ಕಥೆಯ ಕೇಳಿರಣ್ಣ … ದ್ರೋಹದ ಕಥೆಯ ಕೇಳಿರಣ್ಣ -ವೈರಲ್ ಆಗಿರುವ ಸತೀಶ್ ಜಾರಕಿಹೊಳಿ ಹಾಡು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗೋಕಾಕ ನಗರದಲ್ಲಿ ಪ್ರವಾಹ ಅಪ್ಪಳಿಸಿ ಸಹಸ್ರಾರು ಜನ ಸಂಕಷ್ಟಕ್ಕೆ ಸಿಲುಕಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇದೇ ಸಂದರ್ಭವನ್ನು ಬಳಸಿಕೊಂಡು ನಗರಸಭೆ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಿದೆ ಎಂದರೆ ನಂಬುತ್ತೀರಾ?
ಮಾಜಿ ಸಚಿವ, ಶಾಸಕ ಸತೀಶ್ ಜಾರಕಿಹೊಳಿ ಇಂತಹ ಆಘಾತಕಾರಿ ಸಂಗತಿಯನ್ನು ವೀಡಿಯೋ ಹಾಡಿನ ಮೂಲಕ ಬಹಿರಂಗ ಪಡಿಸಿದ್ದಾರೆ. ಜಾನಪದ ಶೈಲಿಯಲ್ಲಿ ಹಾಡನ್ನು ರಚಿಸಿ, ಅದನ್ನು ಪ್ರವಾಹ ಸಂದರ್ಭದ ಪರಿಸ್ಥಿತಿಯ ವೀಡಿಯೋದೊಂದಿಗೆ ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.
ಜೊತೆಗೆ ಆರಂಭದಲ್ಲೇ ಸತೀಶ್ ಜಾರಕಿಹೊಳಿ ಅವರ ಬೈಟ್ ಕೂಡ ಜೋಡಿಸಲಾಗಿದೆ. ಅದರಲ್ಲಿ, ಇತ್ತೀಚೆಗೆ ಬಂದ ಪ್ರವಾಹದಿಂದ ಗೊಕಾಕ ಜನತೆ ಕಣ್ಣೀರು ಹಾಕುತ್ತಿದ್ದರು. ಆದರೆ ಗೋಕಾಕ ನಗರಸಭೆಯವರು ಚೆಲ್ಲಾಟ ಆಡುತ್ತಿದ್ದರು. ಇದರ ಸತ್ಯಾಂಶವನ್ನು ಹಾಡಿನ ರೂಪದಲ್ಲಿ ಕೊಟ್ಟಿದ್ದೇವೆ, ಲೈಕ್ ಆದ್ರೆ ಶೇರ್ ಮಾಡಿ ಎಂದು ಸ್ವತಃ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಗೋಕಾಕ ನಗರಸಭೆಯ ಭ್ರಷ್ಟಾಚಾರದ ಕರ್ಮ ಕಾಂಡ ಎಂದು ತಲೆ ಬರಹ ಕೊಟ್ಟು ವೀಡಿಯೋ ಮಾಡಲಾಗಿದೆ. ಹಾಡಿನ ಪ್ರಮುಖ ಅಂಶಗಳು ಹೀಗಿವೆ….
ಕಥೆಯ ಕೇಳಿರಣ್ಣ … ದ್ರೋಹದ ಕಥೆಯ ಕೇಳಿರಣ್ಣ
ಗೋಕಾವಿ ನಾಡಿನ ನಗರ ಸಭೆಯವ್ರು ಕೋಟಿ ಕೋಟಿ ಕೊಳ್ಳೆ ಹೊಡೆದಾರೋ ಹಣ
ಹೊಳೆಯು ಬಂದು ಹೊಕ್ಕಿ ಜನರು ಅಳುತಿದ್ರು ಬಿಕ್ಕಿ ಬಿಕ್ಕಿ
ಸಹಾಯ ಮಾಡಲು ಬಂದರು ಸಾಗಿ.. ದುಪ್ಪಟ್ಟು ಹಣವನು ತಿಂದರು ತೇಗಿ
ಒಂದು ಎರಡು ಗಾಡಿ ಸಹಾಯ ಮಾಡಿದಂಗ ಮಾಡಿ, ಜನರ ಕಣ್ಣಿಗೆ ಮಣ್ಣೆರಚಾರೋ ಪುಡಿ
ನಗರಸಭೆ ಕೆಲ ಸದಸ್ಯರೆಲ್ಲ ರಾಜಕಾರಣಿಗಳ ಜೊತೆ ಕೂಡಿ… ಹೀಗೆ ಸಾಗುತ್ತದೆ ಹಾಡು.
ವೀಡಿಯೋ ಓಡುತ್ತಿದ್ದಂತೆ ಕೆಳಗಡೆ ಕಿಕ್ಕರ್ ನಲ್ಲಿ ನಗರಸಭೆಯವರು ಒಂದು ಟ್ರಿಪ್ ಟ್ರ್ಯಾಕ್ಟರ್ ಬಾಡಿಗೆ 400 ರೂ. ಕೊಟ್ಟು 1200 ರೂ. ಖರ್ಚು ಹಾಕಿದ್ದಾರೆ. ತಲಾ 800 ರೂಗಳಂತೆ 80 ಲಕ್ಷ ರೂ. ಅವ್ಯವಹಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಆರಂಭದಲ್ಲೇ ಶಾಸಕ ರಮೇಶ ಜಾರಕಿಹೊಳಿ ಅಳಿಯ ಅಂಬಿರಾವ್ ಮತ್ತು ಕೊತ್ವಾಲ್ ಎನ್ನುವವರ ಫೋಟೋವನ್ನೂ ಹಾಕಲಾಗಿದೆ.
ಈ ಹಾಡಿನ ವೀಡಿಯೋ ಈಗ ಭಾರಿ ವೈರಲ್ ಆಗಿದೆ. ಇದು ಜಾರಕಿಹೊಳಿ ಸಹೋದರರ ಜಗಳದ ಮುಂದುವರಿದ ಭಾಗ ಎಂದೇ ವಿಶ್ಲೇಷಿಸಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ