ಮುಖ್ಯಮಂತ್ರಿ ಯಾರೆಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಕಾಂಗ್ರೆಸ್ ಪಕ್ಷ ಮುಂಬರುವ ವಿಧಾನಸಭಾ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಿದೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ತಾಲೂಕು ಪಂಚಾಯತ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಪಂಚಾಯತ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
“ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ಹೀಗಾಗಿ, ಸಾಮೂಹಿಕ ನಾಯಕತ್ವದಲ್ಲಿಯೇ ಚುನಾವಣೆಯನ್ನು ಎದುರಿಸುತ್ತೇವೆ” ಎಂದರು.
ಮುಖ್ಯಮಂತ್ರಿ ಯಾರೆಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ:
“ಇನ್ನೂ ಚುನಾವಣೆ ಆಗಿಲ್ಲ, ಚುನಾವಣೆ ಯಾವಾಗ ಬರುತ್ತೊ ಗೊತ್ತಿಲ್ಲ? ಚುನಾವಣೆ ನಡೆಯಬೇಕು, ಶಾಸಕರ ಆಯ್ಕೆಯಾಗಬೇಕು, ನಂತರವೇ ಮುಖ್ಯಮಂತ್ರಿ ಯಾರೆಂಬುದು ತೀರ್ಮಾನವಾಗುತ್ತದೆ. ಈಗಲೇ ಆ ಬಗ್ಗೆ ಹೇಳಲು ಆಗುವುದಿಲ್ಲ. ಅಭಿಮಾನಿಗಳು ತಮ್ಮ ನಾಯಕರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಾರೆ, ಅದರಲ್ಲಿ ಯಾವುದೇ ತಪ್ಪಿಲ್ಲ. ಮುಖ್ಯಮಂತ್ರಿ ಯಾರಾಗಬೇಕೆಂದು ಪಕ್ಷದ ಎಲ್ಲ ಶಾಸಕರು ಹಾಗೂ ಹೈಕಮಾಂಡ್ ನಿರ್ಧರಿಸುತ್ತಾರೆ” ಎಂದು ಹೇಳಿದರು.
ರಮೇಶ ಜಾರಕಿಹೊಳಿ ರಾಜೀನಾಮೆ ಬಗ್ಗೆ ಗೊತ್ತಿಲ್ಲ:
“ಶಾಸಕ ರಮೇಶ ಜಾರಕಿಹೊಳಿ ರಾಜೀನಾಮೆ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ನೀವು ಅವರನ್ನೇ ಕೇಳಿ” ಎಂದು ಸತೀಶ ಅವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
“ರಮೇಶ ಅವರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಬರುವ ಬಗ್ಗೆ ನನ್ನೊಂದಿಗೆ ಏನು ಚರ್ಚಿಸಿಲ್ಲ. ಹೀಗಾಗಿ, ನಾನು ಈ ಬಗ್ಗೆ ಯಾವ ಅಭಿಪ್ರಾಯವನ್ನು ಹೇಳುವ ಪ್ರಶ್ನೆಯಿಲ್ಲ. ಅದು ನಮ್ಮ ವರಿಷ್ಠರಿಗೆ ಬಿಟ್ಟ ವಿಚಾರ. ಜಿಲ್ಲಾ ಮಟ್ಟದಲ್ಲಿದ್ದಂತವರು ಆ ಬಗ್ಗೆ ಮಾತನಾಡಲು ಆಗುವುದಿಲ್ಲ” ಎಂದು ಹೇಳಿದರು.
ಉದ್ಯೋಗ ಖಾತರಿ ಯೋಜನೆಯ ಕುರಿತು ಚರ್ಚಿಸಲು ಮತ್ತೆ ಸಭೆ:
“ಇಂದು ನಡೆದ ತಾಲೂಕು ಪಂಚಾಯತ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿದ್ದೇವೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲವು ಲೋಪದೋಷಗಳು ಕಂಡುಬಂದಿವೆ. ಹೀಗಾಗಿ, ಈ ಕುರಿತು ಚರ್ಚಿಸಲು ಪ್ರತ್ಯೇಕ ಸಭೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಸತೀಶ ಜಾರಕಿಹೊಳಿ ತಿಳಿಸಿದರು.
ಕುತೂಹಲ ಮೂಡಿಸಿದ ರಮೇಶ್ ಜಾರಕಿಹೊಳಿ ನಡೆ : ಸುತ್ತೂರು ಮಠದ ಸುತ್ತ ರಾಜಕೀಯ ವಾಸನೆ
ಅಧಿಕಾರದಲ್ಲಿದ್ದವರು ಬಾಯಿಬಿಡುತ್ತಿಲ್ಲ; ಬಿಜೆಪಿ ನಾಯಕರ ವಿರುದ್ಧ ಸತೀಶ್ ಜಾರಕಿಹೊಳಿ ಆಕ್ರೋಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ