ್ಕಾರ ಎಲ್ಲಾ ವಿಚಾರದಲ್ಲೂ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರುತ್ತಾ ಬಂದಿದೆ ಎಂಬುದಕ್ಕೆ ಇದೇ ಸಾಕ್ಷಿ. ಈ ಬಾರಿ ಬಜೆಟ್ ನಲ್ಲಿ ಏಮ್ಸ್ ಘೋಷಣೆ ಮಾಡುತ್ತಾರೆ ಎಂದು ಭಾವಿಸಿದ್ದೆವು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ನಮ್ಮ ರಾಜ್ಯಕ್ಕೆ ಏಮ್ಸ್ ನೀಡಲೇಬಾರದು ಎಂದು ಕೇಂದ್ರ ವು ತೀರ್ಮಾನಿಸಿದಂತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಏಮ್ಸ್ ಸ್ಥಾಪಿಸಲು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳು ಸೇರಿದಂತೆ ಎಲ್ಲಾ ಸಹಕಾರವನ್ನು ನೀಡಲಾಗುತ್ತಿದೆ. ಆದರೆ ರಾಯಚೂರಿಗೆ ಏಮ್ಸ್ ನೀಡಲು ಕೇಂದ್ರ ಸರ್ಕಾರ ವಿಫಲವಾಗಿದ್ದು, ಇದರ ವಿರುದ್ಧ ಸಂಸತ್ ಸದಸ್ಯರು ಹೋರಾಟಕ್ಕೆ ಮುಂದಾಗಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಂಸದರಿಗೆ ಶಕ್ತಿ ತುಂಬಲು ಸರ್ಕಾರ ಕೂಡ ಹೋರಾಟ ಮಾಡಲಿದೆ. ರಾಯಚೂರಿಗೆ ಏಮ್ಸ್ ಘೋಷಣೆ ಮಾಡಬೇಕು ಎಂದು ನಾವು ಈಗಲೂ ಮನವಿ ಮಾಡುತ್ತೇವೆ” ಎಂದು ತಿಳಿಸಿದರು.

*ಸತೀಶ್ ಜಾರಕಿಹೊಳಿ, ಕುಮಾರಸ್ವಾಮಿ ಭೇಟಿ ಬಗ್ಗೆ ಗೊತ್ತಿಲ್ಲ*

ರಾಜ್ಯ ಸಚಿವ ಸತೀಶ್ ಜಾರಕಿಹೊಳಿ ಅವರು ದೆಹಲಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವ ಬಗ್ಗೆ ಕೇಳಿದಾಗ, “ನನಗೆ ಈ ವಿಚಾರವಾಗಿ ಏನೂ ಗೊತ್ತಿಲ್ಲ, ಅವರ ಬಳಿಯೇ ಕೇಳಿ. ಅವರು ಮಾತುಕತೆ ನಡೆಸಿರುವ ಬಗ್ಗೆ ನನ್ನನ್ನು ಕೇಳಿದರೆ ನಾನು ಏನು ಹೇಳಲಿ? ಅವರ ಭೇಟಿ ವಿಚಾರವಾಗಿ ನನಗಾಗಲಿ, ಸಿಎಂ ಅವರಿಗಾಗಲಿ ಮಾಹಿತಿ ನೀಡಿಲ್ಲ. ಇಲ್ಲಿ ಪಕ್ಷದ ವಿಚಾರ ಏನೂ ಇರುವುದಿಲ್ಲ. ರಾಷ್ಟ್ರೀಯ ಯೋಜನೆಗಳ ಬಗ್ಗೆ ಚರ್ಚೆ ಮಾಡಿರಬಹುದು. ಅವರಿಗೆ ಗೌರವ ಸಲ್ಲಿಸಲು ಹೋಗಿರಬಹುದು” ಎಂದು ತಿಳಿಸಿದರು.

ಈ ಭೇಟಿ ಬಗ್ಗೆ ಅನೇಕ ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗುತ್ತಿದೆ ಎಂದು ಕೇಳಿದಾಗ, “ಈ ಬಗ್ಗೆ ನೀವು (ಮಾಧ್ಯಮಗಳು) ವ್ಯಾಖ್ಯಾನ ಮಾಡುತ್ತಿದ್ದೀರಿ. ಬೇರೆ ಇನ್ಯಾವುದೇ ವ್ಯಾಖ್ಯಾನಗಳಿಲ್ಲ” ಎಂದು ತಿಳಿಸಿದರು.

*ತಮ್ಮ ಮುತ್ತುರತ್ನಗಳನ್ನು ಅವರು ಎಲ್ಲಾದರೂ ಇಟ್ಟುಕೊಳ್ಳಲಿ*

ಬಿಜೆಪಿ ಪಕ್ಷದಿಂದ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಿರುವ ಬಗ್ಗೆ ಕೇಳಿದಾಗ, “ಅದು ಅವರ ಪಕ್ಷದ ಆಂತರಿಕ ವಿಚಾರ, ಅವರು ಏನಾದರೂ ಮಾಡಿಕೊಳ್ಳಲಿ. ನಾವು ಅದರಲ್ಲಿ ಯಾಕೆ ಹಸ್ತಕ್ಷೇಪ ಮಾಡಬೇಕು. ಅವರು ತಮ್ಮ ಮುತ್ತುರತ್ನಗಳನ್ನು ಎಲ್ಲೆಲ್ಲಿ ಇಟ್ಟುಕೊಳ್ಳಬೇಕೋ ಅಲ್ಲಿ ಇಟ್ಟುಕೊಳ್ಳಲಿ” ಎಂದರು.

ಸಚಿವ ಸಂಪುಟ ಸಭೆಯಲ್ಲಿ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪವಾಗಲಿದೆಯಂತೆ ಎಂದು ಕೇಳಿದಾಗ, “ನನಗೆ ಗೊತ್ತಿಲ್ಲ. ನಾನು ಸಿಎಂ ಅವರಿಗೆ ಕರೆ ಮಾಡಿ ಪಕ್ಷದ ಸಭೆ ಇದೆ ಎಂದು ಹೇಳಿ ದೆಹಲಿಗೆ ಬಂದಿದ್ದೇನೆ” ಎಂದು ತಿಳಿಸಿದರು.

ಒಳಮೀಸಲಾತಿ ಮಧ್ಯಂತರ ವರದಿ ಬಗ್ಗೆ ಕೇಳಿದಾಗ, ” ಈ ವಿಚಾರವಾಗಿ ಚರ್ಚೆ ಮಾಡುತ್ತಿದ್ದೇವೆ. ಶಾಸಕರು, ಸಚಿವರು ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡುತ್ತಿದ್ದು, ಪಕ್ಷದಲ್ಲಿ ಚರ್ಚೆ ಮಾಡಿದ ನಂತರ ತೀರ್ಮಾನಕ್ಕೆ ಬರಲಾಗುವುದು” ಎಂದು ತಿಳಿಸಿದರು.

Related Articles

Back to top button