*ದೇವಾಲಯಗಳ ಅಭಿವೃದ್ಧಿಗೆ ಐತಿಹಾಸಿಕ ಕಾನೂನು: ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸೋದ್ಯಮದ ಸ್ವರೂಪ*

ರೇಣುಕಾ ಯಲ್ಲಮ್ಮ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ: ಡಿಸಿಎಂ ಹೇಳಿದ್ದೇನು?
ಪ್ರಗತಿವಾಹಿನಿ ಸುದ್ದಿ: ಸವದತ್ತಿಯ ರೇಣುಕಾ ಯಲ್ಲಮ್ಮ ಶ್ರೀ ಕ್ಷೇತ್ರದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ದುಃಖವನ್ನು ದೂರ ಮಾಡುವ ತಾಯಿ ದುರ್ಗಾದೇವಿ. ಆಕೆಯ ಸ್ವರೂಪಿ ಎಲ್ಲರನ್ನು ಕಾಪಾಡುವ ತಾಯಿ ಯಲ್ಲಮ್ಮ ದೇವಿ. ಈ ತಾಯಿಯನ್ನು ಪ್ರಾರ್ಥಿಸಿ ಈ ಪವಿತ್ರವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇವೆ ಎಂದರು.
ನಿನ್ನೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಇಂದು ಈ ಪವಿತ್ರವಾದ ಜಾಗಕ್ಕೆ ಬಂದು ಯಲ್ಲಮ್ಮ ದೇವಿಯ ಪ್ರಾರ್ಥನೆ ಮಾಡಿರುವುದು ನಮ್ಮ ಭಾಗ್ಯ. ನಮ್ಮ ಕಷ್ಟ ಸುಖಗಳನ್ನು ದೇವರ ಬಳಿ ಹೇಳಿಕೊಳ್ಳಲು ನಾವು ದೇವಾಲಯಕ್ಕೆ ಬರುತ್ತೇವೆ.
ವಿವೇಕಾನಂದರು ಒಂದು ಮಾತು ಹೇಳಿದ್ದಾರೆ. ಅದೃಷ್ಟವಂತ ಎಂದರೆ ಅವಕಾಶ ಪಡೆಯುವವನಲ್ಲ, ಅವಕಾಶವನ್ನು ಸೃಷ್ಟಿಸುವವನು. ಅದೇ ರೀತಿ ಹೆಚ್.ಕೆ ಪಾಟೀಲ್ ಅವರು ತಮಗೆ ಸಿಕ್ಕ ಪ್ರವಾಸೋದ್ಯಮ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಈ ದೇವಾಲಯ ಮುಜರಾಯಿ ಇಲಾಖೆ ಅಡಿಯಲ್ಲಿ ನಡೆದುಕೊಂಡು ಹೋಗುತ್ತಿತ್ತು. ಆದರೆ ಇದಕ್ಕೆ ಪ್ರವಾಸೋದ್ಯಮದ ಸ್ವರೂಪ ನೀಡಬೇಕು, ಸಾರ್ವಜನಿಕರಿಗೆ ಅನುಕೂಲ ಆಗಬೇಕು ಎಂದು ವಿವಿಧ ಕಾರ್ಯಕ್ರಮಗಳ ಮೂಲಕ ಪಾಟೀಲ್ ಅವರು ಸ್ವರೂಪ ನೀಡಿದ್ದಾರೆ.
ನಮ್ಮ ನಾಯಕರೆಲ್ಲರೂ ಸೇರಿ ಈ ಪವಿತ್ರ ಸ್ಥಳದಲ್ಲಿ ಯಾವ ರೀತಿ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಬಹುದು, ಈ ದೇವಿಯ ಬಡ ಭಕ್ತಾದಿಗಳಿಗೆ ಯಾವ ರೀತಿ ಸೌಲಭ್ಯ ಕಲ್ಪಿಸಬಹುದು ಎಂದು ಚರ್ಚೆ ಮಾಡಿದೆವು.
ಈ ಕ್ಷೇತ್ರ ಧಾರ್ಮಿಕತೆಯ ಜತೆಗೆ ಪ್ರವಾಸಿ ತಾಣವಾಗಿ ಮಾಡಲು ಹೆಚ್.ಕೆ ಪಾಟೀಲ್ ಅವರು ಮುಂದಾಗಿದ್ದಾರೆ. ಇನ್ನು ಮುಜರಾಯಿ ಇಲಾಖೆ ಜವಾಬ್ದಾರಿ ವಹಿಸಿಕೊಂಡಿರುವ ರಾಮಲಿಂಗಾ ರೆಡ್ಡಿ ಅವರು ಐತಿಹಾಸಿಕ ಕಾನೂನು ತಂದಿದ್ದಾರೆ.
ದೊಡ್ಡ ದೇವಾಲಯಗಳ ಆದಾಯವನ್ನು ಸಣ್ಣ ಪುಟ್ಟ ದೇವಾಲಯಗಳ ಅಭಿವೃದ್ಧಿಗೆ ವಿನಿಯೋಗಿಸಬೇಕು ಎಂದು ಕಾನೂನು ತಂದಿದ್ದಾರೆ. ಅರ್ಚಕರ ಪ್ರಭಾವದಿಂದ ನಾವು ಶಿಲೆಯಲ್ಲೂ ಶಿವನನ್ನು ಕಾಣುತ್ತೇವೆ. ದೇವಾಲಯಗಳ ಅರ್ಚಕರಿಗೆ ವಿಮೆ ಸೌಲಭ್ಯ, ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ, 1,500 ಸಣ್ಣ ದೇವಾಲಯಗಳ ಜೀರ್ಣೋದ್ಧಾರಕ್ಕೆ 5-10 ಲಕ್ಷ ನೀಡಲು ಮುಂದಾಗಿದ್ದಾರೆ.
ಈ ವಿಧೇಯಕಕ್ಕೆ ಬಿಜೆಪಿಯವರು ವಿರೋಧ ವ್ಯಕ್ತಪಡಿಸಿದ್ದು, ರಾಜ್ಯಪಾಲರ ಮೂಲಕ ನಿಲ್ಲಿಸಿದ್ದಾರೆ. ಇದು ನ್ಯಾಯವೇ? ನಿಮ್ಮನ್ನು ಈ ತಾಯಿ ಯಲ್ಲಮ್ಮ ರಕ್ಷಣೆ ಮಾಡುವುದಿಲ್ಲ. ನೀವು ಈ ಬಗ್ಗೆ ಉತ್ತರ ನೀಡಬೇಕು. ಈ ಹಿಂದೆ ಬಂಗಾರಪ್ಪನವರ ಕಾಲದಲ್ಲಿ ಆರಾಧನಾ ಯೋಜನೆ ಮೂಲಕ ಸಣ್ಣ ದೇವಾಲಯಗಳ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಿದ್ದರು.
ಬಿಜೆಪಿ ಸ್ನೇಹಿತರು ದೇವರು, ಧರ್ಮವನ್ನು ತಮ್ಮ ಆಸ್ತಿ ಎಂದು ಭಾವಿಸಿದ್ದಾರೆ. ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ನಾನು ಆಗಾಗ್ಗೆ ಹೇಳುತ್ತಿರುತ್ತೇನೆ. ಬಿಜೆಪಿಯವರು ಸದಾ ಧರ್ಮದಲ್ಲಿ ರಾಜಕಾರಣ ಮಾಡುತ್ತಿರುತ್ತಾರೆ.
ಕಾಂಗ್ರೆಸ್ ಸರ್ಕಾರ ಮುಜರಾಯಿ ಇಲಾಖೆ ಮೂಲಕ ನಮ್ಮ ದೇವಾಲಯಗಳು ಹಾಗೂ ಧರ್ಮ ರಕ್ಷಣೆ ಮಾಡಿಕೊಂಡು ಬಂದಿದೆ. ಧರ್ಮ ಯಾರೊಬ್ಬರ ಸ್ವತ್ತೂ ಅಲ್ಲ. ಧರ್ಮ ಅವರವರ ವೈಯಕ್ತಿಕ ವಿಚಾರ. ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವರೊಬ್ಬ ನಾಮ ಹಲವು. ನೀವು ಯಾವುದೇ ದೈವವನ್ನು ಆರಾಧಿಸಿ ಧರ್ಮ ಪಾಲನೆ ಮಾಡಬಹುದು.
ಈ ಕ್ಷೇತ್ರದ ಮೇಲೆ ಜನರಿಗೆ ಇರುವ ನಂಬಿಕೆಯಿಂದ ಕೋಟ್ಯಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ದೇವಿಯ ಬಳಿ ಪ್ರಾರ್ಥನೆ ಮಾಡಿದರೆ ಕಷ್ಟ ಬಗೆಹರಿಯುತ್ತದೆ, ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ನೂರಾರು ಕಿ.ಮೀ ದೂರದಿಂದ ಭಕ್ತರು ಆಗಮಿಸುತ್ತಾರೆ.
ನಾವು ಜನರಿಗೆ ಮಾತು ಕೊಟ್ಟಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಈ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಲು ಶಕ್ತಿ ನೀಡುವಂತೆ ಯಲ್ಲಮ್ಮನ ಪ್ರತಿರೂಪಿಯಾದ ತಾಯಿ ಚಾಮುಂಡೇಶ್ವರಿ ಬಳಿ ಪ್ರಾರ್ಥನೆ ಮಾಡಿ ಪೂಜೆ ಸಲ್ಲಿಸಿದ್ದೆವು. ನಮ್ಮ ಶಕ್ತಿ ಯೋಜನೆ ಮೂಲಕ ಮಹಿಳೆಯರು ರಾಜ್ಯದ ಮೂಲೆ ಮೂಲೆಯಲ್ಲಿ ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ನಿಮ್ಮ ಮನೆಯಲ್ಲಿ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಬೆಳಗುತ್ತಿದೆ. ಫಲಾನುಭವಿಗಳಿಗೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆ ತಲುಪುತ್ತಿದೆ. ಗೃಹಲಕ್ಷ್ಮಿ ಯೋಜನೆ ಹಣ ಒಂದೆರಡು ತಿಂಗಳು ಹಿಂದೆ ಮುಂದೆಯಾದರೂ ಕಳೆದ ಒಂದೂವರೆ ವರ್ಷದಿಂದ ಹಣ ಬರುತ್ತಿದೆ. ಈ ಯೋಜನೆಯ ಹಣದಿಂದ ಮಹಿಳೆಯರು ಫ್ರಿಡ್ಜ್, ಟಿವಿ, ಚಿನ್ನದ ಸರ ಖರೀದಿ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ವೆಚ್ಚ ಮಾಡಿದ್ದಾರೆ. ಈ ಯೋಜನೆ ಜಾರಿ ನಂತರ ರಾಜ್ಯದ ಮಹಿಳೆಯರು ಸರ್ಕಾರಕ್ಕೆ ಆಶೀರ್ವಾದ ಸಿಗಲಿ ಎಂದು ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಇಟ್ಟುಕೊಂಡಿದ್ದಾರೆ ಎಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ದೇವಾಲಯಗಳ ಹುಂಡಿಗಳು ತುಂಬುತ್ತಿವೆ.
ಬಡವರಿಗಾಗಿ ಇಂತಹ ಒಂದೇ ಒಂದು ಕಾರ್ಯಕ್ರಮವನ್ನು ಬಿಜೆಪಿ ಸರ್ಕಾರ ಕೈಗೊಂಡಿಲ್ಲ. ಸಿದ್ದರಾಮಯ್ಯ ಅವರು ಕೋಟ್ಯಂತರ ರೂಪಾಯಿ ಅನುದಾನ ನೀಡಿ ಈ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದು, ಅವರೇ ಲೋಕಾರ್ಪಣೆ ಮಾಡುತ್ತಿದ್ದಾರೆ. ಇಂತಹ ಅದೃಷ್ಟ ಎಷ್ಟು ಜನರಿಗೆ ಸಿಗುತ್ತದೆ? ಯಡಿಯೂರಪ್ಪ, ಬೊಮ್ಮಾಯಿ ಅವರು ಯಾಕೆ ಈ ಕೆಲಸ ಮಾಡಲಿಲ್ಲ?
ನಾವು ಬಡವರ ಪರವಾಗಿ ಇರುವವರು, ಭಕ್ತ ಹಾಗೂ ಭಗವಂತನ ನಡುವಣ ಸಂಬಂಧದಂತೆ ಈ ಸರ್ಕಾರಕ್ಕೂ ಬಡವರ ನಡುವಿನ ಸಂಬಂಧವಿದೆ.
ಈ ಕ್ಷೇತ್ರದಲ್ಲಿ ಕೆಲಸ ಮಾಡುವ ವಿಶ್ವಾಸ್ ವೈದ್ಯ ಅವರಿಗೆ ಅವಕಾಶ ಕೊಟ್ಟ ನಿಮಗೆ ನಮಸ್ಕಾರ ತಿಳಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಇವರು ಹಗಲು, ರಾತ್ರಿ ನಿಮ್ಮ ಅಭಿವೃದ್ಧಿಯ ಬಗ್ಗೆ ಆಲೋಚನೆ ಮಾಡುತ್ತಾರೆ. ನಿಮ್ಮ ಭಕ್ತಿಯೇ ಅವರ ಶಕ್ತಿ. ಇಡೀ ಸರ್ಕಾರ ಅವರಿಗೆ ಬೆಂಬಲವಾಗಿ ನಿಲ್ಲಲಿದೆ. ಅವರು ಪ್ರಾಮಾಣಿಕವಾಗಿ ನಿಮ್ಮ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಆಶೀರ್ವಾದ ಸದಾ ನಿಮ್ಮ ಸರ್ಕಾರದ ಮೇಲಿರಲಿ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ