*ವಿದ್ಯಾರ್ಥಿನಿಯರ ವಸತಿ ನಿಲಯ ಕಾಮಗಾರಿಗೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ*

ಪ್ರಗತಿವಾಹಿನಿ ಸುದ್ದಿ: ನಗರದ ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ವಿದ್ಯಾರ್ಥಿನಿಯರ ನೂತನ ವಸತಿ ನಿಲಯ ಕಾಮಗಾರಿಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಭೂಮಿಪೂಜೆ ನೆರವೇರಿಸಿದರು.
ಇದೇ ವೇಳೆ ಸಚಿವ ಸತೀಶ್ ಜಾರಕಿಹೊಳಿ ಅವರು ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ವಿದ್ಯಾರ್ಥಿನಿಯರ ವಸತಿ ನಿಲಯದ ನೀಲ ನಕ್ಷೆಯನ್ನು ವಿಕ್ಷಿಸಿ, ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿದರು.
ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಪರಮಪೂಜ್ಯ ಶ್ರೀ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ, ಪರಮಪೂಜ್ಯ ಶ್ರೀ ಸದ್ಗುರು ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಪರಮಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಪರಮಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಸತ್ಕರಿಸಿದರು.
ಸಚಿವ ಸತೀಶ್ ಬಗ್ಗೆ ಖುಷಿ ವ್ಯಕ್ತಪಡಿಸಿದ ಗುತ್ತಿಗೆದಾರ: ವಿದ್ಯಾರ್ಥಿನಿಯರ ನೂತನ ವಸತಿ ನಿಲಯ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಇದೇ ವೇಳೆ ವಿಜಯಪುರ ಮೂಲದ ಗುತ್ತಿಗೆದಾರನೊಬ್ಬ ಸಚಿವ ಸತೀಶ್ ಜಾರಕಿಹೊಳಿ ಅವರೊಡನೆ ಮಾತನಾಡಿ ಸರ್, ಲೋಕೋಪಯೋಗಿ ಇಲಾಖೆಯಲ್ಲಿ ಗುತ್ತಿಗೆದಾರರ ಬಾಕಿ ಉಳಿದ ಬಿಲ್ ನಿಮ್ಮ ಪ್ರಯತ್ನದಿಂದ ನಮಗೆ ಸಿಕ್ಕಿದೆ. ನಮ್ಮ ಭಾಗದಲ್ಲಿ ಅನೇಕರು ಕಾಮಗಾರಿ ಮಾಡಿ ಅನೇಕ ವರ್ಷ ಕಳೆದರೂ ಬಿಲ್ ಹಾಗೆ ಉಳಿದಿದ್ದವು. ತಮ್ಮ ಪ್ರಯತ್ನದಿಂದ ನಮ್ಮ ಖಾತೆಗೆ ಬಾಕಿ ಬಿಲ್ ಜಮೆ ಆಗಿದ್ದು, ಕಷ್ಟದಲ್ಲಿದ್ದ ಎಲ್ಲಾ ಗುತ್ತಿಗೆದಾರರು ಖುಷಿಯಾಗಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಾವೇರಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಬಿ. ಆರ್. ಪಟಗುಂದಿ, ಕಾರ್ಯಾಧ್ಯಕ್ಷ ಎಫ್. ವಿ. ಮಾನ್ವಿ ಸೇರಿದಂತೆ ಇತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ