ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಗೆ ಬರುವುದು ಜನತ್ತಿನ 8ನೇ ಅದ್ಭುತ; ಸಹೋದರನಿಗೆ ಟಾಂಗ್ ನೀಡಿದ ಸತೀಶ್ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ 12ರಿಂದ 13 ಜನ ಕಾಂಗ್ರೆಸ್ ಶಾಸಕರು ಗೆಲ್ಲಲು ತಯಾರಿ ನಡೆಸಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಚುನಾವಣೆಗೆ ನಾವು ತಯಾರಿ ನಡೆಸಿದ್ದು, ನಮ್ಮ ಗೆಲುವು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಗೋವಾದಲ್ಲಿ ಕಳೆದ ಸಲ 17 ಸೀಟು ಗೆಲ್ಲಲಾಗಿತ್ತು. ಇನ್ನೂ ಸ್ವಲ್ಪ ಆಸಕ್ತಿ ವಹಿಸಿದ್ದರೆ ಸರ್ಕಾರ ರಚನೆ ಮಾಡಬಹುದಿತ್ತು. ಆದರೆ ಕಾರಣಾಂತರಗಳಿಂದ ಸರ್ಕಾರ ರಚಿಸಲಿಲ್ಲ. ಕಾಂಗ್ರೆಸ್ ವೋಟ್ ಬ್ಯಾಂಕ್ ಗೋವಾದಲ್ಲಿ ಇದೆ. ಆದ್ದರಿಂದ ಈ ಭಾರೀ ಬಹುಮತದಿಂದ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಬರುವ ವಿಚಾರ ನನಗೆ ಗೊತ್ತಿಲ್ಲ. ಅದು ಬೆಂಗಳೂರು ಹಂತದಲ್ಲಿ ಚರ್ಚೆ ನಡೆದಿರಬಹುದು. ಬಿಜೆಪಿ ಪಕ್ಷದ ಭಿನ್ನಾಭಿಪ್ರಾಯ ಅವರೇ ಸರಿಪಡಿಸಿಕೊಳ್ಳಬೇಕು. ಬಿಜೆಪಿ ಪಕ್ಷದ ಆಂತರಿಕ ವಿಚಾರದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವ ಅವಶ್ಯಕತೆವಿಲ್ಲ ಎಂದರು.
ಬಿಜೆಪಿ ಬೆಳಗಾವಿ ಮಹಾನಗರ ಜಿಲ್ಲಾಧ್ಯಕ್ಷ ಶಶಿಕಾಂತ್ ಪಾಟೀಲ್ ವಾಟ್ಸಪ್ ಗ್ರೂಪ್ನಲ್ಲಿ ಅಶ್ಲೀಲ ಫೋಟೋ ಪೋಸ್ಟ್ ಮಾಡಿದ್ದು ಖಂಡನೀಯ. ಈಗಾಗಲೇ ಕಾಂಗ್ರೆಸ್ ನಿಂದ ಪ್ರತಿಭಟನೆ ಮಾಡಿ, ಜಿಲ್ಲಾಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದ್ದು. ದೂರು ಕೂಡ ನೀಡಲಾಗಿದೆ ಎಂದು ಹೇಳಿದರು.
ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ಬಿಟ್ಟು ಎಲ್ಲಿಯೂ ಹೋಗಲ್ಲ. ಈಗಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದಾರೆ. ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿಲ್ಲ. ನಮ್ಮ ಸರ್ಕಾರವಿದ್ದಾಗ ಮೂರು, ನಾಲ್ಕು ಜನ ಅಲ್ಪಸಂಖ್ಯಾತ ಸಮಾಜದವರೇ ಮಂತ್ರಿಗಳಾಗಿರುತ್ತಾರೆ ಎಂದು ಸ್ಪಷ್ಟಿಕರಣ ನೀಡಿದರು.
ಶಾಸಕರ ಪಕ್ಷಾಂತರದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಚುನಾವಣೆ ಇನ್ನೂ ಒಂದು ವರ್ಷ ಇದೆ. ಆವಾಗ ಯಾರು ಯಾವ ಪಕ್ಷಕ್ಕೆ ಹೋಗುತ್ತಾರೆ ಎಂಬುವುದು ಗೊತ್ತಾಗುತ್ತದೆ. ಅದರ ಬಗ್ಗೆ ಈಗ ನಿರ್ದಿಷ್ಟವಾಗಿ ಹೇಳಲು ಆಗಲ್ಲ. ಶಾಸಕ ರಮೇಶ ಜಾರಕಿಹೊಳಿ ಹೇಳಿಕೆಗಳಿಗೆ ನನ್ನ ಬಳಿ ಉತ್ತರಗಳಿಲ್ಲ. ಆದರೆ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಗೆ ಬರುವುದು ಜಗತ್ತಿನ 8ನೇ ಅದ್ಭುತ. ಅವರು ಬಿಜೆಪಿಯಲ್ಲಿದ್ದಾರೆ ಅಲ್ಲಿಯೇ ಇರಲಿ ಎಂದರು.
ಗಣರಾಜ್ಯೋತ್ಸವ ದಿನ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿರುವ ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರ ನಡೆ ಸರಿಯಲ್ಲ. ಇದರಿಂದ ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ಈ ಬಗ್ಗೆ ಪರಿಶೀಲಿಸಿ ಕ್ರಮವಾಗಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ಗೋವಾ ಚುನಾವಣಾ ವೀಕ್ಷಕ ಸುನೀಲ ಹಣಮನ್ನವರ್ ಇದ್ದರು.
ಧಾರ್ಮಿಕ ಸ್ಥಳಗಳಲ್ಲಿ ದರ್ಶನ ಹಾಗೂ ಸೇವೆಗೆ ಅವಕಾಶ; ಸರಕಾರದ ನಿರ್ಧಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ