ಪ್ರಗತಿವಾಹಿನಿ ಸುದ್ದಿ; ಗೋಕಾಕ: ಕೇರಳದ ನಾರಾಯಣಗುರುಗಳ ಕ್ರಾಂತಿ ಮನುಕುಲ ಎಂದೂ ಮರೆಯಲು ಸಾಧ್ಯವಿಲ್ಲ. ಇಂತಹ ವ್ಯಕ್ತಿಯ ಸ್ಥಬ್ಧಚಿತ್ರವನ್ನು ಕೇಂದ್ರ ಸರ್ಕಾರ ನಿರಾಕರಿಸಿರುವುದು ಖಂಡನೀಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಗಣರಾಜ್ಯೋತ್ಸವದಲ್ಲಿ ಮಹಾತ್ಮರ ಸ್ಥಬ್ಧ ಚಿತ್ರಗಳ ಪ್ರದರ್ಶನ ತಿರಸ್ಕರಿಸಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಮಾನವ ಬಂಧುತ್ವ ವೇದಿಕೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ, ಪ್ರತಿಭಟಿಸಿ ಅವರು ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಈ ದೇಶ ಕಂಡ ಅಪ್ರತಿಮ ಗುರುಗಳಾಗಿದ್ದು, ಅವರ ಸಂದೇಶ, ತತ್ತ್ವ ಇಂದಿಗೂ ಪ್ರಸ್ತುತ. ಸರ್ವ ಸಮಾನತೆ ಸಾರಿದ ನಾರಾಯಣ ಗುರುಗಳಿಗೆ ಕೇಂದ್ರ ಅವಮಾನಿಸಿರುವುದು ದೇಶದ ಜನರಿಗೆ ನೋವುಂಟು ಮಾಡಿದೆ. ಇದೊಂದು ರಾಷ್ಟ್ರೀಯ ಅವಮಾನವಾಗಿದೆ ಎಂದರು.
ಅದೇ ರೀತಿ ಸ್ವಾತಂತ್ರ್ಯ ಹೋರಾಟ ಮಾಡಿದ ಸುಭಾಶ್ಚಂದ್ರ ಬೋಸ್, ತಮಿಳುನಾಡು ಸರ್ಕಾರದಿಂದ ಸ್ವಾತಂತ್ರ್ಯ ಹೋರಾಟ ಬಿಂಬಿಸುವ ಸ್ಥಬ್ಧ ಚಿತ್ರಗಳನ್ನು ತಿರಸ್ಕರಿಸುವ ಮೂಲಕ ಕೇಂದ್ರ ಸರಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಹೋರಾಟ ಈಗ ಪಾರಂಭವಾಗಿದ್ದು, ಮುಂದಿನ ವರ್ಷವಾದರೂ ಗಣರಾಜ್ಯೋತ್ಸವದಲ್ಲಿ ನಾರಾಯಣಗುರು, ಸುಭಾಶ್ಚಂದ್ರ ಬೋಸ್ ಸೇರಿದಂತೆ ಇನ್ನೂಳಿದ ಗಣ್ಯರ ಸ್ಥಬ್ಧಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಪ್ರಶಸ್ತಿಗಳ ಬಗ್ಗೆ ಪ್ರಸ್ತಾಪಿಸಿದ ಶಾಸಕರು, ಪ್ರಧಾನಿ ಮೋದಿ ಪರ ಇರುವವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗುತ್ತಿದ್ದು, ಸಾಮಾಜಿಕ, ಸಮಾಜ ಪರ ಕಾರ್ಯ ಮಾಡುವವರನ್ನು ಹತ್ತಿಕ್ಕಲಾಗುತ್ತಿದೆ ಎಂದ ಅವರು, ಇತಿಹಾಸ ಅಳಿಸುವ ಉದ್ದೇಶದಿಂದ ಅಮರ ಜ್ಯೋತಿ ದೀಪವನ್ನು ಸ್ಥಳಾಂತರಿಸಲಾಗಿದೆ ಎಂದು ದೂರಿದರು.
ಪ್ರತಿಭಟನೆ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರಿಗೆ ಮಾನವ ಬಂಧುತ್ವ ವೇದಿಕೆ, ವಿದ್ಯಾರ್ಥಿ ಬಂಧತ್ವ ವೇದಿಕೆ, ದಲಿತ ಸಂಘಟನೆಗಳು, ಈಡಿಗ ಆರ್ಯ ಸಂಘಟನೆ, ಪ್ರಗತಿಪರ ಚಿಂತಕರು, ಕಲಾಲ್ ಸಮಾಜ, ಕುರುಬ ಸಂಘಟನೆ, ಸಾಹಿತಿಗಳು ಸೇರಿದಂತೆ ವಿವಿಧ ಜನಪರ ಸಂಘಟನೆಗಳು ಸಾಥ್ ನೀಡಿದವು.
ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಇಲ್ಲಿನ ಕೋರ್ಟ್ ಸರ್ಕಲ್ ನಿಂದ ತಹಶೀಲ್ದಾರ್ ಕಚೇರಿ ವರೆಗೆ ಪಾದಯಾತ್ರೆ ನಡೆಸಿ, ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ರಾಜ್ಯ ಕುರುಬ ಸಂಘಟನೆ ಮಾಜಿ ಅಧ್ಯಕ್ಷ ಡಾ. ರಾಂಜೇಂದ್ರ ಸಣ್ಣಕ್ಕಿ, ವಿಭಾಗೀಯ ಸಂಚಾಲಕ ತೋಳಿ ಭರಮಣ್ಣ ಸೇರಿದಂತೆ ವಿವಿಧ ಸಂಘಟನೆ ಸದಸ್ಯರಿದ್ದರು.
ಗ್ರುಪ್ ನಲ್ಲಿ ಪೋಸ್ಟ್ ಆದ ಬಿಜೆಪಿ ಜಿಲ್ಲಾಧ್ಯಕ್ಷನ ನಗ್ನ ಫೋಟೋ; ಶಶಿಕಾಂತ ಪಾಟೀಲ ಹೇಳೋದೇನು ಗೊತ್ತೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ