Latest

ಸತೀಶ್ ಜಾರಕಿಹೊಳಿ ಅರೆಬರೆ ಓದಿದ ವ್ಯಕ್ತಿ; ಆಂತರಿಕ ಕ್ಷೋಭೆಯನ್ನುನುಂಟು ಮಾಡುವುದು ದೇಶದ್ರೋಹದ ಕೆಲಸ; ಸಿಎಂ ಬೊಮ್ಮಾಯಿ ಆಕ್ರೋಶ

ಪ್ರಗತಿವಾಹಿನಿ ಸುದ್ದಿ; ಉಡುಪಿ; ಹಿಂದೂ ಧರ್ಮದ ಪದ ಬಳಕೆ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಸತೀಶ್ ಜಾರಕಿಹೊಳಿ ವಿರುದ್ಧ ಕಿಡಿ ಕಾರಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಅವರು ಅರೆ ಜ್ಞಾನವಿರುವ ವ್ಯಕ್ತಿ ಎಂದು ಗುಡುಗಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಸತೀಶ್ ಜಾರಕಿಹೊಳಿ ಅರೆ ಬರೆ ತಿಳಿವಳಿಕೆ ಹೊಂದಿರುವ ವ್ಯಕ್ತಿ. ಅವರಿಗೆ ಯಾವುದೇ ಆಳವಾದ ಜ್ಞಾನವಿಲ್ಲ. ಅರೆಜ್ಞಾನ ಹೊಂದಿ ಮಾತನಾಡುತ್ತಾರೆ. ಸತೀಶ್ ಜಾರಕಿಹೊಳಿ ಹೇಳಿಕೆಯಿಂದ ಭಾರತೀಯರ ಭಾವನೆಗಳಿಗೆ ಧಕ್ಕೆಯಾಗಿದೆ. ಎಲ್ಲರೂ ಒಕ್ಕೋರಲಿನಿಂದ ಅವರ ಹೇಳಿಕೆಯನ್ನು ಖಂಡಿಸಬೇಕು ಎಂದು ವಾಗ್ದಾಳಿ ನಡೆಸಿದರು.

ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ಖಂಡಿಸುತ್ತಿಲ್ಲ ಯಾಕೆ? ರಾಹುಲ್ ಗಾಂಧಿ, ಸಿದ್ದರಾಮಯ್ಯ ಮೌನವಾಗಿರುವುದೇಕೆ? ಕಾಂಗ್ರೆಸ್ ನಾಯಕರ ಮೌನ ಸತೀಶ್ ಹೇಳಿಕೆಗೆ ಸಮ್ಮತಿಯೇ? ಕಾಂಗ್ರೆಸ್ಸಿಗರು ಅಲ್ಪಸಂಖ್ಯಾತರ ಮತ ಬರುತ್ತೆ ಎಂಬ ಭ್ರಮೆಯಲ್ಲಿದ್ದಾರೆ. ರಾಜ್ಯದಲ್ಲಿ ಅಲ್ಪ ಸ್ವಲ್ಪ ಕಾಂಗ್ರೆಸ್ ಉಳಿದಿದೆ. ಸ್ವಲ್ಪದಿನದಲ್ಲಿ ಅದೂ ಕೂಡ ಇಲ್ಲವಾಗಲಿದೆ. ಮೊದಲು ಸತೀಶ್ ಜಾರಕಿಹೊಳಿ ಗೌರವದಿಂದ ಮಾತನಾಡುವುದನ್ನು ಕಲಿಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

*ಸಮಾಜದಲ್ಲಿ ಹುಳಿ ಹಿಂಡುವ ಕೆಲಸ* 

ಶಾಸಕ ಸತೀಶ್ ಜಾರಕಿಹೊಳಿ ಅವರು ತಮ್ಮ ಹೇಳಿಕೆಯ ಮೂಲಕ ಸಮಾಜದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

 

*ದೇಶದ್ರೋಹದ ಕೆಲಸ*
ದೇಶದ ಜನರ ಭಾವನೆಗಳಿಗೆ ಧಕ್ಕೆ ಆಗುವ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದು, ಅರೆಬೆರೆಯ ಮತ್ತು ಆಳವಾದ ಅಧ್ಯಯನ ಇಲ್ಲದೆ ಕೇವಲ ಓಟಿಗಾಗಿ ತುಷ್ಟೀಯ ರಾಜಕಾರಣ ಮಾಡುತ್ತಿದ್ದಾರೆ. ಈ ರೀತಿ ಮಾತನಾಡಿದರೆ ಅಲ್ಪಸಂಖ್ಯಾತರ ಮತಗಳನ್ನು ಪಡೆಯಬಹುದೆಂಬ ಭ್ರಮೆಯಲ್ಲಿ ಇದ್ದಾರೆ. ಭಾರತದ ನಂಬಿಕೆಗಳ ಬುನಾದಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಯಾವುದಾದರೂ ದೇಶದಲ್ಲಿ ಆಂತರಿಕ ಕ್ಷೋಭೆಯನ್ನುನುಂಟು ಮಾಡುವುದು ದೇಶದ್ರೋಹದ ಕೆಲಸ. ಇದನ್ನು ಪ್ರತಿಯೊಬ್ಬರೂ ಖಂಡಿಸಬೇಕು. ಕಾಂಗ್ರೆಸ್ ಪಕ್ಷ ಇದಕ್ಕೆ ಸಹಮತ ವ್ಯಕ್ತಪಡಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂದರು.

*ಮೌನ ಯಾಕೆ*
ಸಣ್ಣ ಸಣ್ಣ ವಿಚಾರಗಳಿಗೆ ರಾಹುಲ್ ಗಾಂಧಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೂಗುತ್ತಾರೆ. ಈಗ ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು. ಅವರ ಮೌನ ಸತೀಶ್ ಜಾರಕಿಹೊಳಿ ಅವರ ಹೇಳಿಕೆಗೆ ಸಮ್ಮತಿ ಸೂಚಿಸುತ್ತದೆ. ಕಾಂಗ್ರೆಸ್ ಪಕ್ಷ ಬಹುಸಂಖ್ಯಾತ ಹಿಂದೂಗಳಿಗೆ ಧಕ್ಕೆಯಾದರೂ ಕೂಡ ಮಾತನಾಡುವುದಿಲ್ಲ ಎಂದರೆ ಅರ್ಥವೇನು ಎಂದು ಪ್ರಶ್ನಿಸಿದರು.

*ನೆಪ ಮಾತ್ರಕ್ಕಿರುವ ಅಸ್ತಿತ್ವವನ್ನು ಈ ದೇಶದಲ್ಲಿ ಕಾಂಗ್ರೆಸ್ ಕಳೆದುಕೊಳ್ಳಲಿದೆ*
ಸತೀಶ್ ಜಾರಕಿಹೊಳಿ ಅವರು ಇಷ್ಟೆಲ್ಲಾ ಆದರೂ ಕೊಡ ತಮ್ಮ ವಾದವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದು ಅತ್ಯಂತ ಹೇಯ ಕೃತ್ಯ. ಕೂಡಲೇ ಕಾಂಗ್ರೆಸ್ ಪಕ್ಷ ಕ್ಷಮೆಯಾಚಿಸಬೇಕು. ಮತ್ತು ಪಶ್ಚಾತ್ತಾಪ ಪಡಬೇಕು. ಇಲ್ಲದಿದ್ದರೆ ನೆಪ ಮಾತ್ರಕ್ಕಿರುವ ಅಸ್ತಿತ್ವವನ್ನು ಈ ದೇಶದಲ್ಲಿ ಕಾಂಗ್ರೆಸ್ ಕಳೆದುಕೊಳ್ಳಲಿದೆ. ಕಾಂಗ್ರೆಸ್ ನ್ನು ಸಮಗ್ರ ಜನತೆ ಮೂಲೆಯಲ್ಲಿ ಸ್ಥಾನ ತೋರಿಸುತ್ತಾರೆ. ಈ ಹೇಳಿಕೆ ಪೂರ್ವಾಗ್ರಹ ಪೀಡಿತ ಹೇಳಿಕೆ ಮಾತ್ರವಲ್ಲ ಯೋಜನಾಬದ್ದ ಹೇಳಿಕೆ ಎಂದರು.

*ಪ್ರತಿಭಟನೆಯ ಜೊತೆಗೆ ಹೇಳಿಕೆಗಳನ್ನು ನಿಲ್ಲಿಸುವ ಕಾಲ*
ಹಲವಾರು ಜನ ಹಲವಾರು ಪಕ್ಷದವರು ಬೇರೆ ಬೇರೆ ಸಂದರ್ಭಗಳಲ್ಲಿ ಹಿಂದೂ ಭಾವನೆಗಳನ್ನು, ವಿಚಾರ, ಪರಂಪರೆ ಗಳಿಗೆ ಧಕ್ಕೆಯಾಗುವ ರೀತಿಯಲ್ಲಿ, ಮನಸ್ಸಿಗೆ ಘಾಸಿಯಾಗುವ ರೀತಿಯಲ್ಲಿ ನೀಡುವ ಹೇಳಿಕೆಗಳನ್ನು ಗಮನಿಸಿದಾಗ ಪ್ರತಿಭಟನೆಯ ಜೊತೆಗೆ ಇದನ್ನು ನಿಲ್ಲಿಸುವ ಕಾಲ ಬಂದಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

*ತಪ್ಪು ಮಾಡದಿದ್ದರೆ ಭಯ ಯಾಕೆ*
ಸಿಬಿಐ ಕಿರುಕುಳ ಬ್ಯೂರೋ ಆಫ್ ಇಂಡಿಯಾ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ತಪ್ಪು ಮಾಡದಿದ್ದರೆ ಭಯ ಯಾಕೆ ಪಡಬೇಕು. ಏನೇ ತನಿಖೆ ಬಂದರೂ ಸಿದ್ದ ಎಂದು ಒಂದೆಡೆ ಹೇಳುತ್ತಾರೆ, ಇನ್ನೊಂದೆಡೆ ಈ ರೀತಿ ಹೇಳಿಕೆ ನೀಡುತ್ತಾರೆ ಎಂದರು.

*ಗಿಫ್ಟ್*
ಕಾಂಗ್ರೆಸ್ ಸಮಾವೇಶದಲ್ಲಿ ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗೆಲುವಿನ ಉಡುಗೊರೆ ನೀಡುವುದಾಗಿ ಘೋಷಣೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಖರ್ಗೆ ಅವರು ಹಿಂದೂಗಳ ಬಗ್ಗೆ ಎಂದು ಮಾತನಾಡಿದ್ದಾರೆ. ಅವರೂ ಇದರ ಭಾಗ. ಯಾರು ಯಾರಿಗೆ ಗಿಫ್ಟ್ ಕೊಡುತ್ತಾರೆ ನೋಡೋಣ ಎಂದರು.

ಹಿಂದೂ ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ; ಸ್ಪಷ್ಟನೆ ನೀಡಿದ ಶಾಸಕ ಸತೀಶ್ ಜಾರಕಿಹೊಳಿ

https://pragati.taskdun.com/politics/satish-jarakiholiclarificationhindhu-dharma/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button