ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇಡೀ ಕಾಂಗ್ರೆಸ್ ಪಕ್ಷವೇ ಗಾಂಧಿ ಕುಟುಂಬದ ಹಿಡಿತದಲ್ಲಿದೆ ಎನ್ನುವ ಬಿಜೆಪಿಯವರು, ಅವರೇ ಆರ್ ಎಸ್‌ಎಸ್‌ನ ಹಿಡಿತದಲ್ಲಿದ್ದಾರೆ. ಇನ್ನೂ ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿ ಮನಸ್ಸು ಮಾಡಿದರೆ ಎರಡು ಭಾರೀ ಅವರೇ ಪ್ರಧಾನಿ ಆಗಬಹುದಿತ್ತು. ಆದರೆ ಅವರು ಡಾ. ಮನ್ ಮೋಹನ ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ಈಗ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ್ ಖರ್ಗೆ ಅವರು ಸ್ಪರ್ಧಿಸಿದ್ದು, ಅವರೇ ಎಐಸಿಸಿ ಅಧ್ಯಕ್ಷರಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದು, ನಮಗೂ ಹೆಮ್ಮೆ ಇದೆ ಎಂದರು.
ಆರ್ ಎಸ್ ಎಸ್ ನವರು ಎಲ್ಲರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಪರ ಇಲ್ಲ. ಅದರಲ್ಲಿ ಕೆಲವರು ಒಳ್ಳೆಯವರೂ ಇದ್ದಾರೆ. ಅವರಿಗೆ ದೇಶದ ಅಭಿವೃದ್ಧಿ ಬೇಕಾಗಿದೆ. ಅದೇ ಕಾರಣಕ್ಕೆ ಇತ್ತಿಚೀಗೆ ಅವರು ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡಿ ಅಸಮಾಧಾನ ಹೊರ ಹಾಕುತ್ತಿದ್ದಾರೆ ಎಂದರು.
ಪರೇಶ್ ಮೇಸ್ತಾ ಸಾವು ಹತ್ಯೆಯಲ್ಲ, ಆಕಸ್ಮಿಕ ಸಾವು ಎಂದು ಸಿಬಿಐ ತಿಳಿಸಿದೆ. ಆದರೆ ಈ ಪ್ರಕರಣದಲ್ಲಿ ಆತನನ್ನು ಅನ್ಯ ಕೋಮಿನವರು ಹತ್ಯೆ ಮಾಡಿದ್ದಾರೆಂದು ಬಿಜೆಪಿಯವರು ಆರೋಪಿಸಿದ್ದರು. ಈ ಘಟಣೆಯಿಂದ ಕೊಮು ಸಂಘರ್ಷ ಉಂಟಾಗಿತ್ತು. ಇದನ್ನೇ ಲಾಭ ಪಡೆದ ಬಿಜೆಪಿಯವರು ಕರಾವಳಿ ಭಾಗದ ಮೂರು ಜಿಲ್ಲೆಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಸೋಲಿಸಿದರು.
ಡಿ.ಕೆ. ರವಿ ಮತ್ತು ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿಯವರು ಕಾಂಗ್ರೆಸ್ ಸರ್ಕಾರ ಮೇಲೆ ಆರೋಪ ಮಾಡಿದ್ದರು. ಈ ಪ್ರಕರಣಗಳಲ್ಲಿಯೂ ಸಿಬಿಐ ಬಿ ರಿಪೋರ್ಟ್ ಸಲ್ಲಿಸಿದೆ. ಕಾರಣ ಜನತೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಗುಜರಾತ ಮುಖ್ಯಮಂತ್ರಿ ಇದ್ದಾಗ ಪ್ರಧಾನಿ ನರೇಂದ್ರ ಮೋದಿಯವರು ತಂದ ಎರಡು ಚಿರತೆಗಳು ಸಾವನ್ನಪ್ಪಿದವು, ಆದರೆ ಆ ಸಂದರ್ಭದಲ್ಲಿ ಸುದ್ದಿಗಳು ಪ್ರಕಟವಾಗಲಿಲ್ಲ. ಆದರೆ ಮೊನ್ನೆ ನಬೀಬಿಯಾದಿಂದ ತಂದ ಚಿರತೆಗಳನ್ನು ಮಧ್ಯ ಪ್ರದೇಶದ ಕೂನೊ ರಾಷ್ಟ್ರೀಯ ಉದ್ಯಾನದಲ್ಲಿ ಅವುಗಳನ್ನು ಬಿಟ್ಟಾಗ ಮೂರು ದಿನ ಮಾಧ್ಯಮದಲ್ಲಿ ಅದೇ ಸುದ್ದಿ ಪ್ರಸಾರವಾಯಿತು. ಹೀಗಾಗಿ ಪ್ರಧಾನಿ ಮೋದಿಯವರ ಪ್ರಚಾರಕ್ಕೆ ಸಮಯ ನೀಡುವ ಮಾಧ್ಯಮಗಳು ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಚರ್ಚೆ ಮಾಡುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
2023 ರ ವಿಧಾನಸಭೆ ಚುನಾವಣೆ ಸಂಬಂಧಿಸಿತಂತೆ ರಮೇಶ ಜಾರಕಿಹೊಳಿಯವರಿಗೆ ಬೆಳಗಾವಿ ಜಿಲ್ಲೆಯ ನೇತೃತ್ವ ನೀಡುವ ವಿಚಾರಕ್ಕೆ ಪ್ರತಿಕ್ರಿಯೇ ನೀಡಿದ ಅವರು, 40 ವರ್ಷ ಪಕ್ಷ ಕಟ್ಟಿದ ಯಡಿಯೂರಪ್ಪನವರಿಗೆ ಜವಾಬ್ದಾರಿ ಕೊಡ್ತಿಲ್ಲ, ಇನ್ನೂ ರಮೇಶ ಜಾರಕಿಹೊಳಿ ಯಾವ ಲೆಕ್ಕ? ಪಕ್ಷ ಕಟ್ಟಿದ ಯಡಿಯೂರಪ್ಪ ಅವರನೇ ಸೈಡ್ ಲೈನ್ ಮಾಡಿ ದ್ದಾರೆ. ಬಿಜೆಪಿ ನಾಯಕರು ರಮೇಶ ಜಾರಕಿಹೊಳಿಗೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಮಂತ್ರಿಗಾಗಿ ಕಾಯ್ದು ಕುಳಿತ ರಮೇಶ್ ಜಾರಕಿಹೊಳಿಗೆ ಕಲ್ಲು ಎಸೆಯಬಾರದು ಅಂತಾ ಚಾಕಲೇಟ್ ತಿನ್ನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರಮೇಶ ಜಾರಕಿಹೊಳಿ ಸಿಟ್ಟಾದರೆ ಏನಾದರೂ ಮಾಡಬಹುದು ಅನ್ನೋ ಭಯ ಬಿಜೆಪಿ ನಾಯಕರಿಗಿದೆ. ಹಿಂದಿನ ಸರ್ಕಾರ ಕೆಡವಿದ ರಮೇಶ ಜಾರಕಿಹೊಳಿಗೆ ಈ ಸರ್ಕಾರ ಕೆಡುವುದು ದೊಡ್ಡ ಮಾತಲ್ಲ.ಹಾಗಾಗಿ ರಮೇಶ ಜಾರಕಿಹೊಳಿಗೆ ತಿಂಗಳಿಗೊಮ್ಮೆ ಚಾಕಲೇಟ್ ನೀಡುವ ಕೆಲಸ ಮಾಡ್ತಿದ್ದಾರೆ ಎಂದರು.
ಗೋಕಾಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ್ ನೀಡಿದ ಹೇಳಿಕೆಗೆ ಪ್ರತಿಕ್ರಿಯೇ ನೀಡಿದ ಅವರು, ಆರ್ ಎಸ್ ಎಸ್ ಸಿದ್ದಾಂತ ವಿರೋಧಿಸಿದವರು ಬಿಜೆಪಿಗೆ ಗುರಿಯಾಗುತ್ತಾರೆ. ನಾನು ರಾಜ್ಯಾದಂತ್ಯ ಪಕ್ಷವನ್ನು ಸಂಘಟಿಸುತ್ತಿದ್ದು, ಅದನ್ನು ಅವರಿಗೆ ನೋಡಲು ಆಗುತ್ತಿಲ್ಲ. ನನ್ನನ್ನು ಸೋಲಿಸಲು ಬಿಜೆಪಿಯವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರ ಪ್ರಯತ್ನಕ್ಕೆ ಫಲ ಸಿಗಲ್ಲ. ನಳಿನ್ ಕುಮಾರ ಕಟೀಲ್ ಬೆಳಗಾವಿ ಜಿಲ್ಲೆಗೆ ಆರು ತಿಂಗಳಿಗೊಮ್ಮೆ ಬಂದು ಇಂತಹ ಹೇಳಿಕೆ ನೀಡಿದರೆ ಅದಕ್ಕೆ ಆದ್ಯತೆ ನೀಡುವ ಅಗತ್ಯವಿಲ್ಲವೆಂದರು.
ಭಾರತ ಜೋಡೊ ಪಾದಯಾತ್ರೆ ಹಿನ್ನಲೆ ಜಿಲ್ಲೆಯಲ್ಲಿ ಈಗಾಗಲೇ ಪೂರ್ವಭಾವಿ ಸಭೆ ನಡೆಸಲಾಗಿದೆ. ಮೊಳಕಾಲ್ಮೂರು ಮತ್ತು ಬಳ್ಳಾರಿ ಗ್ರಾಮಾಂತರ, ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ನಮ್ಮ ಜಿಲ್ಲೆಯ ನಾಯಕರು, ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗುತ್ತಾರೆ ಎಂದು ಮಾಹಿತಿ ನೀಡಿದರು.ಇನ್ನೂ ಇದೇ ವೇಳೆ ಎಸ್ ಟಿ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯೇ ನೀಡಿದ ಅವರು, ಎಸ್ ಟಿ ಮೀಸಲಾತಿ ಜಾರಿ ವಿಚಾರ ಬಗ್ಗೆ ಅ.7ರಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸರ್ವಪಕ್ಷದ ಸಭೆ ಕರೆಯಲಾಗಿದೆ. ಸಿಎಂ ಸರ್ವಪಕ್ಷ ಸಭೆಗೂ ಮುನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ಎಸ್ಸಿ, ಎಸ್ಟಿ ಸಮಾಜದ ಶಾಸಕರ ಸಭೆ ಕರೆದಿದ್ದಾರೆ. ಅದರಲ್ಲಿ ನಾನು ಭಾಗಿಯಾಗಿ ಸಲಹೆ-ಸೂಚನೆ ನೀಡುತ್ತೇನೆ. ಸಿಎಂ ಸಭೆ ಬಳಿಕ ಅವರು ಮೀಸಲಾತಿ ಸಂಬಂಧ ಕೆಲ ಘೋಷಣೆ ಮಾಡುವ ಸಾಧ್ಯತೆ ಇದೆ. ಆದರೆ ಪೂರ್ಣ ಪ್ರಮಾಣದ ನ್ಯಾಯ ಒದಗಿಸುತ್ತಾರೆ ಎಂಬ ನಂಬಿಕೆ ನನಗಿಲ್ಲ ಎಂದ ಅವರು, ಈಗಾಗಲೇ ಮೀಸಲಾತಿ ಸಿಗದ ಹಿನ್ನೆಲೆಯಲ್ಲಿ ವಾಲ್ಮೀಕಿ ಸಮುದಾಯದವರು ಸರ್ಕಾರದಿಂದ ಆಚರಿಸುವ ವಾಲ್ಮೀಕಿ ಜಯಂತಿಗೆ ಬಹಿಷ್ಕಾರ ಹಾಕಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಸುನೀಲ್ ಹಣಮಣ್ಣವರ, ಬಸವರಾಜ ಶಿಗ್ಗಾವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ.ಜೆ ಸೇರಿದಂತೆ ಇತರರು ಇದ್ದರು.
ನಂದಿಧ್ವಜ ಕಂಭಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಸಿಎಂ; ಜಂಬೂ ಸವಾರಿಗೆ ಕ್ಷಣಗಣನೆ
https://pragati.taskdun.com/latest/mysore-dasaranandidhwaja-poojecm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ