Latest

ಯುವರಾಜನ ಮೊಬೈಲ್ ನಲ್ಲಿ ಸವದಿ, ನಿರಾಣಿ, ಸೋಮಣ್ಣ, ವೇಣುಗೋಪಾಲ್ ಫೋಟೋ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಂಗಳೂರು ಸಿಸಿಬಿ ಪೊಲೀಸರಿಂದ ಬಂಧಿಸಲ್ಪಟ್ಟಿರುವ ವಂಚನೆ ಆರೋಪಿ ಯುವರಾಜನ ಮೊಬೈಲ್ ನಲ್ಲಿ ಹಲವಾರು ರಾಜಕಾರಣಿಗಳ ಫೋಟೋ ಸಿಕ್ಕಿದ್ದು, ಕುತೂಹಲ ಮೂಡಿಸಿದೆ.

ತನಗೆ ಬಿಜೆಪಿಯ ದೊಡ್ಡ ದೊಡ್ಡ ನಾಯಕರ ಸಂಪರ್ಕವಿದೆ. ಎಲ್ಲ ಕೆಲಸಗಳನ್ನೂ ಮಾಡಿಸಿಕೊಡುತ್ತೇನೆ ಎಂದು ಹೇಳಿ ಸಾವಿರಾರು ಜನರಿಗೆ ವಂಚಿಸಿರುವ ಆರೋಪ ಹೊತ್ತಿರುವ ಯುವರಾಜ ಸ್ವಾಮಿ ಎನ್ನುವಾತನನ್ನು ಈಗಾಗಲೆ ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವತಃ ಯುವರಾಜನ ಬಂಧನಕ್ಕೆ ಸೂಚನೆ ನೀಡಿದ್ದರು. ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ತನಗೆ ಗೊತ್ತು ಎಂದು ಹೇಳಿಕೊಂಡು ಹಲವರನ್ನು ವಂಚಿಸಿ, ನೂರಾರು ಕೋಟಿ ರೂ. ಸಂಪಾದಿಸಿದ್ದ ಆರೋಪ ಯುವರಾಜನ ಮೇಲಿದೆ.

ಯುವರಾಜ ನಟಿ ರಾಧಿಕಾ ಕುಮಾರಸ್ವಾಮಿಗೆ 75 ಲಕ್ಷ ರೂ. ನೀಡಿದ್ದು ಈಗಾಗಲೆ ಬಹಿರಂಗವಾಗಿದ್ದು, ಈ ವಿಷಯದಲ್ಲೂ ಹಲವಾರು ಮಹತ್ವದ ಸಂಗತಿಗಳು ಹೊರಬರಬೇಕಿದೆ. ತನಗೆ ಸಿನೇಮಾ ಒಂದಕ್ಕೆ ಅಡ್ವಾನ್ಸ್ ಹಣ ನೀಡಿದ್ದ ಎಂದು ರಾಧಿಕಾ ಹೇಳಿಕೆ ನೀಡಿದ್ದಾರೆ.

ಇದೀಗ ಖಾಸಗಿ ಟಿವಿ ಏಷ್ಯಾನೆಟ್ ಸುವರ್ಣ ವಾಹಿನಿ ಒಂದಿಷ್ಟು ಫೋಟೋಗಳನ್ನು ಬಹಿರಂಗಪಡಿಸಿದೆ. ಯುವರಾಜನ ಮೊಬೈಲ್ ನಲ್ಲಿ ಇರುವ ಫೋಟೋಗಳು ಇವು ಎಂದು ಹೇಳಲಾಗಿದ್ದು, ಅನೇಕ ರಾಜಕಾರಣಿಗಳು ಇದ್ದಾರೆ.

ರಾಧಿಕಾ ಕುಮಾರಸ್ವಾಮಿ ಜೊತೆಗೆ ಮಾಜಿ ಸಚಿವ ಮುರುಗೇಶ ನಿರಾಣಿ ಇರುವ ಫೋಟೋ ಯುವರಾಜನ ಮೊಬೈಲ್ ನಲ್ಲಿ ಸಿಕ್ಕಿದೆ. ರಾಧಿಕಾ ಭೇಟಿ ವೇಳೆ ಯುವರಾಜ ಏಕೆ ಇದ್ದ? ಅವನ ಮಬೈಲ್ ನಲ್ಲಿ ಫೋಟೋ ಹೇಗೆ ಬಂತು ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ಸಿಕ್ಕಿರುವ ಆಡಿಯೋ ಒಂದರಲ್ಲಿ ಉತ್ತರ ಕರ್ನಾಟಕದ ರಾಜಕಾರಣಿಯೊಬ್ಬರನ್ನು ಯುವರಾಜ ರಾಧಿಕಾಗೆ ಭೇಟಿ ಮಾಡಿಸುವ ಪ್ರಸ್ತಾಪವಿತ್ತು. ಅದಕ್ಕೂ ಈ ಫೋಟೋಕ್ಕೂ ಸಂಬಂಧವಿದೆಯಾ ಎನ್ನುವುದು ಕೂಡ ಗೊತ್ತಾಗಬೇಕಿದೆ.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಯುವರಾಜನ ಮನೆಯಲ್ಲಿರುವ ಫೋಟೋ ಕೂಡ ಅದರಲ್ಲಿ ಪತ್ತೆಯಾಗಿದೆ. ಯುವರಾಜ, ಆತನ ಪತ್ನಿ ಮತ್ತು ರಾಧಿಕಾರಿ ಕುಮಾರಸ್ವಾಮಿಯ ಸಹೋದರನ ಹೋಲಿಕೆ ಇರುವ ಇನ್ನೋರ್ವ ವ್ಯಕ್ತಿ ಆ ಫೋಟೋದಲ್ಲಿದ್ದು, ಲಕ್ಷ್ಮಣ ಸವದಿಯನ್ನು ಸನ್ಮಾನಿಸಿ ಜೊತೆಯಲ್ಲಿ ಫೋಟೋ ತೆಗೆಯಲಾಗಿದೆ.

ವಸತಿ ಸಚಿವ ವಿ.ಸೋಮಣ್ಣ ಯುವರಾಜನ ಮನೆಯಲ್ಲಿ ಆತಿಥ್ಯ ಸ್ವೀಕರಿಸುವ ಫೋಟೋ ಕೂಡ ಯುವರಾಜನ ಮೊಬೈಲ್ ನಲ್ಲಿ ಪತ್ತೆಯಾಗಿದೆ. ಬೆಳ್ಳಿ ತಟ್ಟೆಯಲ್ಲಿ ಸೋಮಣ್ಣಗ್ಗೆ ಊಟ ಬಡಿಸಲಾಗಿದೆ.

ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಕೂಡ ಯುವರಾಜನ ಜೊತೆಗಿರುವ ಫೋಟೋವನ್ನು ಟಿವಿ ವಾಹಿನಿ ಬಹಿರಂಗಪಡಿಸಿದೆ.

ಈ ರಾಜಕಾರಣಿಗಳಿಗೆಲ್ಲ ಅವರ ಕೆಲಸ ಮಾಡಿಕೊಡುವುದಾಗಿ, ದೊಡ್ಡ ದೊಡ್ಡ ಹುದ್ದೆ ಕೊಡಿಸುವುದಾಗಿ ಹೇಳಿ ಯುವರಾಜ ಹಣ ಪಡೆದಿದ್ದಾನೆಯೇ ಎನ್ನುವ ವಿಷಯ ಬಹಿರಂಗವಾಗಬೇಕಿದೆ. ಅಥವಾ ಇವರೊಂದಿಗೆಲ್ಲ ತನಗೆ ಸಂಪರ್ಕವಿದೆ ಎಂದು ಹೇಳಿಕೊಳ್ಳಲೋಸುಗ ಕರೆಸಿ ಫೋಟೋ ತೆಗೆಸಿಕೊಂಡಿದ್ದಾನೋ ಗೊತ್ತಾಗಿಲ್ಲ.

ಕೆಲವರಿಗೆ ಸಚಿವಸ್ಥಾನದ ಆಮಿಷ, ಕೆಲವರಿಗೆ ಇನ್ನೂ ಏನೇನೋ ಹುದ್ದೆಗಳ ಆಮಿಷವೊಡ್ಡಿ ಯುವರಾಜ ಕೋಟಿ ಕೋಟಿ ಹಣ ಪಡೆದಿರುವ ಆರೋಪವಿದ್ದು, ಈ ಕುರಿತು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button