ಇದು ಲೋಕಲ್ ಸಮಸ್ಯೆ, ದಿಲ್ಲಿಯಲ್ಲಿ ಕುಳಿತು ಚರ್ಚೆ ಮಾಡುವುದೇನಿದೆ?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯ ಮಣಗುತ್ತಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಸ್ಥಳಾಂತರಿಸಿರುವುದರ ಹಿಂದೆ ಸ್ಥಳೀಯ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಅವರ ಕೈವಾಡವಿದೆ ಎಂದು ಮುಂಬೈ ಬಿಜೆಪಿ ಶಾಸಕ ಹಾಗೂ ಮಾಜಿ ಮುಂಬೈ ಬಿಜೆಪಿ ಅಧ್ಯಕ್ಷ ಆಶಿಶ್ ಶೆಲಾರ್ ಆರೋಪಿಸಿದ್ದಾರೆ.
ಶಿವಾಜಿ ಮಹಾರಾಜರ ಅವಮಾನ ಈ ದೇಶದಲ್ಲಿ ಯಾರೂ ಮಾಡಬಾರದು ಅದನ್ನು ನಾವು ಮಾಡಲು ಬಿಡುವುದಿಲ್ಲ. ಇದರ ಹಿಂದೆ ಸ್ಥಳೀಯ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಅವರ ಕೈವಾಡವಿದೆ. ಸಂಜಯ್ ರಾವುತ್ ನೀವು ಮತ್ತು ಶಿವಸೇನೆ ಕಾಂಗ್ರೆಸ್ ವರ್ಕಿಂಗ್ ಪ್ರೆಸಿಡೆಂಟ್ ಸತೀಶ್ ಜಾರಕಿಹೊಳಿ ವಿರುದ್ಧ ಆಂದೋಲನ ಮಾಡುವಿರಾ? ಇದು ನಿಮಗೆ ನೇರ ಸವಾಲಾಗಿದೆ. ಶಿವಾಜಿ ಮಹಾರಾಜರಿಗಾಗಿ ಆಂದೋಲನ ಮಾಡುವುದಿದ್ದಲ್ಲಿ ಪ್ರತಿಪಕ್ಷದ ಅಥವಾ ಬಿಜೆಪಿ ಪಕ್ಷದ ಅನುಮತಿ ಪಡೆಯುವ ಅಗತ್ಯವೇನಿದೆ? ಇದಕ್ಕೆ ಉತ್ತರ ಕೂಡ ನೀವೇ ನೀಡಬೇಕಾಗಿದೆ ಎಂದು ಶೆಲಾರ್ ಹೇಳಿದ್ದಾರೆ.
ಶಿವಾಜಿ ಮಹಾರಾಜರ ಪ್ರತಿಮೆಯನ್ನು ತಹಶೀಲ್ದಾರರು ಮತ್ತು ಪೊಲೀಸರು ಹೇಳಿದ ಅದೇ ಜಾಗದಲ್ಲಿ ಪ್ರತಿಷ್ಠಾಪಿಸಬೇಕೆಂದು ಕರ್ನಾಟಕ ಸರ್ಕಾರಕ್ಕೆ ನಾವು ವಿನಂತಿಸಿಕೊಳ್ಳುತ್ತೇವೆ. ಶಿವಸೇನಾ ಆಂದೋಲನ ಮಾಡಲೀ, ಕಾಂಗ್ರೆಸ್ ವಿರುದ್ಧ ಮಾಡುತ್ತದೆಯೇ ಎಂಬುದನ್ನು ಮಾತ್ರ ತಿಳಿಸಲಿ ಎಂದಿದ್ದಾರೆ ಮುಂಬೈ ಬಿಜೆಪಿ ಶಾಸಕ ಹಾಗೂ ಮಾಜಿ ಮುಂಬೈ ಬಿಜೆಪಿ ಅಧ್ಯಕ್ಷ ಆಶಿಶ್ ಶೆಲಾರ್.
ಸತೀಶ್ ಜಾರಕಿಹೊಳಿ ತಿರುಗೇಟು
ಆಶಿಶ್ ಶೆಲಾರ್ ಹೇಳಿಕೆಗೆ ತಿರುಗೇಟು ನೀಡಿರುವ ಯಮಕನಮರಡಿ ಶಾಸಕ ಹಾಗೂ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಇದು ಸ್ಥಳೀಯ ಸಮಸ್ಯೆಯಾಗಿದೆ, ಊರವರೇ ಚರ್ಚಿಸಿ ಬಗೆಹರಿಸುತ್ತಾರೆ ಎಂದಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆ ಸನಿಹವಿದೆ. ಆದ್ದರಿಂದ ಇದೆಲ್ಲ ವಿಷಯಗಳನ್ನು ತೆಗೆಯಲಾಗುತ್ತಿದೆ. ನಾವೆ ಪ್ರಪ್ರಥಮ ಬಾರಿ ಮರಾಠಿಗರಿಗೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರನ್ನಾಗಿ ಮಾಡಿದ್ದೇವೆ. ಬೆಳಗಾವಿ ಜಿಲ್ಲೆಯ ಕಡೋಲಿ ಗ್ರಾಮದಲ್ಲಿ ಐವತ್ತು ಲಕ್ಷ ಖರ್ಚು ಮಾಡಿ ಶಿವಾಜಿ ಮಹಾರಾಜರ ಬೃಹತ್ ಪ್ರತಿಮೆಯನ್ನು ನಾವೇ ಸ್ಥಾಪಿಸಿದ್ದೇವೆ. ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅದನ್ನು ಉದ್ಘಾಟಿಸಲಾಗಿತ್ತು. ಇದು ಲೋಕಲ್ ಸಮಸ್ಯೆ, ದಿಲ್ಲಿಯಲ್ಲಿ ಕುಳಿತು ಚರ್ಚೆ ಮಾಡುವುದೇನಿದೆ? ಮತ್ತು ಶಾಸಕರು ಏನು ಮಾಡುತ್ತಾರೆ? ಆರೋಪ ಮಾಡಿದ ಶಾಸಕ ಅಶೀಶ್ ಶೇಲಾರ್ ಕೂಡ ಬಿಜೆಪಿಯವರೇ ಆಗಿದ್ದಾರೆ. ಕರ್ನಾಟಕದಲ್ಲಿ ಕೂಡ ಬಿಜೆಪಿ ಸರ್ಕಾರ ಇದೆ. ಅವರೇ ಮುಖ್ಯಮಂತ್ರಿ ಅವರನ್ನು ವಿಚಾರಿಸಲಿ ಎಂದು ಸ್ಥಳೀಯ ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸುಶಾಂತ್ ಸಿಂಗ್ ಪ್ರಕರಣ ವಿಷಯಾಂತರಕ್ಕೆ ಮಹಾರಾಷ್ಟ್ರದಲ್ಲಿ ಮಣಗುತ್ತಿ ಪ್ರಕರಣ! – ಶಿವಸೇನೆಯ ನಾಚಿಕೆಗೇಡಿನ ರಾಜಕಾರಣ
ಕರ್ನಾಟಕದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಲು ಮಹಾರಾಷ್ಟ್ರ ಯತ್ನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ