*ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಯಾವುದೇ ಮಾತುಕತೆ ಆಗಿಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಾಜಿ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ನಮ್ಮ ಹಂತದಲ್ಲಿ ಯಾವುದೇ ಮಾತುಕತೆ ಆಗಿಲ್ಲ. ಹಿರಿಯ ನಾಯಕರ ಜತೆ ಮಾತುಕತೆ ಆದ ಬಗ್ಗೆಯೂ ಗೊತ್ತಿಲ್ಲ. ಹಂತಹ ಬೆಳವಣಿಗೆ ಇದ್ದರೆ ನಾನೇ ನಿಮಗೆ ತಿಳಿಸುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ತಾರೆ ಎಂಬ ವಿಷಯ ಮಾಧ್ಯಮ ಮೂಲಕ ತಿಳಿದು ಬಂದಿದೆ. ಆದರೆ ನಮ್ಮ ಹಂತದಲ್ಲಿ ಯಾವುದೇ ಮಾತುಕತೆ ಆಗಿಲ್ಲ ಎಂದು ತಿಳಿಸಿದರು.
ರಮೇಶ್ ಜಾರಕಿಹೊಳಿ ಅಥವಾ ಬಾಲಚಂದ್ರ ಜಾರಕಿಹೊಳಿ ನಿಮ್ಮ ವಿರುದ್ಧ ಸ್ಪರ್ಧೆ ಮಾಡುತ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ಬಿಜೆಪಿಯವರ ಆಂತರಿಕ ವಿಚಾರ ಬಗ್ಗೆ ನಾನು ಮಾತನಾಡಲ್ಲ. ಅವರು ಯಾರನ್ನು ಬೇಕಾದರೂ ನಮ್ಮ ವಿರುದ್ಧ ಕಣಕ್ಕೆ ಇಳಿಸಲಿ. ಚುನಾವಣೆ ಮಾಡಿ ಗೆಲುವು ಸಾಧಿಸುವುದೇ ನಮ್ಮ ಗುರಿ ಎಂದರು.
ಜಿಲ್ಲೆಯ ಕೆಲವು ಮತಕ್ಷೇತ್ರಗಳಲ್ಲಿ ಐದು, ಆರು ಜನ ಅರ್ಜಿ ಸಲ್ಲಿಸಿದ್ದು, ಕೆಲವು ಕ್ಷೇತ್ರದಲ್ಲಿ ಬಂಡಾಯದ ಧ್ವನಿ ಎದ್ದಿದ್ದು ನಿಜ. ಬಂಡಾಯ ಶಮನ ಮಾಡಲು ಈಗಾಗಲೇ ಕೆಲವರೊಂದಿಗೆ ಮಾತನಾಡಿದ್ದೇನೆ. ಇನ್ನು ಚುನಾವಣೆ ಬಂದಾಗ ಪಕ್ಷಾಂತರ ಪರ್ವ ಶುರುವಾಗುತ್ತದೆ. ಕಾಂಗ್ರೆಸ್‌ನಿಂದ ಬಿಜೆಪಿಗೆ, ಬಿಜೆಪಿಯಿಂದ ಕಾಂಗ್ರೆಸ್ ಗೆ, ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಸೇರುವುದು ಹೊಸದಲ್ಲ. ಕಾಂಗ್ರೆಸ್‌ನ 3ನೇ ಪಟ್ಟಿ ಏ. 13ರೊಳಗೆ ಪ್ರಕಟವಾಗುತ್ತದೆ. ಐದಾರೂ ಕ್ಷೇತ್ರಗಳ ಟಿಕೆಟ್ ಏ. 19ರವರೆಗೆ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.
ಯಮಕನಮರಡಿ ಮತಕ್ಷೇತ್ರದಲ್ಲಿ ನಿರಂತರವಾಗಿ ನಾವು ಜನತೆ ಜತೆ ಸಂಪರ್ಕದಲ್ಲಿ ಇದ್ದೇವೆ. ಚುನಾವಣೆ ಬಂದಾಗ ಅಷ್ಟೇ ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡುವುದು ಪದ್ಧತಿ ನಮ್ಮಲಿಲ್ಲ. ಮಗ ರಾಹುಲ್ ಜಾರಕಿಹೊಳಿ ಮತ್ತು ಕಾರ್ಯಕರ್ಯರು ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ